ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಚೈನ್ಸಾದಿಂದ ಭೀಕರ ದಾಳಿ ನಡೆಸಿದ್ದಾನೆ. ಪ್ರೇಮ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನಂತಪುರ (ಅ.31): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಘಟನೆ ನಡೆದಿದೆ. ಶಾಲಾ ಕೊಠಡಿಯೊಳಗೇ ನುಗ್ಗಿದ ಪಾಗಲ್ ಪ್ರೇಮಿಯೊಬ್ಬ, 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮರ ಕತ್ತರಿಸುವ ಭಾರಿ ವಿದ್ಯುತ್ ಚೈನ್ನಿಂದ (Chainsaw) ಭೀಕರವಾಗಿ ದಾಳಿ ನಡೆಸಿ ರಕ್ತಪಾತ ಸೃಷ್ಟಿಸಿರುವ ಭೀಕರ ಘಟನೆ ಶುಕ್ರವಾರ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು (Raptadu) ಮಂಡಲ ಕೇಂದ್ರದಲ್ಲಿರುವ 'ಜಿಲ್ಲಾ ಪರಿಷತ್ ಪ್ರೌಢಶಾಲೆ'ಯಲ್ಲಿ (ZP High School) ಈ ದುರಂತ ಸಂಭವಿಸಿದೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದ ದೂರದ ಸೋದರ ಸಂಬಂಧಿ ಹೇಮಂತ್ (Hemanth) ಎಂಬ ನರರೂಪ ರಾಕ್ಷಸ, ತರಗತಿ ಕೊಠಡಿಯೊಳಗೇ ಸಾರ್ವಜನಿಕವಾಗಿ ಈ ದಾರುಣ ಕೃತ್ಯ ಎಸಗಿದ್ದಾನೆ. ದಾಳಿಗೊಳಗಾದ ಬಾಲಕಿಯನ್ನು 10ನೇ ತರಗತಿಯ ವಿದ್ಯಾರ್ಥಿನಿ ಗೋಪಿಕಾ (Gopika) ಎಂದು ಗುರುತಿಸಲಾಗಿದ್ದು, ಆಕೆಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.
ಶಾಲಾ ಕೊಠಡಿಯಲ್ಲೇ ನಡೆಯಿತು ನೆತ್ತರ ಮಳೆ
ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೈಯಲ್ಲಿ ಮರ ಕತ್ತರಿಸುವ ಅಪಾಯಕಾರಿ ಚೈನ್ಸಾ ಹಿಡಿದು ಶಾಲೆಯ ಒಳಗೆ ಧಾವಿಸಿದ ಆರೋಪಿ ಹೇಮಂತ್, ನೇರವಾಗಿ ಗೋಪಿಕಾ ಕುಳಿತಿದ್ದ 10ನೇ ತರಗತಿಯ ಕೊಠಡಿಗೆ ನುಗ್ಗಿದ್ದಾನೆ. ಸಹಪಾಠಿಗಳು ಹಾಗೂ ಶಿಕ್ಷಕರು ನೋಡನೋಡುತ್ತಿದ್ದಂತೆಯೇ, ರೊಚ್ಚಿಗೆದ್ದ ಆತ ಕೈಯಲ್ಲಿದ್ದ ಚೈನ್ನಿಂದ ಗೋಪಿಕಾಳ ಮುಖ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ದಾಳಿ ಮಾಡಿದ್ದಾನೆ.
ಘೋರ ದಾಳಿಯಿಂದಾಗಿ ಬಾಲಕಿಯ ಇಡೀ ಮುಖ ಕತ್ತರಿಸಿಹೋಗಿದ್ದು, ಭಾರಿ ರಕ್ತಸ್ರಾವದಿಂದ ಕೊಠಡಿಯಲ್ಲೇ ಕುಸಿದುಬಿದ್ದಿದ್ದಾಳೆ. ಈ ವೇಳೆ ಆತನ ವಿಕೃತಿಯನ್ನು ತಡೆಯಲು ಮತ್ತು ಗೋಪಿಕಾಳನ್ನು ರಕ್ಷಿಸಲು ಮುಂದಾದ ಲಕ್ಷ್ಮಿ (Lakshmi) ಎಂಬ ಮತ್ತೊಬ್ಬ ಸಹಪಾಠಿ ವಿದ್ಯಾರ್ಥಿನಿಗೂ ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿಗಳ ಚೀರಾಟ ಹಾಗೂ ಶಿಕ್ಷಕರು ಓಡಿಬರುತ್ತಿದ್ದಂತೆಯೇ ಆರೋಪಿ ಹೇಮಂತ್ ಸ್ಥಳದಿಂದ ಪರಾರಿಯಾಗಿದ್ದ.
