ವಿವಾಹಿತ ಮಹಿಳೆಯೊಂದಿಗೆ ಆರೋಪಿಗೆ ಸ್ನೇಹ, ಬಳಿಕ ಸಂಬಂಧ, ಗೆಳೆಯನಿಗೆ ಆಟೋ ಕೊಡಿಸಿ, ಬಾಡಿಗೆ ಮನೆ ಮಾಡಿಕೊಟ್ಟಿದ್ದಳು, ಇತ್ತೀಚೆಗೆ ಆತನಿಗೆ ಬೇರೆಯೊಬ್ಬಳೊಂದಿಗೆ ಸ್ನೇಹ ಎಂದು ಜಗಳ, ಇದೇ ವಿಚಾರಕ್ಕೆ ಗಲಾಟೆ, ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿದ.
ಬೆಂಗಳೂರು(ಏ.28): ತನ್ನನ್ನು ಬಿಟ್ಟು ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಹೇಳಿ ಗಲಾಟೆ ಮಾಡಿದ್ದಕ್ಕೆ ಕೋಪಗೊಂಡು ವಿವಾಹಿತ ಮಹಿಳೆ ಕುತ್ತಿಗೆಗೆ ನೇಣು ಬಿಗಿದು ಹತ್ಯೆಗೈದಿದ್ದ ಆಟೋ ಚಾಲಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿ ನಿವಾಸಿ ಗಣೇಶ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ತನ್ನ ಮನೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಶರಗುಣಂ (35) ಅವರನ್ನು ನೇಣು ಬಿಗಿದು ಗಣೇಶ್ ಹತ್ಯೆ ಯತ್ನಿಸಿದ್ದ. ಬಳಿಕ ಆಕೆಯನ್ನು ಆರೋಪಿಯೇ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಿಸದೆ ಶರಗುಣಂ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸುಖವಾದ ನಿದ್ರೆಯಿಂದ ಏಳಿಸಿದ ಕಾರಣಕ್ಕೆ ಇಂಟರ್‌ಲಾಕ್‌ನಿಂದ ಬಡಿದು ಸಾಯಿಸಿದ!
ಮೃತ ಶರಗುಣಂ ಮೂಲತಃ ತಮಿಳುನಾಡು ರಾಜ್ಯದವಳಾಗಿದ್ದು, ಕುರುಬರಹಳ್ಳಿಯ ಜೆ.ಸಿ.ನಗರ ಕಾಲೋನಿಯಲ್ಲಿ ತನ್ನ ಪತಿ ಸಿ.ಶಿವಕುಮಾರ್ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದಳು. ಪತಿ ಟೈಲ್ಸ್ ಗುತ್ತಿಗೆದಾರನಾಗಿದ್ದರೆ, ಆಕೆ ಮನೆಗೆಲಸ ಮಾಡುತ್ತಿದ್ದಳು. ಐದು ವರ್ಷಗಳ ಹಿಂದೆ ಆಕೆಗೆ ತಮಿಳುನಾಡು ಮೂಲದ ಗಣೇಶ್ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಗೆಳೆಯನಿಗೆ ಆಟೋ ಕೊಡಿಸಿದ್ದಲ್ಲದೆ ತನ್ನ ಮನೆ ಸಮೀಪವೇ ಆತನಿಗೆ ಬಾಡಿಗೆ ಮನೆಯನ್ನು ಶರಗುಣಂ ಮಾಡಿಕೊಟ್ಟಿದ್ದಳು. ಇತ್ತೀಚೆಗೆ ಗೆಳೆಯನ ಚಾರಿತ್ರ್ಯದ ಮೇಲೆ ಅನುಮಾನಗೊಂಡಿದ್ದ ಆಕೆ, ಪದೇ ಪದೇ ಬೇರೊಬ್ಬಳ ಜತೆ ನಿನಗೆ ಅನೈತಿಕ ಸ್ನೇಹವಿದೆ ಎಂದು ಹೇಳಿ ಗೆಳೆಯನ ಮೇಲೆ ಗಲಾಟೆ ಮಾಡುತ್ತಿದ್ದಳು.
ಇನ್ನು ಈ ಇಬ್ಬರ ನಡುವಿನ ಸ್ನೇಹ ವಿಚಾರ ತಿಳಿದ ಶಿವಕುಮಾರ್, ಗಣೇಶ್‌ನ ಸಂಪರ್ಕ ಕಡಿದುಕೊಳ್ಳುವಂತೆ ಪತ್ನಿಗೆ ತಾಕೀತು ಮಾಡಿದ್ದ. ಆದರೆ ಪತಿಯ ಮಾತಿಗೆ ಕ್ಯಾರೇ ಎನ್ನದೆ ಆಕೆ ತನ್ನ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಎಂದಿನಂತೆ ಕೆಲಸದ ನಿಮಿತ್ತ ಮನೆಯಿಂದ ಪತಿ ಹೊರಹೋದ ಬಳಿಕ ಶರಗುಣಂ, ಏ.25ರಂದು ಮಧ್ಯಾಹ್ನ ತನ್ನ ಗೆಳೆಯನ ಮನೆಗೆ ಹೋಗಿದ್ದಾಳೆ. ಆಗ ಮತ್ತೆ ಪರಸ್ತ್ರೀ ಜತೆ ಗೆಳೆತನ ವಿಚಾರ ಪ್ರಸ್ತಾಪಿಸಿ ಗಣೇಶ್ ಜತೆ ಜಗಳವಾಡಿದ್ದಾಳೆ.
ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದ ಬೇಸತ್ತು ಗೆಳೆಯನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಆಕೆ ಮುಂದಾಗಿದ್ದಾಳೆ. ಈ ಹಂತದಲ್ಲಿ ಗಣೇಶ್, ಗೆಳತಿಯನ್ನು ರಕ್ಷಿಸದೆ ತಾನೇ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಜೀರಿದ್ದಾನೆ. ಬಳಿಕ ಭಯಗೊಂಡು ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ ಆಕೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
