Anekal: ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್‌ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.
ಆನೇಕಲ್ (ಜೂ.22): ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್‌ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಉಪವಿಭಾಗದ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶರತ್ ಕುಮಾರ್ (23), ರೂಪೇಶ್ (26) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಶರತ್ ಕುಮಾರ್ ಸರ್ಜಾಪುರದ ಸೋಂಪುರ ನಿವಾಸಿಯಾಗಿದ್ದು, ರೂಪೇಶ್ ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮದವನಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ರಾಬರಿಗೆ ಸಂಚು ರೂಪಿಸಿದ್ದರು. ಚಂದಾಪುರ-ಆನೇಕಲ್ ಮುಖ್ಯರಸ್ತೆಯ ಮರಸೂರು ಸಮೀಪ ರಾತ್ರಿ ವೇಳೆ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಆರೋಪಿಗಳು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಜೀವಭಯದಿಂದ ಚಾಲಕ ಸ್ಥಳದಿಂದ ಓಡಿ ಹೋಗುತ್ತಿದ್ದಂತೆ ಲಾರಿಯನ್ನು ಕೊಂಡೊಯ್ದಿದ್ದಾರೆ. ಇದರ ಹಿಂದೆ ಮತ್ತೊಂದು ಕುತಂತ್ರವೂ ಇತ್ತು. ಲಾರಿಯಲ್ಲಿ ಅಳವಡಿಸಲಾಗಿದ್ದ ಜಿಪಿಆರ್‌ಎಸ್ ಮೂಲಕ ಮಾಲೀಕರು ಅಥವಾ ಚಾಲಕರು ವಾಹನವನ್ನು ಹುಡುಕಿಕೊಂಡು ಬರುತ್ತಾರೆ ಎಂಬುದು ಆರೋಪಿಗಳಿಗೆ ಗೊತ್ತಿತ್ತು. ನಂತರ ವಾಹನ ಹಿಂತಿರುಗಿಸಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಡುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.
ಕ್ಷಿಪ್ರ ಕಾರ್ಯಾಚರಣೆ
ಘಟನೆ ಸಂಬಂಧ ಲಾರಿ ಚಾಲಕ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‌ಪೆಕ್ಟರ್ ಚಂದ್ರಪ್ಪ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ಆರಂಭಿಸಿತು. ತನಿಖೆ ವೇಳೆ ಲಾರಿ ಸರ್ಜಾಪುರದ ಸೋಂಪುರ ಪ್ರದೇಶದಲ್ಲಿರುವ ಮಾಹಿತಿ ದೊರೆತಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಪ್ರಮುಖ ಆರೋಪಿ ಶರತ್ ಕುಮಾರ್ ಈ ಹಿಂದೆಯೂ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೂರ್ಯನಗರ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


