Asianet Suvarna News Asianet Suvarna News

ಮಂಗಳೂರಲ್ಲಿ ಗಾಂಜಾ ದಂಧೆ ಬಯಲು: ಮೆಡಿಕಲ್‌ ವಿದ್ಯಾರ್ಥಿನಿಯರ ಸಹಿತ ಹಲವರ ಬಂಧನ..!

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್‌ಗಳು ಭಾಗಿಯಾಗಿದ್ದು, ಹಲವರನ್ನು ವಶಕ್ಕೆ ಪಡೆದ ಪೊಲೀಸರು. 

Many People Including Medical Students Arrested due to Marijuana Racket in Mangaluru grg
Author
First Published Jan 11, 2023, 1:59 PM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಜ.11):  ಕಡಲ ತಡಿ ಮಂಗಳೂರಿನ ಸಿಸಿಬಿ ಪೊಲೀಸರು ಭಾರೀ ಗಾಂಜಾ ದಂಧೆಯನ್ನು ಬಯಲು ಮಾಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್ ಗಳು ಭಾಗಿಯಾಗಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ  ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರು ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಗಾಂಜಾ ಪೆಡ್ಲರ್‌ಗಳು, ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರ ಬಂಧನ ಮಾಡಲಾಗಿದೆ. ‌ಗಾಂಜಾ ಸೇವನೆ ಹಾಗೂ ಗಾಂಜಾ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ(38) ಎಂಬಾತ ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ರೂಂ ಬಾಡಿಗೆ ಪಡೆದು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಡ್ರಗ್ ಪೆಡ್ಲಿಂಗ್ ಕೇಸ್ ನಲ್ಲಿ ರಾಮ್ ಜೀ ವಶಕ್ಕೆ ಪಡೆದಾಗ ಮತ್ತಷ್ಟು ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ. ಆತನ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವೈದ್ಯರನ್ನು ವಶಕ್ಕೆ ಪಡೆಯಲಾಗಿದೆ. 

ಗಾಂಜಾ ದಂಧೆಕೋರರಿಂದ ಸಿಪಿಐಗೆ ಹಲ್ಲೆ ಕೇಸ್: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23) ಹಾಗೂ ವೈದ್ಯ ಡಾ.ಸಮೀರ್(32), ಮಣಿ‌ಮಾರನ್ ಮುತ್ತು(28), ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34) ಬಂಧನವಾಗಿದೆ. ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧಿಸಲಾಗಿದೆ. ಎರಡು ಕೆ.ಜಿ‌ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. 

ಅಂತರಾಜ್ಯ ವಿದ್ಯಾರ್ಥಿಗಳು: ಲೋಕಲ್ ಪೆಡ್ಲರ್!

ಗಾಂಜಾ ದಂಧೆಯಲ್ಲಿ ಬಂಧಿತನಾದ ಪ್ರಮುಖ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ(38) ಯು.ಕೆ ಪ್ರಜೆಯಾಗಿದ್ದು, ಈತನಿಗೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳದ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34) ಸಾಥ್ ನೀಡಿದ್ದ. ಇನ್ನು‌ ಈ ಇಬ್ಬರು ಸೇರಿಕೊಂಡು ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳನ್ನೇ ಟಾರ್ಗೆಟ್ ಮಾಡಿಕೊಂಡು ವಿದ್ಯಾರ್ಥಿಗಳು ಮತ್ತು ವೈದ್ಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಅದರಲ್ಲೂ ನಾಲ್ವರು ವಿದ್ಯಾರ್ಥಿನಿಯರು ಅರೆಸ್ಟ್ ಆಗಿರೋದು ಆತಂಕ ಮೂಡಿಸಿದೆ. 

Shivamogga: ಕೈದಿ ಬಳಿ ಗಾಂಜಾ ಪತ್ತೆ, ಪೊಲೀಸರಿಗೆ ಹುಟ್ಟಿತು ಹಲವು ಅನುಮಾನ

ಕೇರಳ ಮೂಲದ ಡಾ. ನದಿಯಾ ಸಿರಾಜ್(24) ಕೆ.ಎಂ.ಸಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ನಿಯಾಗಿದ್ದಳು. ಆಂಧ್ರಪ್ರದೇಶದ ಡಾ.ವರ್ಷಿಣಿ ಪ್ರತಿ(26) ಕೆ.ಎಂ.ಸಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ನಿಯಾಗಿದ್ದಳು. ಪಂಜಾಬ್ ಮೂಲದ ಡಾ.ರಿಯಾ ಚಡ್ಡ(22) ಕೆ.ಎಂ.ಸಿ ಡೆಂಟಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್ ಶಿಕ್ಷಣ ಪಡೆಯುತ್ತಿದ್ದಳು. ಮಹಾರಾಷ್ಟ್ರದ ಪುಣೆಯ ಡಾ.ಹೀರಾ ಬಸಿನ್ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. 

ಕೇರಳದ ಮೂಲದ ವೈದ್ಯ ಡಾ.ಸಮೀರ್(32) ಕೆ.ಎಂ‌.ಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆಗಿದ್ದು, ತಮಿಳುನಾಡಿನ ಮಣಿ‌ಮಾರನ್ ಮುತ್ತು(28) ಕೆ.ಎಂ.ಸಿ ಆಸ್ಪತ್ರೆಯ ವೈದ್ಯನಾಗಿದ್ದ. ಇವರ ಜೊತೆಗೆ ವಿದ್ಯಾರ್ಥಿಗಳಾದ ಪಂಜಾಬ್ ನ ಡಾ. ಭಾನು ದಹಿಯಾ(27) ದೇರಳಕಟ್ಟೆಯ ಯೆನೇಪೋಯಾ ಕಾಲೇಜಿನ ವೈದ್ಯ ವಿದ್ಯಾರ್ಥಿಯಾಗಿದ್ದಾನೆ. ದೆಹಲಿ ಮೂಲದ ಡಾ.ಕ್ಷಿತಿಜ್ ಗುಪ್ತ(23) ಕೆ.ಎಂ.ಸಿಯ ವೈದ್ಯ ವಿದ್ಯಾರ್ಥಿಯಾಗಿದ್ದಾನೆ.

Follow Us:
Download App:
  • android
  • ios