Asianet Suvarna News Asianet Suvarna News

Bengaluru: ಕಾರು ಡಿಕ್ಕಿಯಾಗಿ 7-8 ಅಡಿ ಎತ್ತರಕ್ಕೆ ಹಾರಿ ಬಿದ್ದ ಯುವತಿ ಗಂಭೀರ

ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಆರ್‌.ವಿ.ಕಾಲೇಜು ಬಳಿ ನಡೆದಿದೆ. 
 

A young woman who fell after being hit by a car is in critical condition at bengaluru gvd
Author
First Published Feb 5, 2023, 7:48 AM IST

ಬೆಂಗಳೂರು (ಫೆ.05): ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಆರ್‌.ವಿ.ಕಾಲೇಜು ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಸ್ವಾತಿ (21) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಫೆ.2ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕೆಂಗೇರಿ ಸಂಚಾರ ಠಾಣೆ ಪೊಲೀಸರು, ಕಾರು ಚಾಲಕ ಎಂಬಿಬಿಎಸ್‌ ವಿದ್ಯಾರ್ಥಿ ಕೃಷ್ಣ (20) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾತಿಯ ತಂದೆ ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರು ರಸ್ತೆಯ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಎದುರಿನ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌(ಬಿಐಎಂಎಸ್‌) ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಪಟ್ಟಣಗೆರೆಯ ಪೇಯಿಂಗ್‌ ಗೆಸ್ಟ್‌ನಲ್ಲಿ ನೆಲೆಸಿದ್ದಾರೆ.

ಅಮಾನತುಗೊಂಡ ಕಾಂಗ್ರೆಸ್‌ ಮುಖಂಡ ಕೆಜಿಎಫ್‌ ಬಾಬು ಸೋದರಿ ಮನೆಗೆ ಬೆಂಕಿ

ಫೆ.2ರಂದು ಮಧ್ಯಾಹ್ನ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಕಡೆಯಿಂದ ಬಿಐಎಂಎಸ್‌ ಕಾಲೇಜಿಗೆ ತೆರಳಲು ರಸ್ತೆ ದಾಟುವಾಗ ಕೆಂಗೇರಿ ಕಡೆಯಿಂದ ವೇಗವಾಗಿ ಬಂದ ಕಾರು ಸ್ವಾತಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಮುಂದೆ ಹೋಯಿತು. ಡಿಕ್ಕಿಯ ರಭಸಕ್ಕೆ ಏಳೆಂಟು ಅಡಿಗಳಷ್ಟುಮೇಲಕ್ಕೆ ಹಾರಿ ರಸ್ತೆಗೆ ಬಿದ್ದ ಸ್ವಾತಿ ಕಾಲು, ಕೈ, ಬೆನ್ನು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತ ಎಸಗಿದ ಕಾರು ಚಾಲಕ ಕೃಷ್ಣ ಬೆಂಗಳೂರು-ಮೈಸೂರು ರಸ್ತೆಯ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾನೆ. 

ಅಂದು ಘಟನೆ ಬಳಿಕ ಕಾರು ನಿಲ್ಲಿಸದೆ ಗಾಬರಿಯಲ್ಲಿ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಆವರಣದೊಳಗೆ ಕಾರು ನುಗ್ಗಿಸಿದ್ದ. ಬಳಿಕ ಆತನನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಲಾಗಿತ್ತು. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ‘ಅಪಘಾತದ ವೇಳೆ ಸಾಕಷ್ಟುಜನರು ಜಮಾಯಿಸಿದ್ದರಿಂದ ಭಯಗೊಂಡು ಕಾರು ನಿಲ್ಲಿಸದೆ ಮುಂದೆ ಸಾಗಿದೆ’ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್‌ ನೇಮಕ: ಮನ್ಸುಖ್‌, ಅಣ್ಣಾಮಲೈಗೂ ಹೊಣೆ

ವಿಡಿಯೋ ವೈರಲ್‌: ಅಪಘಾತದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸ್ವಾತಿ ರಸ್ತೆ ದಾಟುವಾಗ ಕೆಂಪು ಬಣ್ಣದ ಕಾರು ಡಿಕ್ಕಿ ಹೊಡೆದು ಮುಂದೆ ಸಾಗುತ್ತದೆ. ಡಿಕ್ಕಿಯ ರಭಸಕ್ಕೆ ಸ್ವಾತಿ ಏಳೆಂಟು ಅಡಿ ಮೇಲಕ್ಕೆ ಹಾರಿ ರಸ್ತೆಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Follow Us:
Download App:
  • android
  • ios