ಅಮೆರಿಕಾ ಹುಡುಗಿ, ನೈಜೀರಿಯಾ ಹುಡುಗ: ಹಣಕ್ಕಾಗಿ ಅಪಹರಣ ನಾಟಕ ಮಾಡಿ ಬಂಧನ

ಕೈಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಪೋಷಕರಿಂದ ಹಣ ಪಡೆಯಲು ನಕಲಿ ಅಪಹರಣ ಸೃಷ್ಟಿಸಿದ ಅಮೆರಿಕಾ ಮೂಲದ ಯುವತಿ ಮತ್ತು ಆಕೆಯ ನೈಜೀರಿಯಾ ಮೂಲದ ಬಾಯ್‌ಫ್ರೆಂಡ್‌ ಇಬ್ಬರೂ ಈಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. 

american girl and nigerian boy tried to fake abduction arrested by delhi police

ನವದೆಹಲಿ: ಹಣಕ್ಕಾಗಿ ಅಪಹರಣವಾದಂತೆ ನಾಟಲ ಮಾಡಿ ಈಗ ನವದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ ಅಂತಾರಾಷ್ಟ್ರೀಯ ಪ್ರೇಮಿಗಳು. ಯುವತಿ ಅಮೆರಿಕಾದವಳು, ಯುವಕ ನೈಜೀರಿಯಾದವನು. ಅದು ಹೇಗೋ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಇಬ್ಬರಲ್ಲೂ ಪ್ರೀತಿ ಮೊಳೆತಿದೆ. ನಂತರ ಇಬ್ಬರೂ ಭಾರತಕ್ಕೆ ಬಂದಿದ್ದಾರೆ. ಸ್ವಲ್ಪ ದಿನಗಳ ನಂತರ ಇಬ್ಬರ ಬಳಿಯೂ ಹಣ ಖಾಲಿಯಾಗಿದೆ. ಹಣಕ್ಕಾಗಿ ತಂದೆ ತಾಯಿಯನ್ನು ನಂಬಿಸಲು ಅಪಹರಣದ ನಾಟಕ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆ. ವಿಚಿತ್ರ ಪ್ರೇಮಕತೆ, ಅಪಹರಣದ ಕಟ್ಟು ಕತೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್‌ ಎಲ್ಲವೂ ಉಳ್ಳ ಸ್ವಾರಸ್ಯಕರ ಸ್ಟೋರಿ ಇಲ್ಲಿದೆ. 

ಕ್ಲೋಯಿ ಮೆಕ್‌ಲಾಫ್ಲಿನ್‌ (27) ಅಮೆರಿಕಾದವಳು. ಯೂನಿವೆರ್ಸಿಟಿ ಆಪ್‌ ಯುಎಸ್‌ನಲ್ಲಿ ಪದವಿ ಪಡೆದ ವಿದ್ಯಾವಂತೆ. ತಂದೆ ಮತ್ತು ತಾಯಿ ಇಬ್ಬರೂ ವಾಷಿಂಗ್ಟನ್‌ ಡಿಸಿಯಲ್ಲಿ ವಾಸವಿದ್ದಾರೆ. ತಂದೆ ನಿವೃತ್ತ ಸೇನಾಧಿಕಾರಿ. ಕ್ಲೋಯಿ ವ್ಯಾಸಂದ ಮುಗಿದ ನಂತರ ಭಾರತಕ್ಕೆ ಬಂದಿದ್ದಾಳೆ. ಅವಳಿಗಾಗಿ ಅದಾಗಲೇ ನೈಜೀರಿಯಾದಿಂದ ಆಕೆಯ ಪ್ರಿಯತಮ ದೆಹಲಿಗೆ ಬಂದು ಕಾಯುತ್ತಿದ್ದ. ಇದೇ ವರ್ಷದ ಮೇ ತಿಂಗಳಲ್ಲಿ ಕ್ಲೋಯಿ ಬಂದಿದ್ದಳು. ಅದಾದ ನಂತರ ಇಬ್ಬರೂ ಲಿವ್‌ ಇನ್‌ ರಿಲೇಷನ್‌ಶಿಪ್‌ಲಿ ಜೊತೆಯಾಗಿದ್ದರು. ಜುಲೈ 7ನೇ ತಾರೀಕು ಕ್ಲೋಯಿ ಮೆಕ್‌ಲಾಫ್ಲಿನ್‌ ತನ್ನ ತಾಯಿಗೆ ಕರೆ ಮಾಡಿ, ತಾನು ಭಾರತದಲ್ಲಿ ಸುರಕ್ಷಿತವಾಗಿಲ್ಲ. ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗಿದೆ. ನನಗೆ ಪರಿಚಯ ಇರುವ ವ್ಯಕ್ತಿಯೊಬ್ಬ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದಾನೆ ಎಂದು ಹೇಳಿದಳು. ಅದಿಂದ ಭಯಗೊಂಡ ಕ್ಲೋಯಿ ತಾಯಿ ಹೆಚ್ಚಿನ ಮಾಹಿತಿ ನೀಡುವಂತೆ ಕೇಳಿದಾಗ, ಕ್ಲೋಯಿ ಕರೆ ಕಟ್‌ ಮಾಡಿದ್ದಳು. ಆಕೆ ಎಲ್ಲಿದ್ದಾಳೆ, ಯಾರ ಜೊತೆ ಇದ್ದಾಳೆ ಎಂಬ ಬಗ್ಗೆ ಮಾಹಿತಿ ಆಕೆ ನೀಡಿರಲಿಲ್ಲ. 

