ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಆಡಳಿತರೂಢ ಬಿಜೆಪಿಯ ಚುನಾವಣಾ ಉಸ್ತುವಾರಿಯನ್ನಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ನೇಮಿಸಲಾಗಿದೆ. 

ಬೆಂಗಳೂರು (ಫೆ.05): ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಆಡಳಿತರೂಢ ಬಿಜೆಪಿಯ ಚುನಾವಣಾ ಉಸ್ತುವಾರಿಯನ್ನಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ನೇಮಿಸಲಾಗಿದೆ. ಜತೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಮತ್ತು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ನೇಮಕ ಮಾಡಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಅವರು ಪ್ರಕಟಣೆ ಹೊರಡಿಸಿದ್ದಾರೆ. ಶನಿವಾರ ಬೆಳಗ್ಗೆ ಮೊದಲಿಗೆ ನೀಡಿದ ಪ್ರಕಟಣೆಯಲ್ಲಿ ಧರ್ಮೇಂದ್ರ ಪ್ರಧಾನ್‌ ಮತ್ತು ಅಣ್ಣಾಮಲೈ ಅವರ ಹೆಸರುಗಳು ಮಾತ್ರ ಇತ್ತು. ಆದರೆ, ಸಂಜೆ ಹೊತ್ತಿಗೆ ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯ ಅವರ ಹೆಸರು ಸೇರಿಸಿ ಪರಿಷ್ಕೃತ ಪ್ರಕಟಣೆ ಹೊರಡಿಸಲಾಯಿತು.

ಕಳೆದ ಕೆಲವು ದಿನಗಳಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯೆಲ್ ಅವರ ಚುನಾವಣಾ ಉಸ್ತುವಾರಿಯಾಗಿ ನೇಮಕವಾಗಲಿದ್ದಾರೆ ಎಂಬ ವದಂತಿ ಬಿಜೆಪಿ ಪಾಳೆಯದಿಂದಲೇ ದಟ್ಟವಾಗಿ ಹಬ್ಬಿತ್ತು. ಆದರೆ ಶನಿವಾರ ನೇಮಕ ಪ್ರಕಟಣೆ ಹೊರಬಿದ್ದಾಗ ಅವರ ಹೆಸರು ಇರಲಿಲ್ಲ. ಈಗ ಚುನಾವಣಾ ಉಸ್ತುವಾರಿಯಾಗಿ ನೇಮಕವಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು 2011ರಿಂದ 2013ರವರೆಗೆ ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಆ ವೇಳೆ ಅವರು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. 

ದೆಹಲಿಗೆ ತೆರಳಿದ ಪರಮೇಶ್ವರ್‌: ಸೋನಿಯಾ ಭೇಟಿ ಯತ್ನ

ಅದಕ್ಕೂ ಮೊದಲು ಪ್ರಧಾನ್‌ ಅವರು ಅರುಣ್‌ ಸಿಂಗ್‌ ಅವರು ಉಸ್ತುವಾರಿ ಆಗಿದ್ದ ವೇಳೆ ಸಹ ಉಸ್ತುವಾರಿಯಾಗಿ ಜವಾಬ್ದಾರಿ ನಿಭಾಯಿಸಿದ್ದರು. ಕರ್ನಾಟಕ ರಾಜಕಾರಣ ಬಗ್ಗೆ ಪರಿಚಿತರಾಗಿರುವ ಧರ್ಮೇಂದ್ರ ಪ್ರಧಾನ್‌ ಅವರು ಈ ಬಾರಿ ಚುನಾವಣಾ ಉಸ್ತುವಾರಿಯಾಗಿ ಪಕ್ಷ ಗೆಲ್ಲಲು ತಂತ್ರ ರೂಪಿಸಲಿದ್ದಾರೆ. ಇನ್ನು ಸಹ ಉಸ್ತುವಾರಿಯಾಗಿ ನೇಮಕಗೊಂಡಿರುವ ಅಣ್ಣಾಮಲೈ ಅವರು ರಾಜ್ಯದಲ್ಲೇ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮತ್ತೊಬ್ಬ ಸಹ ಉಸ್ತುವಾರಿ ಮನ್ಸುಖ್‌ ಮಾಂಡವಿಯ ಅವರೂ ಚುನಾವಣಾ ತಂತ್ರ ರೂಪಿಸುವಲ್ಲಿ ಪರಿಣಿತರು ಎನ್ನಲಾಗಿದೆ.