ಮನೆಮುಂದೆ ಡ್ಯಾನ್ಸ್ ಮಾಡಬೇಡಿ ಎಂದಿದ್ದಕ್ಕೆ ಹೆತ್ತತಾಯಿ ಎದುರೇ ಇರಿದು ಯುವಕನ ಹತ್ಯೆ
ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆಎರಡು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಡ್ರ್ಯಾಗರ್‌ನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಅ.10) : ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆಎರಡು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಡ್ರ್ಯಾಗರ್‌ನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಡುಗೋಡಿಯ ಎ.ಕೆ ಕಾಲೋನಿ ನಿವಾಸಿ ಶ್ರೀನಿವಾಸ (25) ಕೊಲೆಯಾದ ದುರ್ದೈವಿ. ಘಟನೆಯಲ್ಲಿ ಶ್ರೀನಿವಾಸ್ ತಾಯಿ ಇಂದಿರಾ, ಸ್ನೇಹಿತ ರಂಜಿತ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಘಟನೆ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಶಹಾಪುರ: 16 ಕುರಿಗಳ ಕತ್ತು ಸೀಳಿ ಹತ್ಯೆಗೈದ ಕಿಡಿಗೇಡಿಗಳು, ಕಣ್ಣೀರಿಡುತ್ತಿರುವ ಕುರಿಗಾಹಿ
ಘಟನೆ ವಿವರ
ಕೊಲೆಯಾದ ಶ್ರೀನಿವಾಸ್ ಕೋರಿಯರ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಗಣೇಶ ಹಬ್ಬದ ಪ್ರಯುಕ್ತ ವಿನಯ್, ಅಲೆಕ್ಸ್, ರಂಜಿತ್, ಪ್ರಶಾಂತ್ ಸೇರಿದಂತೆ ಕೆಲ ಸ್ನೇಹಿತರು ತಮ್ಮ ಏರಿಯಾದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದರು. ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಶ್ರೀನಿವಾಸ್ ಮತ್ತು ವಿನಯ್ ನಡುವೆ ಜಗಳ ನಡೆದಿತ್ತು.
ಭಾನುವಾರ ರಾತ್ರಿ ಏರಿಯಾದಲ್ಲಿ ಬೇರೊಂದು ಗಣೇಶಮೂರ್ತಿ ವಿಸರ್ಜನಾ ಮೆರವಣೆಗೆ ನಡೆಯುತ್ತಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಮೆರವಣಿಗೆ ಶ್ರೀನಿವಾಸ್ ಮನೆ ಎದುರು ಸಾಗುತ್ತಿತ್ತು. ಈ ವೇಳೆ ವಿನಯ್ ಹಾಗೂ ಸ್ನೇಹಿತರಿಗೆ ನಮ್ಮ ಮನೆ ಮುಂದೆ ಡ್ಯಾನ್ಸ್ ಮಾಡಬೇಡಿ ಎಂದು ಶ್ರೀನಿವಾಸ್ ಹೇಳಿದ್ದಾನೆ. ಈ ವಿಚಾರಕ್ಕೆ ಶ್ರೀನಿವಾಸ್ ಹಾಗೂ ವಿನಯ್ ಕಡೆಯವರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ.
ಮತ್ತೆ ಜಗಳ ತೆಗೆದು ಕೊಲೆ:
ಕೆಲ ಹೊತ್ತಿನ ಬಳಿಕ ವಿನಯ್, ರಂಜಿತ್, ಅಲೆಕ್ಸ್ ಸೇರಿದಂತೆ ಕೆಲವರು ಮತ್ತೆ ಶ್ರೀನಿವಾಸ್ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ನಮಗೆ ಮನೆ ಬಳಿ ಡ್ಯಾನ್ಸ್ ಮಾಡಬೇಡಿ ಎನ್ನುವೆಯಾ ಎಂದು ಜಗಳಕ್ಕೆ ಬಿದ್ದಿದ್ದಾರೆ. ಈ ವೇಳೆ ಡ್ರ್ಯಾಗರ್ ತೆಗೆದು ಶ್ರೀನಿವಾಸ್‌ನ ಹೊಟ್ಟೆಗೆ ಇರಿದಿದ್ದಾರೆ. ಜಗಳ ಬಿಡಿಸಲು ಬಂದ ಶ್ರೀನಿವಾಸ್ ತಾಯಿ ಇಂದಿರಾ ಹಾಗೂ ಸ್ನೇಹಿತ ರಂಜಿತ್‌ಗೂ ಗಾಯವಾಗಿದೆ.
ಒಬ್ಬ ಉಗ್ರರನನ್ನೂ ಉಳಿಸಲ್ಲ, ಹಮಾಸ್ ಉಗ್ರರ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಆರಂಭ!
ಡ್ರ್ಯಾಗರ್ ಇರಿತದಿಂದ ಕುಸಿದು ಬಿದ್ದ ಶ್ರೀನಿವಾಸ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಶ್ರೀನಿವಾಸ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.