ಭಯಗೊಂಡ ಆಕೆಯ ಪೋಷಕರು ತಕ್ಷಣ ಭಾರತದ ಅಮೆರಿಕಾ ಧೂತವಾಸಕ್ಕೆ ಕರೆಮಾಡಿ ಮಾಹಿತಿ ನೀಡಿದರು. ನಂತರ ಧೂತವಾಸದ ದೂರಿನ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಅಮೆರಿಕಾದ ನಾಗರಿಕಳಾದ್ದರಿಂದ ಪ್ರಕರಣವನ್ನು ಪೊಲೀಸರು ತೀರಾ ಗಂಭೀರವಾಗಿ ಪರಿಗಣಿಸಿದರು. ಇದೇ ಯುವತಿಯ ನಾಟಕ ಬ್ರೇಕ್‌ ಮಾಡಲು ಸಹಕಾರಿಯಾಗಿತ್ತು. ಯಾಕೆಂದರೆ ಆಕೆಗೆ, ತಾನು ಮಾಡಿದ ಒಂದು ಕಾಲ್‌ನಿಂದ ಅಮೆರಿಕಾ ಧೂತವಾಸವೇ ಪ್ರಕರಣ ಗಂಭೀರವಾಗಿ ಪರಿಗಣಿಸುತ್ತದೆ ಎಂಬ ಸಂಶಯ ಇರಲಿಲ್ಲ. 

ಇದನ್ನೂ ಓದಿ: Weird News: ಇಲ್ಲಿ ಮದುವೆಗೆ ಮೊದಲು ಹುಡುಗಿ ತಾಯಿಯಾಗ್ಲೇಬೇಕಂತೆ…!

ಜುಲೈ 10ರಂದು ಯುವತಿ ಮತ್ತೆ ತಾಯಿಗೆ ವಿಡಿಯೋ ಕರೆ ಮಾಡಿದ್ದಾಳೆ. ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್‌ ಮಾಡಿ, ತಾನು ಅಪಹರಣಕ್ಕೊಳಗಾಗಿದ್ದೇನೆ. ನನ್ನ ಮೇಲೆ ಹಲ್ಲೆಯಾಗುತ್ತಿದೆ. ಪರಿಚಯದವನೇ ನನಗೆ ಹಿಂಸೆ ನೀಡುತ್ತಿದ್ದಾನೆ. ನಾನು ಸುರಕ್ಷಿತವಾಗಿಲ್ಲ ಎಂದಿದ್ದಾಳೆ. ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ತಾಯಿ ಕೇಳುವ ಹೊತ್ತಿಗೆ ವ್ಯಕ್ತಿಯೊಬ್ಬ ಬಂದು ಆಕೆಯ ಫೋನನ್ನು ಕಿತ್ತುಕೊಂಡು ಕರೆ ಕಟ್‌ ಮಾಡಿದ್ದಾನೆ. ಈ ವಿಚಾರ ತಿಳಿದ ನಂತರ ಅಮೆರಿಕಾ ಧೂತವಾಸ, ಯುವತಿ ಅಪಹರಣಕ್ಕೊಳಗಾಗಿದ್ದಾಳೆ ಎಂದು ಪರಿಗಣಿಸಿದೆ. ತನಿಖೆ ಆಗ ಇನ್ನೂ ಹೆಚ್ಚು ಚುರುಕುಗೊಂಡಿದೆ. ಯುವತಿಯ ಮನೆಯವರ ಜತೆ ಸಂಪರ್ಕ ಸಾಧಿಸಲು ಅಪಹರಣಕಾರು ಬಿಡುತ್ತಿಲ್ಲ ಎಂದು ಧೂತವಾಸ ಅಂದುಕೊಂಡಿತ್ತು ಎಂದು ದೆಹಲಿ ಡಿಸಿಪಿ ಅಮೃತಾ ಗುಗುಲೊತ್‌ ಹೇಳಿದ್ದಾರೆ. 

