ಸಂಗಾನಟ್ಟಿ ಗ್ರಾಮದಲ್ಲಿ ಜಮೀನಿನ ಸೀಮೆಯ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಪರಪ್ಪ ನಾಗನೂರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಲಿಂಗಪುರ (ಜೂ.9): ಜಮೀನಿನ ಸೀಮೆಯ ವಿಷಯವಾಗಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ಶನಿವಾರ ಎರಡು ಕುಟುಂಬಗಳ ನಡುವಿನ ವಿವಾದ ವಿಕೋಪಕ್ಕೆ ತಿರುಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸಂಗಾನಟ್ಟಿ ಗ್ರಾಮದ ನಿವಾಸಿ ಪರಪ್ಪ ಮಲ್ಲಪ್ಪ ನಾಗನೂರ (೪೯) ಮೃತ ವ್ಯಕ್ತಿ. ಸಂಗಾನಟ್ಟಿ ಗ್ರಾಮದ ಹಣಮಂತ ಶಂಕ್ರೆಪ್ಪ ನಾಗನೂರ, ಮಹಾನಿಂಗ ಹಣಮಂತ ನಾಗನೂರ, ದಾನವ್ವ ಹ. ನಾಗನೂರ ಆರೋಪಿಗಳು. ಹಣಮಂತ ನಾಗನೂರು ಹಾಗೂ ಅಳಿಯ ಮಹಾನಿಂಗ ಬಸಪ್ಪ ವಗ್ಗರ ಮಧ್ಯೆ ಜಮೀನಿನ ಸೀಮೆಯ ವಿಷಯವಾಗಿ ವಿವಾದ ಇತ್ತು. ಶನಿವಾರ ಇದೇ ವಿಷಯವಾಗಿ ಎರಡು ಕುಟುಂಬಗಳ ಮಧ್ಯೆ ಶನಿವಾರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ.

ಈ ವೇಳೆ ಆರೋಪಿತರಾದ ಹಣುಮಂತ ನಾಗನೂರ, ಮಹಾನಿಂಗ ನಾಗನೂರ ಇವರು ಮಹಾನಿಂಗ ವಗ್ಗರ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದು, ಈ ವೇಳೆ ಹಲ್ಲೆ ತಡೆಯಲು ಬಂದ ಗಂಗಪ್ಪ ನಾಗನೂರ ಇವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ, ಈತನ ಸಹೋದರ ಪರಪ್ಪ ಮಲ್ಲಪ್ಪ ನಾಗನೂರ (19) ಅವನಿಗೆ ಹಣಮಂತ ನಾಗನೂರು ಬಡಿಗೆಯಿಂದ ಹಲ್ಲೆ ನಡೆಸಿದ್ದಾನೆ.

ಗಂಭೀರ ಗಾಯಗೊಂಡಿದ್ದ ಪರಪ್ಪ ನಾಗನೂರ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.