ಧರ್ಮಾವರಂನಲ್ಲಿ ಬಂಧನ – ಆಸ್ಪತ್ರೆಗೆ ದಾಖಲು
ಘಟನೆ ಸಂಭವಿಸುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಸಹಪಾಠಿಗಳು ಹಾಗೂ ಶಾಲಾ ಶಿಕ್ಷಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ಗೋಪಿಕಾ ಹಾಗೂ ಗಾಯಗೊಂಡ ಲಕ್ಷ್ಮಿಯನ್ನು ತಕ್ಷಣವೇ ಶಾಲಾ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿದ್ದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ತೀವ್ರ ಶೋಧ ಕಾರ್ಯ ನಡೆಸಿದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ (Dharmavaram) ಬಳಿ ತಲೆಮರೆಸಿಕೊಂಡಿದ್ದ ಆರೋಪಿ ಹೇಮಂತ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಲೆಯ ಆವರಣದಲ್ಲೇ ನಡೆದ ಈ ಭೀಕರ ಘಟನೆಯಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಅಕ್ಷರಶಃ ಕಂಗಾಲಾಗಿದ್ದು, ಪ್ರದೇಶದಲ್ಲಿ ತೀವ್ರ ಭೀತಿಯ ವಾತಾವರಣ ಆವರಿಸಿದೆ.
ಒನ್ಸೈಡ್ ಲವ್ ಹಾಗೂ ದ್ವೇಷದ ಕಾರಣಕ್ಕೆ ಘಟನೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಭೀಕರ ಕೃತ್ಯದ ಹಿಂದಿನ ಕಹಿ ಸತ್ಯ ಹೊರಬಿದ್ದಿದೆ. ಆರೋಪಿ ಹೇಮಂತ್, ಸಂತ್ರಸ್ತೆ ಗೋಪಿಕಾಳ ದೂರದ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ಸಮಯದಿಂದ ಆಕೆಗೆ ಪ್ರೇಮದ ಹೆಸರಿನಲ್ಲಿ ನಿರಂತರವಾಗಿ ಪೀಡಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ಗೋಪಿಕಾ, "ನನ್ನಿಂದ ದೂರವಿರು, ಇಲ್ಲವಾದರೆ ನಿನ್ನ ನನ್ನ ಪೋಷಕರಿಗೆ ದೂರು ನೀಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಳು. ಇದರಿಂದ ಸಿಟ್ಟಾಗಿದ್ದ ಆರೋಪಿ ಹೇಮಂತ್, ಆಕೆಯನ್ನು ಮುಗಿಸಿಹಾಕುವ ಉದ್ದೇಶದಿಂದಲೇ ಶಾಲೆಯ ಒಳಗಡೆಯೇ ಈ ಭೀಕರ ಕೃತ್ಯ ಎಸಗಿದ್ದಾನೆ.
ಅನಂತಪುರದ ಶಾಲಾ ಕೊಠಡಿಯಲ್ಲೇ ಹೆಣ್ಣುಮಗಳ ಮೇಲೆ ನಡೆದ ಈ ಭೀಕರ ಕೃತ್ಯಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆಯೇ ಹಿರಿಯ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳನ್ನು ಸಂಪರ್ಕಿಸಿದ ಸಿಎಂ, ಗಾಯಾಳು ವಿದ್ಯಾರ್ಥಿನಿಗೆ ಸೂಕ್ತ ಹಾಗೂ ಅತ್ಯುನ್ನತ ಮಟ್ಟದ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ನರರಾಕ್ಷಸ ಆರೋಪಿಗೆ ಕಾನೂನಿನ ಅಡಿಯಲ್ಲಿ ಗರಿಷ್ಠ ಮಟ್ಟದ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.






