ಮಂಗ್ಳೂರು, ಶಿವಮೊಗ್ಗ ಸ್ಫೋಟ: ಮತ್ತೊಬ್ಬ ಸೆರೆ
ಮಂಗಳೂರಿನ ಮಾಝಿನ್ ಅಬ್ದುಲ್ ಅರೆಸ್ಟ್, ಬೆಂಗಳೂರು ಕಂಪನಿಯಲ್ಲಿ ಕೆಲಸಕ್ಕಿದ್ದ ಈತ, ಬಂಧಿತ ಯುವಕ ಮಂಗಳೂರು ಹೊರವಲಯದ ಬಬ್ಬುಕಟ್ಟೆ ನಿವಾಸಿ, ದೇರಳಕಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ.
ಮಂಗಳೂರು(ಜ.12): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗ ಬಾಂಬ್ ಸ್ಫೋಟ ತಾಲೀಮು ಹಾಗೂ ಐಸಿಸ್ ಉಗ್ರ ಸಂಘಟನೆ ಜತೆ ನಂಟು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬುಧವಾರ ಮತ್ತೊಬ್ಬನನ್ನು ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಮಂಗಳೂರು ಹೊರವಲಯದ ಬಬ್ಬುಕಟ್ಟೆನಿವಾಸಿ ಮಾಝಿನ್ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಮಾಝಿನ್ ಅಬ್ದುಲ್ ರೆಹಮಾನ್ ದೇರಳಕಟ್ಟೆಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದಾನೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಈತ ಬಂಧಿತ ಶಂಕಿತ ಉಗ್ರ ಮಾಝ್ ಮುನೀರ್‌ನ ಸ್ನೇಹಿತನಾಗಿದ್ದ. ಮಾಝ್ ಮುನೀರ್‌ನನ್ನು ಮಂಗಳೂರು ಉಗ್ರ ಪರ ಗೋಡೆ ಬರಹ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಳಿಕ ಎನ್‌ಐಎ ಈತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದೆ.
ಮಂಗಳೂರಲ್ಲಿ ಗಾಂಜಾ ದಂಧೆ ಬಯಲು: ಮೆಡಿಕಲ್ ವಿದ್ಯಾರ್ಥಿನಿಯರ ಸಹಿತ ಹಲವರ ಬಂಧನ..!
ಬೆಂಗಳೂರಲ್ಲಿ ಕೆಲಸದಲ್ಲಿದ್ದ:
ಬಂಧಿತ ಮಾಝಿನ್ ಅಬ್ದುಲ್ ರೆಹಮಾನ್ ನಾಲ್ಕು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದ್ದ. ಅಲ್ಲಿನ ಬೆಳ್ಳಂದೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಉಗ್ರ ಪರ ಕೃತ್ಯಗಳಿಗೆ ಈತ ನೆರವಾಗುತ್ತಿರುವ ಬಗ್ಗೆ ಮಾಝ್ ತನಿಖೆ ವೇಳೆ ಬಾಯಿಬಿಟ್ಟಿದ್ದ. ಅದರಂತೆ ಎನ್‌ಐಎ ತಂಡ ದಾಳಿ ನಡೆಸಿ ಬೆಂಗಳೂರಿನಲ್ಲೇ ಮಾಝಿನ್ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿದೆ. ಬಂಧಿತನಿಂದ ಮೊಬೈಲ್, ಲ್ಯಾಪ್‌ಟಾಪ್ ಸೇರಿ ಕೆಲ ಸೊತ್ತುಗಳನ್ನು ವಶಪಡಿಸಲಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ಈಗಾಗಲೇ ಎನ್‌ಐಎ ತಂಡ ನಾಲ್ವರನ್ನು ಬಂಧಿಸಿದೆ. ಆರೋಪಿಗಳಾದ ಮಾಝ್ ಮುನೀರ್, ಯಾಸಿನ್, ಅಹಮ್ಮದ್ ಶಾರೀಕ್, ರಿಶಾನ್ ತಾಜುದ್ದೀನ್ ಸಿದ್ದಿಕ್ ಬಂಧಿತರು. ಆನಂತರ ಮಂಗಳೂರಲ್ಲಿ ನ.19ರಂದು ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಐಸಿಸ್ ಉಗ್ರ ಸಂಘಟನೆ ಜತೆಗಿನ ಸಂಪರ್ಕದ ಆರೋಪದ ಮೇರೆಗೆ ಎನ್‌ಐಎ ತಂಡ ರಾಜ್ಯದ ಆರು ಕಡೆ ದಾಳಿ ನಡೆಸಿ ಜ.5ರಂದು ಇಬ್ಬರನ್ನು ಬಂಧಿಸಿತ್ತು.
ಹೊನ್ನಾಳಿ ಯುವಕನ ಸೆರೆ ಖಚಿತಪಡಿಸಿದ ಎನ್‌ಐಎ
ಜ.5ರಂದು ಎನ್‌ಐಎ ರಾಜ್ಯದ ಆರು ಕಡೆ ದಾಳಿ ನಡೆಸಿದಾಗ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೇವನಾಯಕನಹಳ್ಳಿಯ ನೂರಾನಿ ಮಸೀದಿ ಪಕ್ಕದ ನಿವಾಸಿ ನದೀಂ ಅಹಮದ್ ಕೆ.ವಿ. ಎಂಬ ಯುವಕನನ್ನೂ ಬಂಧಿಸಿತ್ತು. ಆದರೆ ಆಗ ಆತನ ಹೆಸರು ಬಹಿರಂಗಪಡಿಸಿರಲಿಲ್ಲ. ಇದೀಗ ಎನ್‌ಐಎ ಟ್ವೀಟ್ ಮಾಡಿ ಐಸಿಎಸ್ ಸಂಘಟನೆ ಜತೆಗಿನ ನಂಟಿನ ಹಿನ್ನೆಲೆಯಲ್ಲಿ ನದೀಂ ಬಂಧನವನ್ನು ಖಚಿತಪಡಿಸಿದೆ.