ಕೋಟಿಗಟ್ಟಲೇ ಬೆಲೆ ಬಾಳೋ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಯತ್ನ: ಅಕ್ರಮಕ್ಕೆ ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳು
* ಗ್ರೇಡ್ 2 ತಹಶೀಲ್ದಾರ್ ಸೇರಿ ನಾಲ್ವರ ಮೇಲೆ ಎಫ್‌ಐಆರ್ ದಾಖಲು
* ಭೂ ಕಬಳಿಕೆ ಮಾಡೋದು ಹೇಗೆ?
* ಇದರಲ್ಲಿ ಯಾರೆಲ್ಲ ಇದ್ರೂ ಅನ್ನೋದು ತನಿಖೆಯ ನಂತರ ಬಯಲಾಗಲಿದೆ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ
ವಿಜಯನಗರ(ಮೇ.17): ಇದು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಯಾಕೆಂದ್ರೇ, ಇಲ್ಲಿ ಸರ್ಕಾರಿ ಭೂಮಿಯನ್ನು(Government Land) ರಕ್ಷಿಸಬೇಕಾದ ಅಧಿಕಾರಿಗಳೇ ಖಾಸಗಿ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ಕೋಟಿಗಟ್ಟಲೇ ಬೆಲೆ ಬಾಳೋ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಲು ಮುಂದಾಗಿದ್ದಾರೆ. ಜಿಲ್ಲಾಡಳಿತ ಬುದ್ದಿವಂತೆಕೆಯೋ ಅಥವಾ ನಕಲಿ ದಾಖಲೆ ಸೃಷ್ಟಿ ಮಾಡಿದ ಅಧಿಕಾರಿಗಳ ದುರ್ದೈವವೋ ಗೊತ್ತಿಲ್ಲ, ಗ್ರೇಡ್ 2 ತಹಶೀಲ್ದಾರ್ ಸೇರಿದಂತೆ ನಾಲ್ವರ ಮೇಲೆ ಇದೀಗ ದೂರು (FIR) ದಾಖಲಾಗಿದೆ.
ಹಡಗಲಿ ತಾಲೂಕಿನಲ್ಲಿ ನಡೆದ ಘಟನೆ
ಹೌದು, ವಿಜಯನಗರ(Vijayanagara) ಜಿಲ್ಲೆ ರಚನೆಯಾಗಿದ್ದೇ ತಡ ಇಲ್ಲಿರೋ ಬಹುತೇಕ ಎಲ್ಲ ತಾಲೂಕಿನ ಜಮೀನಿಗೂ ಬಂಗಾರದ ಬೆಲೆ ಬಂದಿದೆ. ಒಂದಕ್ಕೆ ಎರಡು ಮೂರು ಪಟ್ಟು ಹೆಚ್ಚು ಬೆಲೆ ಇರೋ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡೋ ಜನರು ಹೆಚ್ಚಾಗಿದ್ದಾರೆ. ಬೆಲೆ ಹೆಚ್ಚಳವಾಗಿರೋದನ್ನೇ ನೆಪ ಮಾಡಿಕೊಂಡು ಸರ್ಕಾರಿ ಜಮೀನು ಕಬಳಿಸಲು ಕಂದಾಯ ಅಧಿಕಾರಿಗಳಿಂದಲೇ(Revenue Department Officers) ನಡೆದ ಪ್ಲಾನ್ ಇದೀಗ ಬಯಲಿಗೆ ಬಂದಿದೆ.
ಹಡಗಲಿ(Huvina Hadagali) ತಾಲೂಕಿನ ದಾಸರಹಳ್ಳಿಯ ಸರ್ವೆ ನಂಬರ್ 229/D/1 ವ್ಯಾಪ್ತಿಯ 10.36 ಎಕರೆ ಸರ್ಕಾರಿ ಜಮೀನಿನ ನಕಲಿ ದಾಖಲೆ ಸೃಷ್ಟಿ ಮಾಡಿದ ಕೆಲವರು, ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಜಮೀನನ್ನು ಮೂರನೇ ವ್ಯಕ್ತಿ (ಅಪರಿಚಿತ) ಹೆಸರಿಗೆ ನೋಂದಣಿ(Registration) ಮಾಡಿಸಿದ್ದಾರೆ. ಬಹುತೇಕ ನೋಂದಣಿ ಕಾರ್ಯ ಮುಗಿದು ದಾಖಲೆ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕರಣ ಬಯಲಿಗೆ ಬಂದಿದೆ. ಸರ್ಕಾರಕ್ಕೆ ಮೋಸ ಮಾಡಿ ಖಾಸಗಿ ವ್ಯಕ್ತಿಗಳ ಹೆಸರಲ್ಲಿ ಕೋಟಿಗಟ್ಟಲೇ ಬೆಲೆ ಬಾಳೋ ಜಮೀನು ಪರಭಾರೆ ಮಾಡಲು ಹೊರಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ದೂರು ದಾಖಲಿಸೋ ಮೂಲಕ ಶಾಕ್ ನೀಡಿದ್ದಾರೆ.
