ಬಳ್ಳಾರಿಯಲ್ಲಿ ಯುವಕನೊಬ್ಬನ ಮೇಲೆ 10 ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಫೋಟೋವನ್ನು ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಾಯಾಳು ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಳ್ಳಾರಿ (ಆ.3): ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಸಮೀಪದ ಐಟಿಐ ಕಾಲೇಜು ಮೈದಾನದಲ್ಲಿ ದೊಡ್ಡಬಸವ (19) ಎಂಬ ಯುವಕನ ಮೇಲೆ 10 ಜನರ ಪುಂಡರ ಗ್ಯಾಂಗ್ ಸಿನಿಮೀಯ ಶೈಲಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ ಎಲ್ಲಾ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕ್ರಿಕೆಟ್ ಬ್ಯಾಟ್ ಮತ್ತು ಬೆಲ್ಟ್‌ನಿಂದ ಯುವಕನನ್ನು ಮೃಗೀಯವಾಗಿ ಥಳಿಸಿದ್ದಾರೆ. ಘಟನೆಗೆ ಕಾರಣವೆಂದರೆ, ದೊಡ್ಡಬಸವ ಒಂದು ಕಾರ್ಯಕ್ರಮದಲ್ಲಿ ತೆಗೆದ ಅಪ್ರಾಪ್ತೆಯ ಫೋಟೋವನ್ನು ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಇಟ್ಟಿದ್ದು. ಇದರಿಂದ ಕೋಪಗೊಂಡ ಆರೋಪಿಗಳ ಗುಂಪು ಬೈಕ್‌ನಲ್ಲಿ ಬಂದು ಯುವಕನನ್ನು ಎಳೆದುಕೊಂಡು ಹೋಗಿ, ಎಲ್ಲೆಂದರಲ್ಲಿ ಮನಸೋ ಇಚ್ಛೆ ಹೊಡೆದಿದ್ದಾರೆ. ಕಾಲಿನಿಂದ ಒದ್ದು, ಕೈಗಳಿಂದ ಹಲ್ಲೆ ಮಾಡಿದ್ದಲ್ಲದೇ, ಕ್ರಿಕೆಟ್ ಬ್ಯಾಟ್ ಮತ್ತು ಬೆಲ್ಟ್‌ನಿಂದ ಥಳಿಸಿದ್ದಾರೆ.
ಕಾಲು ಬೀಳ್ತಿನಿ, ಕೈ ಮುಗಿದು ಅಂದ್ರೂ ಕರುಣೆ ತೋರದೇ ದಾಳಿ ಮಾಡಿದ್ದಾರೆ. ಹಲ್ಲೆಯಿಂದ ಯುವಕನ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲುಬು ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆ ಕುರಿತು ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ 10 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
