ಸರ್ಕಾರಿ ಭೂಮಿ ವಂಚನೆ; ಮಾಲೂರು ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಎಫ್‌ಐಆರ್
150 ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿರುವ ಆರೋಪದಡಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ನ.3) : 150 ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿರುವ ಆರೋಪದಡಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೋಟಿಗಟ್ಟಲೇ ಬೆಲೆ ಬಾಳೋ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಯತ್ನ: ಅಕ್ರಮಕ್ಕೆ ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳು
ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು,ಶಾಸಕರಿಗೆ ಸಂಕಷ್ಟ ಎದುರಾಗಿದೆ. 2019 ಇಸವಿಯ ಜುಲೈ ತಿಂಗಳಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಅಂತ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬುವವರು ದೂರು ನೀಡಿದ್ದರು.
ಬೆಂಗಳೂರಿನ 47ನೇ ಹೆಚ್ಚುವರಿ ಸಿಎಂಎಂ ಕೋರ್ಟ್ ಆದೇಶದಂತೆ ಇದೀಗ ಮಾಲೂರು ಶಾಸಕರ ವಿರುದ್ಧ FIR ದಾಖಲಾಗಿದೆ. ಇನ್ನು ಶಾಸಕರು ಮಂಜೂರು ಮಾಡಿರುವ ಗೋಮಾಳ ಜಮೀನಿನ ಬೆಲೆ ಬರೋಬ್ಬರಿ 150 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದ್ದು, ಮಂಜೂರು ಮಾಡುವ ವೇಳೆ ಶಾಸಕರು 4 ಬಾರಿ ಸಭೆ ಮಾಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ. ಇನ್ನು ಶಾಸಕರ ಜೊತೆ ತಹಶೀಲ್ದಾರ್, ಕಾರ್ಯದರ್ಶಿ, ಶಿರಸ್ತೆದಾರ, ರಾಜಸ್ವ ನಿರೀಕ್ಷಕ,ಗ್ರಾಮ ಲೆಕ್ಕಾಧಿಕಾರಿ ಸೇರಿ ಹಲವರ ವಿರುದ್ಧ ದೂರು ದಾಖಲಾಗಿತ್ತು.
ಶಾಸಕರು ಮಂಜೂರು ಮಾಡುವ ಮುನ್ನ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಸಭೆ ನಡೆಸಿ ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದರಖಾಸ್ತು ಕಮಿಟಿಯ ಅಧ್ಯಕ್ಷರು ಸಹ ಶಾಸಕ ಕೆ.ವೈ ನಂಜೇಗೌಡ ಆಗಿದ್ದು ನಕಲಿ ದಾಖಲೆಗಳನ್ನು ನೀಡಿ ಜಮೀನು ಮಂಜೂರು ಮಾಡಿರುವ ಆರೋಪ ಸಹ ಕೇಳಿಬಂದಿದೆ. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬುವವರು ಒಟ್ಟು 9 ಜನರ ವಿರುದ್ಧ ದೂರು ನೀಡಿದ್ದರು.
BIG 3: 10 ವರ್ಷದಿಂದ ಉದ್ಘಾಟನೆಯಾಗದೇ ಪಾಳು ಬಿದ್ದಿರುವ ಮಾಲೂರಿನ ಅಂಬೇಡ್ಕರ್ ಭವನ
ಇನ್ನು ಸಮಿತಿಯ ಅಧಿಕರೇತರ ಸದಸ್ಯರಾಗಿರುವ ನಾಗರಾಜ್, ನಾಗಪ್ಪ, ನಾಗಮ್ಮ ವಿರುದ್ಧವೂ ದೂರು ನೀಡಲಾಗಿದ್ದು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರಾಜಣ್ಣ ತಮ್ಮ ದೂರಿನಲ್ಲಿ ಮನವಿ ಮಾಡಿದ್ದರು. ಸದ್ಯ ನ್ಯಾಯಾಲಯ ಆದೇಶದಂತೆ ಮಾಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು,ಶಾಸಕ ಕೆ.ವೈ ನಂಜೇಗೌಡ ಅವರಿಗೆ ಸಂಕಷ್ಟ ಎದುರಾಗಿದೆ.