ಶಹಾಪುರ: 16 ಕುರಿಗಳ ಕತ್ತು ಸೀಳಿ ಹತ್ಯೆಗೈದ ಕಿಡಿಗೇಡಿಗಳು, ಕಣ್ಣೀರಿಡುತ್ತಿರುವ ಕುರಿಗಾಹಿ
ಅಂದಾಜು 3 ಲಕ್ಷ ರು.ಗಳ ಮೌಲ್ಯದ ಕುರಿಗಳನ್ನು ನಷ್ಟ ಉಂಟು ಮಾಡಿದ್ದಾರೆ. ನನಗೆ ನ್ಯಾಯ ದೊರಕಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ ಕುರಿಯ ಮಾಲೀಕ ಮಲ್ಲಪ್ಪ
ಶಹಾಪುರ(ಅ.08): ತಾಲೂಕಿನ ಮಂಡಗಳ್ಳಿ ಗ್ರಾಮದ ಮನೆ ಹತ್ತಿರದಲ್ಲಿ ಹಾಕಲಾದ ಕುರಿ ಹಟ್ಟಿಯಲ್ಲಿನ 16 ಕುರಿಗಳ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಮಲ್ಲಪ್ಪಗೆ ಸೇರಿದ ಕುರಿಗಳು ಕಳೆದ ಏಳೆಂಟು ತಿಂಗಳ ಹಿಂದೆಯಷ್ಟೇ ಕುರಿ ಸಾಕಾಣಿಕೆಗಾಗಿ 40 ಕುರಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ.
ಶುಕ್ರವಾರ ತಡರಾತ್ರಿ ಸಮಯದಲ್ಲಿ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ಮಲ್ಲಪ್ಪ ಹಟ್ಟಿ ಬಿಟ್ಟು ಮನೆಯಲ್ಲಿ ಮಲಗಿದ್ದರು. ಕಿಡಿಗೇಡಿಗಳು 16 ಕುರಿಗಳ ಕತ್ತು, ಹೊಟ್ಟೆ ಸೀಳಿ ಕುರಿಗಳನ್ನು ಹತ್ಯೆ ಮಾಡಿದ್ದರಿಂದ ಮಲ್ಲಪ್ಪನ ಕುಟುಂಬ ಕಣ್ಣೀರಿಡುತ್ತಿದೆ. ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಬೇರೆಯವರ ಹತ್ರ ಸಾಲ ಮಾಡಿ ಕುರಿ ಸಾಕಾಣಿಕೆ ಮಗ ಮಾಡಿದ್ದಾನೆ. ಪ್ಯಾಟ್ಯಾಗಿನಿಂದ 40 ಕುರಿಗಳನ್ನು ತಂದಿದ್ದೇವೆ. ಅವುಗಳಿಂದಲೇ ಜೀವನ ನಡೆಯುತ್ತಿತ್ತು. ದಿಕ್ಕು ದೋಚದಂತಾಗಿದೆ ಎಂದು ಮಲ್ಲಪ್ಪನ ತಾಯಿ ತಿಮ್ಮವ್ವ ಕಣ್ಣೀರು ಹಾಕಿದ್ದಾರೆ.
ಬೀದರ್‌ನಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಶೀಘ್ರ ಕ್ರಮ: ಸಚಿವ ದರ್ಶನಾಪೂರ
ಅಂದಾಜು 3 ಲಕ್ಷ ರು.ಗಳ ಮೌಲ್ಯದ ಕುರಿಗಳನ್ನು ನಷ್ಟ ಉಂಟು ಮಾಡಿದ್ದಾರೆ. ನನಗೆ ನ್ಯಾಯ ದೊರಕಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುರಿಯ ಮಾಲೀಕ ಮಲ್ಲಪ್ಪ ಪೊಲೀಸ್ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಮಂಡಗಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ 6 ಕುರಿಗಳಿಗೆ ಹೊಟ್ಟೆ ಕುತ್ತಿಗೆ ಕೊಯ್ದಿದ್ದು ಮೃತಪಟ್ಟಿವೆ. 3 ಕುರಿಗಳಿಗೆ ಕಾಲು ಮತ್ತು ಕುತ್ತಿಗೆ (ಗೋಣು) ಮುರಿದಿದ್ದಾರೆ. 2 ಕುರಿಗಳು ಗಂಭೀರ ಗಾಯಗೊಂಡಿವೆ. ಚಿಕಿತ್ಸೆ ನೀಡಲಾಗಿದೆ. ಕುರಿ ಮಂಡಳಿಯ ಅನುಗ್ರಹ ಯೋಜನೆಯಲ್ಲಿ ಮೃತಪಟ್ಟ ಪ್ರತಿ ಕುರಿಗೆ 5 ಸಾವಿರ ರು.ಗಳು ಪರಿಹಾರ ನೀಡಲು ಅವಕಾಶವಿದೆ ಎಂದು ಶಹಾಪುರ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ಷಣ್ಮುಖಪ್ಪ ಗೊಂಗಡಿ ತಿಳಿಸಿದ್ದಾರೆ.