Bengaluru road rage incident: ಬೆಂಗಳೂರಿನ ಬೊಮ್ಮಸಂದ್ರದ ಬಳಿ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನೊಬ್ಬ ಬೊಲೆರೋ ಪಿಕಪ್ ಚಾಲಕನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ದೃಶ್ಯಗಳು ವೈರಲ್ ಆಗಿವೆ.

ಬೆಂಗಳೂರು, (ನ.14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಂಜ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಇತ್ತೀಚೆಗೆ ಹಾರ್ನ್ ಮಾಡಿದ್ದಕ್ಕೆ ಟೆಕ್ಕಿಯೊಬ್ಬ ವಾಹನ ಸವಾರರಿಗೆ ಉದ್ದೇಶಪೂರ್ವಕ ಕಾರು ಡಿಕ್ಕಿ ಹೊಡೆದು ಅಮಾಯಕರ ಜೀವ ಬಲಿ ಪಡೆದಿದ್ದ ಘಟನೆ ಬೆನ್ನಲ್ಲೇ ಇದೀಗ ಆನೇಕಲ್‌ನ ಬೊಮ್ಮಸಂದ್ರ ಮೆಟ್ರೊ ಸ್ಟೇಷನ್ ಸಮೀಪದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಬೊಲೆರೋ ಪಿಕಪ್ ವಾಹನ ಚಾಲಕನ ಮೇಲೆ ಹಲ್ಲೆ:

ಬೈಕ್‌ಗೆ ಸೈಡ್ ಕೊಡಲಿಲ್ಲವೆನ್ನುವ ಕಾರಣಕ್ಕೆ ನಡುರಸ್ತೆಯಲ್ಲಿ ಬೊಲೆರೋ ಪಿಕಪ್ ವಾಹನ ಚಾಲಕನ ಮೇಲೆ ಬೈಕ್ ಸವಾರ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಯ ವಿವರಗಳ ಪ್ರಕಾರ, ಬೊಮ್ಮಸಂದ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೋ ಪಿಕಪ್ ವಾಹನವೊಂದು ಸಾಮಾನ್ಯ ಸ್ಪೀಡ್‌ನಲ್ಲಿ ಸಾಗುತ್ತಿತ್ತು. ಈ ವೇಳೆಯೇ ಹಿಂದಿನಿಂದ ಬಂದ ಬೈಕ್ ಸವಾರನಿಗೆ ಸೈಡ್ ಕೊಡಲಿಲ್ಲ ಎಂಬ ಕಾರಣವೇ ಮಾತಿಗೆ ಮಾತು ಬೆಳೆದು ವಾಹನ ಸವಾರ ಕೋಪಗೊಂಡಿದ್ದಾನೆ. ನಡುರಸ್ತೆಯಲ್ಲೇ ಬೊಲೆರೋ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಕಿರಿಕ್ ಮಾಡಿದ್ದಾನೆ. ಪಿಕಪ್ ವಾಹನದ ಡೋರ್ ತೆಗೆದುಹಾಕಿ ಚಾಲಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ.

ಕಾನೂನು ಕ್ರಮ ಯಾವಾಗ?

ನಗರದಲ್ಲಿ ದಿನೇದಿನೆ ರೋಡ್ ರೇಜ್‌ಗಳ ಹೆಚ್ಚಳಕ್ಕೆ ಆತಂಕ ಸೃಷ್ಟಿಸಿದೆ. ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮುಂದಾಗುವ ಘಟನೆಗಳು ಸಾಮಾನ್ಯ ಎಂಬಂತಾಗಿವೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ, ಗೂಂಡಾವರ್ತನೆ ತೋರಿದ ಬೈಕ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸುವ ಮೂಲಕ ಇಂಥ ಘಟನೆಗಳು ಮರುಕಳಿಸದಂತೆ ಕಡಿವಾಣ ಹಾಕಬೇಕಿದೆ.