ಬೆಂಗಳೂರಿನ ಉಪಕಾರ್ ಲೇಔಟ್‌ನಲ್ಲಿ ರಾತ್ರಿ ವೇಳೆ ಸಾಕು ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ಮಹಿಳೆಗೆ, ನಾಯಿ ಮುಟ್ಟುವ ನೆಪದಲ್ಲಿ ಯುವಕನೊಬ್ಬ ಲೈంగಿಕ ಕಿರುಕುಳ ನೀಡಿ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು 19 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು(ನ.20): ಸಾಕು ನಾಯಿಯ ಜೊತೆ ರಾತ್ರಿ ವಾಕಿಂಗ್‌ಗೆ ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯ ಹೆಸರು ವಿಘ್ನೇಶ್ (19), ಬ್ಯಾಡರಹಳ್ಳಿ ನಿವಾಸಿಯಾಗಿರುವ ಆರೋಪಿ ಇದೇ ನವೆಂಬರ್ 7ರಂದು ರಾತ್ರಿ ಸುಮಾರು 10:30ರ ವೇಳೆ ಕೃತ್ಯ ಎಸಗಿದ್ದಾನೆ. ಉಪಕಾರ್ ಲೇಔಟ್‌ನಲ್ಲಿ ಮಹಿಳೆ ತಮ್ಮ ಪ್ರೀತಿಯ ಸಾಕು ನಾಯಿಯ ಜೊತೆ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಮಹಿಳೆಯ ಬಳಿ ಬಂದ ಆರೋಪಿ ವಿಘ್ನೇಶ್ 'ನಿಮ್ಮ ನಾಯಿ ತುಂಬಾ ಚೆನ್ನಾಗಿದೆ, ಮುಟ್ಟಬಹುದೇ?' ಎಂದು ಕೇಳಿದ್ದಾನೆ. ಮಹಿಳೆ ಸಮ್ಮತಿ ತಿಳಿಸಿದ ಬಳಿಕ ನಾಯಿಯನ್ನು ಮುಟ್ಟುವ ನೆಪದಲ್ಲಿ ಆಕೆಯ ದೇಹದ ಸೂಕ್ಷ್ಮ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಯುವಕನ ಕೃತ್ಯಕ್ಕೆ ಮಹಿಳೆಗೆ ಆಘಾತ:

19 ವರ್ಷದ ಎಳೆ ಹುಡುಗನ ಕೃತ್ಯಕ್ಕೆ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಯುವಕನ ದುರ್ವರ್ತಗೆ ಮಹಿಳೆ ಗಾಬರಿಯಾಗಿ ಕೈಯಲ್ಲಿದ್ದ ಮೊಬೈಲ್ ಫೋನ್ ಕೆಳಗೆ ಬೀಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಕೆಳಗೆ ಬಿದ್ದ ಮಹಿಳೆಯ ಫೋನ್ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್‌ ಠಾಣೆಗೆ ಮಹಿಳೆ ದೂರು:

ಮಹಿಳೆ ತಕ್ಷಣ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ. ಇದೇ ರೀತಿ ಬೇರೆ ಯಾರಿಗಾದರೂ ಕಿರುಕುಳ ನೀಡಿದ್ದಾನೆಯೇ? ಕಳ್ಳತನ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.