ಅಧಿಕಾರಿಗಳು ಶಾಮೀಲಾಗಿರೋದು ಗೊತ್ತಾಗ್ತಿದ್ದಂತೆ ದೂರು
ಇನ್ನೂ ಸರ್ಕಾರಿ ಭೂಮಿಯನ್ನು ಖಾಸಗಿ ಜನರಿಗೆ ಪರಭಾರೆ ಮಾಡಲು ಯತ್ನಿಸಿದ್ದಾರೆ ಅನ್ನೋ ವಿಷಯ ಗೊತ್ತಾಗ್ತಿದ್ದಂತೆ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಗ್ರೇಡ್ -02 ತಹಶೀಲ್ದಾರ್ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಡಗಲಿಯ ಗ್ರೇಡ್ -02 ತಹಶಿಲ್ದಾರ್ ನಟರಾಜ್, ಶಿರೇಸ್ತೆದಾರ, ಮಹಮ್ಮದ್ ಗೌಸ್, FDA ಪುನೀತ್ ಕುಮಾರ್, ಮತ್ತೊಬ್ಬ ಸಿಬ್ಬಂದಿ ಕೊಟ್ರೇಶ್ ಮೇಲೆ ದೂರು ದಾಖಲಿಸಿದ್ದಾರೆ. ಇದೀಗ ಗ್ರೇಡ್- 2 ತಹಸಿಲ್ದಾರ್ ಸೇರಿ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಉಳಿದಿಬ್ಬರು ಸಿಬ್ಬಂದಿಯನ್ನ ವರ್ಗಾವಣೆ ಮಾಡಲಾಗಿದೆ.
'ಬಿಜೆಪಿ ಸರ್ಕಾರ ಹಗಲು ದರೋಡೆ ಮಾಡ್ತಿದೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ'
ಭೂ ಕಬಳಿಕೆ ಮಾಡೋದು ಹೇಗೆ?
ಯಾವೊದೋ ಒಂದು ಸರ್ಕಾರಿ ಅಥವಾ ಖಾಸಗಿ ಭೂಮಿಯ ಸಮರ್ಪಕ ದಾಖಲೆ (ಒರಿಜಿನಲ್) ಕಲೆ ಹಾಕೋದು. ನಂತರ ಈ ಬಗ್ಗೆ ಕೆಲ ಅಧಿಕಾರಿಗಳ ಜೊತೆಗೆ ಕೈ ಜೋಡಿಸಿ ನಕಲಿ ದಾಖಲೆ(Fake Documents) ಸೃಷ್ಟಿ ಮಾಡಿ ಯಾರಿಗೂ ಗೊತ್ತಿರದ ಮೂರನೇ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿಬಿಡೋದು. ಯಾವುದೇ ಅನುಮಾನ ಬಾರದೇ ಎಲ್ಲವೂ ಸುಸೂತ್ರವಾಗಿ ನಡೆದ ಬಳಿಕ ಮೂರನೇ ವ್ಯಕ್ತಿಯ ಹೆಸರಲ್ಲಿ ಸೃಷ್ಟಿಯಾದ ಒರಿಜಿನಲ್ ದಾಖಲೆಗಳನ್ನು ಇಟ್ಟುಕೊಂಡು ಅದನ್ನು ಮತ್ತೊಬ್ಬರಿಗೆ ಮಾರಿ ಬಿಡೋದೇ ಈ ತಂಡದ ಕೆಲಸವಾಗಿದೆ. ಒಮ್ಮೆ ಮಾರಾಟವಾಯ್ತು ಅಯ್ತು ಅಂದ್ರೇ ಮುಂದೆ ಬರೋ ಸಮಸ್ಯೆಗೆ ಖರೀದಿ ಮಾಡಿದವರೇ ಹೊಣೆಗಾರರು ಅಗಿರುತ್ತಾರೆ. ಈ ರೀತಿಯ ಜಾಲವೊಂದು ಸಕ್ರಿಯವಾಗಿದೆ.
ಸದ್ಯ ಇದೊಂದು ಪ್ರಕರಣ ಬಯಲಿಗೆ ಬಂದಿದ್ದು, ಸರ್ಕಾರಿ ಅಧಿಕಾರಿಗಳ ಮೇಲೆ ಮತ್ತು ನೋಂದಣಿಯಾದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ. ಆದ್ರೇ ಇದರಲ್ಲಿ ಯಾರೆಲ್ಲ ಇದ್ರೂ ಅನ್ನೋದು ತನಿಖೆಯ ನಂತರ ಬಯಲಾಗಲಿದೆ.