ಪೊಲೀಸರ ಮಾಹಿತಿ ಪ್ರಕಾರ ತಂತ್ರಜ್ಞಾನ ಬಳಸಿ ಪೊಲೀಸರು ಆಕೆಯ ಲೊಕೇಷನ್‌ ಪತ್ತೆ ಹಚ್ಚಲು ಮುಂದಾದರು. ಆಕೆ ಜುಲೈ 9ರಂದು ಯಾಹೂ ಮೇಲ್‌ನಿಂದ ಅಮೆರಿಕಾ ನಾಗರಿಕ ಸೇವಾ ಇಲಾಖೆಗೆ ಆಕೆಯ ಇಮಿಗ್ರೇಷನ್‌ ದಾಖಲೆಗಳನ್ನು ಕಳಿಸಿದ್ದಳು. ಯಾಹೂ ಸಂಸ್ಥೆಯಿಂದ ಯುವತಿ ಯಾವ ಐಪಿ ಅಡ್ರೆಸ್‌ನಿಂದ ಆಕೆ ಮೇಲ್‌ ಮಾಡಿದ್ದಾಳೆ ಎಂಬ ಮಾಹಿತಿ ಕೇಳಲಾಗಿದೆ. ಇಮಿಗ್ರೇಚನ್‌ ಬ್ಯೂರೋಗೆ ಆಕೆ ದೆಹಲಿಯಲ್ಲಿ ಎಲ್ಲಿ ವಾಸ ಮಾಡುತ್ತಿದ್ದಾಳೆ ಎಂಬ ಮಾಹಿತಿಯನ್ನು ಕೋರಿದಾಗ ಗ್ರೇಟರ್‌ ನಾಯ್ಡಾದಲ್ಲಿ ಆಕೆ ವಾಸವಿರುವ ಮಾಹಿತಿ ನೀಡಲಾಗಿತ್ತು. ಗ್ರೇಟರ್‌ ನಾಯ್ಡಾದ ಹೋಟೆಲ್‌ ಒಂದರ ವಿಳಾಸ ಅದಾಗಿತ್ತು. ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿದಾಗ ಕ್ಲೋಯಿ ಮೆಕ್‌ಲಾಫ್ಲೀನ್‌ ಅಲ್ಲಿಗೆ ಎಂದೂ ಭೇಟಿ ನೀಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಅಂದರೆ ಇಮಿಗ್ರೇಷನ್‌ ಬ್ಯೂರೊಗೆ ಯುವತಿ ನೀಡಿದ ಮಾಹಿತಿ ಸುಳ್ಳು. ಡಿಸಿಪಿ ಅಮೃತಾ ಅವರ ಹೇಳಿಕೆ ಪ್ರಕಾರ, ಕ್ಲೋಯಿ ತನ್ನ ತಾಯಿಗೆ ವಾಟ್ಸ್‌ಆಪ್‌ ವಿಡಿಯೋ ಕರೆ ಮಾಡಿದಾಗ ಬೇರೊಂದು ವೈಫೈ ಬಳಕೆ ಮಾಡಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ. 

ಇದನ್ನೂ ಓದಿ: 15 ವರ್ಷದ ಹುಡುಗನ ಜತೆ 2 ಮಕ್ಕಳ ತಾಯಿಗೆ ಸಂಬಂಧ, ಲೈಂಗಿಕ ಕ್ರಿಯೆವೇಳೆ ಗಂಡನಿಗೆ ಸಿಕ್ಕಿಬಿದ್ದ ಪ್ರೇಮಿಗಳು

