ಬೈಕ್‌ಗೆ ಲಾರಿ ಡಿಕ್ಕಿಯಾಗಿ ಪೋಸ್ಟ್ ವುಮೆನ್ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕಿತ್ತಾಗನಹಳ್ಳಿ ಗೇಟ್ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆನೇಕಲ್ (ನ.08): ಬೈಕ್‌ಗೆ ಲಾರಿ ಡಿಕ್ಕಿಯಾಗಿ ಪೋಸ್ಟ್ ವುಮೆನ್ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕಿತ್ತಾಗನಹಳ್ಳಿ ಗೇಟ್ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಿಯಾ ಎಂಬ ಮಹಿಳೆ ಅಪಘಾತದಲ್ಲಿ ಮೃತಪಟ್ಟ ಪೋಸ್ಟ್ ವುಮೆನ್. ಪೋಸ್ಟ್ ಆಫೀಸ್‌ನಲ್ಲಿ ಪೋಸ್ಟ್ ವುಮೆನ್ ಆಗಿ ಪ್ರಿಯಾ ಕೆಲಸ ಮಾಡ್ತಿದ್ದರು.

ಬೈಕ್‌ನಲ್ಲಿ ಪೋಸ್ಟ್‌ಗಳನ್ನ ಕೊಡಲು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪೋಸ್ಟ್ ವುಮೆನ್ ಪ್ರಿಯಾ ಹೆದ್ದಾರಿಗೆ ಬಿದಿದ್ದು, ಲಾರಿ ಚಕ್ರ ಹರಿದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಇನ್ನು ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಸೂರ್ಯನಗರ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಸಾರಿಗೆ ಬಸ್- ಕಾರಿನ ನಡುವೆ ಭೀಕರ ಅಪಘಾತ

ಸಾರಿಗೆ ಸಂಸ್ಥೆ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಓರ್ವ ವೃದ್ಧೆ, ಬಸ್ ಚಾಲಕ ಮತ್ತು ನಿರ್ವಾಹಕಿ ಸೇರಿದಂತೆ 18 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಚಹಳ್ಳಿ ಸಮೀಪ ಶುಕ್ರವಾರ ಮಧ್ಯಾಹ್ನ ಜರುಗಿದೆ. ಅಪಘಾತದಿಂದಾಗಿ ಮದ್ದೂರು- ತುಮಕೂರು ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು. ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರು ರಾಜರಾಜೇಶ್ವರಿ ನಗರದ ಧರ್ಮರಾಜ್ ಪುತ್ರ ಶಿವಕುಮಾರ್ (45) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಈತನ ಸಂಬಂಧಿ ಯಶೋಧಮ್ಮ ಸಹ ತೀವ್ರವಾಗಿ ಗಾಯಗೊಂಡಿದ್ದು, ಚನ್ನಪಟ್ಟಣ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ ಚಾಲಕ ಇ.ಇ.ಲೋಕೇಶ್, ನಿರ್ವಾಹಕಿ ಯಶೋಧ, ಪ್ರಯಾಣಿಕರಾದ ಸಿ.ಎಂ.ಲಕ್ಷ್ಮೀ, ಮಮತಾ, ಜಯಲಕ್ಷ್ಮಮ್ಮ, ರಂಜನಿ, ಸೌಭಾಗ್ಯ, ಶಾಂತ, ಶೃತಿ, ಭಾಗ್ಯ,ರತ್ನಮ್ಮ, ಯಶೋದಮ್ಮ, ತಾಯಮ್ಮ, ಪಾರ್ವತಮ್ಮ, ಜಯಮ್ಮ, ಚೆನ್ನಮ್ಮ, ಸರೋಜಮ್ಮ ಹಾಗೂ ಚಿಕ್ಕಮ್ಮ ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.