Breaking : HD Revanna Arrest ದೇವೇಗೌಡರ ನಿವಾಸದಲ್ಲೇ ರೇವಣ್ಣ ಬಂಧಿಸಿದ SIT
ಜನಪ್ರತಿನಿಧಿಗಳ ನ್ಯಾಯಾಲಯ ಹೆಚ್ ಡಿ ರೇವಣ್ಣಗೆ ಜಾಮೀನು ನಿರಾಕರಿಸಿದ ಇದರ ಬೆನ್ನಲ್ಲೇ ಹೆಚ್ ಡಿ ರೇವಣ್ಣ ಅವರನ್ನು ಮಾಜಿ ಪ್ರಧಾನಿ ದೇವೇಗೌಡ ಮನೆಯಲ್ಲಿ ಬಂಧಿಸಲಾಗಿದೆ.
ಬೆಂಗಳೂರು (ಮೇ.4): ಪ್ರಕರಣವನ್ನು ಮುಚ್ಚಿ ಹಾಕಲು ಸಂತ್ರಸ್ಥೆಯ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೆಚ್ ಡಿ ರೇವಣ್ಣಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನವಾಗಿದೆ. ತಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪದ್ಮನಾಭನಗರ ನಿವಾಸದಲ್ಲಿ ರೇವಣ್ಣ ಅವನ್ನು ಎಸ್ಐಟಿ ಬಂಧಿಸಿದೆ. ರೇವಣ್ಣ ದೇವೇಗೌಡರ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ ಎಸ್ಐಟಿ ಗೆ ಮಾಹಿತಿ ಇತ್ತು. ಹೀಗಾಗಿ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ನೇರವಾಗಿ ದೇವೇಗೌಡರ ನಿವಾಸಕ್ಕೆ ಎಸ್‌ಐಟಿ ತಂಡ ಬಂದಿತ್ತು. ಕೆ.ಆರ್.ನಗರ ಠಾಣೆಯಲ್ಲಿ ಅಪಹರಣ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಬಳಿಕ ರೇವಣ್ಣಗಾಗಿ ಎಸ್‌ಐಟಿ ತೀವ್ರ ಹುಡುಕಾಟ ನಡೆಸುತ್ತಿತ್ತು.
ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಆಗಿದ್ದ ಸಂತ್ರಸ್ಥೆ ರೇವಣ್ಣ ಆಪ್ತನ ಹುಣಸೂರು ತೋಟದ ಮನೆಯಲ್ಲಿ ಪತ್ತೆ
ಹೊಳೆನರಸೀಪುರದಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಾಗಿದ್ದು, ಈ ಪ್ರಕರಣದಲ್ಲಿ ದೇವೇಗೌಡ ಎ1 ಆರೋಪಿ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದರೂ ಇದುವರೆಗೆ ರೇವಣ್ಣ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇನ್ನು ಮೈಸೂರಿನ ಕೆಆರ್ ನಗರದಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೈಸೂರಿನಲ್ಲಿ ಕೂದಲೆಳೆಯ ಅಂತರದಲ್ಲಿ ಮಿಸ್ ಆಗಿದ್ದ ಹೆಚ್.ಡಿ.ರೇವಣ್ಣ ಬೆಳಗ್ಗೆಯಿಂದ ತಲೆ ಮರೆಸಿಕೊಂಡಿದ್ದರು. ಕೆ.ಆರ್.ನಗರ ಎಫ್ಐಆರ್ ವಿಷಯ ತಿಳಿದ ಕ್ಷಣದಿಂದ ತಲೆಮರೆಸಿಕೊಂಡಿದ್ದರು.
ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್; ಬಂಧನ ಭೀತಿ
ಇಂದು ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್‌ಐಟಿ ತಂಡ ನೇರವಾಗಿ ಬಂದು ರೇವಣ್ಣ ಅವರನ್ನು ಬಂಧಿಸಿದೆ. ಇನ್ನೊಂದೆಡೆ ಈ ಪ್ರಕರಣ ಜಾಮೀನು ಅರ್ಜಿ ವಿಚಾರಣೆ ಮೇ.6 ರಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಲಿದೆ. ಈಗ ಇವರ ಬಂಧನವಾಗಿದ್ದು, ಸದ್ಯ ಎಸ್‌ಐಟಿ ಇಂದು ವಿಚಾರಣೆ ನಡೆಸಲಿದೆ. ಇಂದು ವಿಚಾರಣೆ ನಡೆಸಿ ನಾಳೆ ಮಧ್ಯಾಹ್ನದ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದೆ ಎಂದು ವರದಿ ತಿಳಿಸಿದೆ.
ಮೈಸೂರಿನ ಕೆ ಆರ್ ನಗರ ಸಂತ್ರಸ್ಥೆಯ ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ A1 ಆರೋಪಿಯಾಗಿದ್ದು, ಸತೀಶ್ ಬಾಬು ಎರಡನೇ ಆರೋಪಿ. ಸತೀಶ್ ಬಾಬು ಅವರನ್ನು ನಿನ್ನೆ ಬಂಧಿಸಲಾಗಿತ್ತು. ಇನ್ನು ರೇವಣ್ಣ ಬಂಧನದ ಬೆನ್ನಲ್ಲೇ ಸಹೋದರ ಹೆಚ್ ಡಿ ಕುಮಾರಸ್ವಾಮಿ ಅವರು ಆಪ್ತರೊಂದಿಗೆ ಗುಪ್ತ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ಒಂದು ಗಂಟೆಯಿಂದಲೇ ಖಾಸಗಿ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಹೋಟೆಲ್ ನಲ್ಲೇ ಕುಳಿತು ಎಲ್ಲಾ ಬೆಳವಣಿಗೆ ಗಳನ್ನು ಮಾಧ್ಯಮದ ಮೂಲಕವೇ ವೀಕ್ಷಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಆಪ್ತರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಜಿಟಿ ದೇವೇಗೌಡ, ಪುಟ್ಟರಾಜ ಸೇರಿದಂತೆ ಕೆಲ ಆಪ್ತರ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಮುಂದಿನ ನಡೆಗಳ ಬಗ್ಗೆ ಕುಮಾರಸ್ವಾಮಿ ಸಲಹೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ರಹಸ್ಯ ಮಾತುಕತೆ ಮುಗಿಸಿ ನಿಖಿಲ್ ಕುಮಾರಸ್ವಾಮಿ ಹೋಟೆಲ್ ನಿಂದ ತೆರಳಿದ್ದಾರೆ.