"ನಮ್ಮ ತಂಡ ವೈಫೈನ ಐಪಿ ಅಡ್ರೆಸ್‌ ಮತ್ತು ಐಪಿ ಅಡ್ರೆಸ್‌ಗೆ ಸಂಬಂಧಿಸಿದ ಮೊಬೈಲ್‌ ನೆಟ್‌ವರ್ಕ್‌ ಹುಡುಕಿ ಹೊರಟಾಗ ಒಕೊರೊಫರ್‌ ಚಿಬುಯ್ಕೆ ಒಕೊರೊ (31) ಎಂಬ ನೈಜೀರಿಯನ್‌ ಒಬ್ಬನ ಅಡ್ರೆಸ್‌ ದೊರೆತಿದೆ. ಆತ ದೆಹಲಿ ಹೊರವಲಯದ ಗುರುಗ್ರಾಮದಲ್ಲಿ ವಾಸವಾಗಿರುವುದು ಮೊಬೈಲ್‌ ನೆಟ್‌ವರ್ಕ್‌ನಿಂದ ತಿಳಿದುಬಂದಿದೆ. ಒಕೊರೊನನ್ನು ಟ್ರ್ಯಾಕ್‌ ಮಾಡಿ ವಶಕ್ಕೆ ಪಡೆದಾಗ, ಆತ ಆಕೆ ಇರುವ ವಿಳಾಸವನ್ನು ನೀಡಿದ್ದಾನೆ," ಎಂದು ಡಿಸಿಪಿ ಅಮೃತಾ ಮಾಹಿತಿ ನೀಡಿದರು. 

ಆತ ನೀಡಿದ ಮಾಹಿತಿ ಮೇಲೆ ಕ್ಲೋಯಿ ಮೆಕ್‌ಲಾಫ್ಲೀನ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ವಿಚಾರಣೆ ವೇಳೆ ಆಕೆ ಮತ್ತು ಒಕೊರೊ ಪ್ರೀತಿಸುತ್ತಿರುವುದಾಗಿ ಮತ್ತು ಹಣ ಇಲ್ಲದ ಹಿನ್ನೆಲೆ ಅಪಹರಣದ ನಾಟಕ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕಾದಿಂದ ದೆಹಲಿಗೆ ಬಂದ ಕೆಲವೇ ದಿನಗಳಲ್ಲಿ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿದೆ. ತಂದೆ ತಾಯಿ ಬಳಿ ಹಣವಿಲ್ಲ ಎಂದು ಕೇಳಿದರೆ ಕೊಡುವುದಿಲ್ಲ ಎಂಬ ಕಾರಣಕ್ಕೆ ಅಪಹರಣದ ನಾಟಕ ಬೇಕಾಯಿತು ಎಂದು ಒಪ್ಪಿಕೊಂಡಿದ್ದಾಳೆ. ಕ್ಲೋಯಿಯ ವೀಸಾ ಅವಧಿ ಕೂದ ಜೂನ್‌ 6ಕ್ಕೆ ಅಂತ್ಯವಾಗಿದೆ ಮತ್ತು ಒಕೊರೊ ವೀಸಾ ಕೂಡ ಅವಧಿ ಮೀರಿದೆ. ಅವರಿಬ್ಬರೂ ಭಾರತದಲ್ಲಿ ಕಳೆದೊಂದು ತಿಂಗಳಿಂದ ಅನಧಿಕೃತವಾಗಿ ನೆಲೆಸಿದ್ದರು. ಒಕೊರೊ ಮತ್ತು ಕ್ಲೋಯಿ ಇಬ್ಬರೂ ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದರು. ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿದ ನಂತರ ಭಾರತದಲ್ಲಿ ಬಂದು ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದರು. ಇಬ್ಬರೂ ಗಾಯಕರಾಗಿದ್ದು, ಇದೇ ಕಾರಣಕ್ಕೆ ಪ್ರೀತಿ ಬೆಳೆದಿರಬಹುದು ಎನ್ನುತ್ತಾರೆ ವಿಚಾರಣಾಧಿಕಾರಿ. 

ಇದನ್ನೂ ಓದಿ: ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋದಾಗ ಹುಟ್ಟಿತ್ತು ಮಗು!

ಅವಧಿ ಮೀರಿದ ವೀಸಾ ಮತ್ತು ಪಾಸ್‌ಪೋರ್ಟ್‌ ಹೊಂದಿದ್ದಕ್ಕೆ, ಅನಧಿಕೃತವಾಗಿ ಭಾರತದಲ್ಲಿ ವಾಸವಿದ್ದಿದ್ದಕ್ಕೆ ಮತ್ತು ಸುಳ್ಳು ಮಾಹಿತಿ ನೀಡಿದ್ದಕ್ಕೆ ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ. ಮೂಲಗಳ ಪ್ರಕಾರ ಇಬ್ಬರನ್ನೂ ಅವರವರ ದೇಶಕ್ಕೆ ಕೆಲ ತಿಂಗಳುಗಳಲ್ಲಿ ಡಿಪೋರ್ಟ್‌ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios