Madikeri honey trap case :ಫೇಸ್ಬುಕ್‌ನಲ್ಲಿ ಪರಿಚಯವಾದ ಮಡಿಕೇರಿಯ ಯುವತಿಯನ್ನು ಭೇಟಿಯಾಗಲು ಬಂದ ಮಂಡ್ಯದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಇದು ಹನಿಟ್ರ್ಯಾಪ್ ಕೃತ್ಯ ಎಂದು ಶಂಕಿಸಲಾಗಿದ್ದು, ಯುವತಿ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
- ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.13): ಫೇಸ್ಬುಕ್ ನಲ್ಲಿ ಚಿಟ್ಟೆಯ ಮುಖ ನೋಡಿದವನು ದೀಪದ ಬೆಳಕ ಕಂಡ ಪತಂಗದಂತೆ ಆಗಿದ್ದ. ಮಧು ಹೀರಲು ಬಂದವನು ಬದುಕಿದರೆ ಸಾಕು ಎಂದು ಅರೆಬೆತ್ತಲೆಯಲ್ಲಿ ಬೀದಿ ಬೀದಿಯಲ್ಲಿ ಓಡಿದ್ದ. ಹನಿ ಹೀರಲು ಬಂದವನೇ ಟ್ರ್ಯಾಪ್ ಆದವನ ಕಹಾನಿಯನ್ನು ನೀವು ನೋಡ್ಲೇಬೇಕು.
ಎಸ್ ಈತ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರಿನವನು. ಈಕೆ ಮಂಜಿನ ನಗರಿ ಮಡಿಕೇರಿಯವಳು. ಇವರಿಬ್ಬರಿಗೂ ಫೇಸ್ಬುಕ್ನಲ್ಲಿ ಪರಿಚಯವಾಗಿತ್ತು. ಹೀಗೆ ಬಣ್ಣ ಬಣ್ಣದ ಡ್ರಸ್ಗಳ ತೊಟ್ಟ ಆಕೆಯ ಚಂದಕ್ಕೆ ಮರುಳಾಗಿ ಆ ಪರಿಚಯ ಸಲಿಗೆಗೆ ತಿರುಗಿತ್ತು. ಹೀಗೆ ತನ್ನ ನೋಟದಿಂದಲೇ ಆತನನ್ನು ಸೆಳೆದಿದ್ದ ಆಕೆಯ ಭೇಟಿಯಾಗುವುದಕ್ಕೆ ಮಡಿಕೇರಿಗೆ ಕರೆದಿದ್ದಳು. ಹೀಗಾಗಿಯೇ ಇವನು ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆಯಿಂದ ಮಡಿಕೇರಿಗೆ ಬಂದಿದ್ದ. ಬಂದವನೇ ಆಕೆ ಹೇಳಿದ್ದ ಲೊಕೇಷನ್ಗೆ ತೆರಳಿದ್ದ. ಆ ಲೊಕೇಷನ್ ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ಈ ಮನೆ ಆಗಿತ್ತು ನೋಡಿ.
ಹೌದು ಈ ಮನೆಗೆ ಬಂದವನು ಆಕೆಯೊಂದಿಗೆ ನಿನ್ನೆ ರಾತ್ರಿ ಒಂದು ಗಂಟೆ ಕಳೆದಿದ್ದಾನೆ. ಅಷ್ಟರಲ್ಲಿ ಈಕೆ ಯಾವುದೋ ಫೋನ್ ಬಂತು ಎಂದು ಹೊರಗೆ ಹೋಗಿದ್ದಾಳೆ. ಅಷ್ಟೇ ನೋಡಿ. ನಂತರ ನಡೆದಿದ್ದೆಲ್ಲಾ ಸಂಪೂರ್ಣ ಬೇರೆಯೇ. ಹೌದು ಆಕೆ ಈ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಯಾರೋ ಮೂವರು ಯುವಕರು ಈ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಂದವರೇ ಆತನ ಬಟ್ಟೆಯನ್ನೆಲ್ಲಾ ಬಿಚ್ಚಿಸಿ ಮನಸ್ಸೋ ಇಚ್ಛೆ ಥಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಇಡೀ ರಾತ್ರಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ನಾನು ಬದುಕಿದರೆ ಸಾಕು ಎಂದು ಆತ ಶನಿವಾರ ಬೆಳ್ಳಂಬೆಳಿಗ್ಗೆ ಅರೆಬೆತ್ತಲೆಯಲ್ಲೇ ಮನೆಯಿಂದ ಹೇಗೋ ತಪ್ಪಿಸಿಕೊಂಡು ಮಡಿಕೇರಿಯ ಬೀದಿ ಬೀದಿಗಳಲ್ಲಿ ಓಡಿದ್ದಾನೆ.
ಇದು ಗೊತ್ತಾಗುತ್ತಿದ್ದಂತೆ ಆ ಮೂವರು ಯುವಕರು ಆಟೋ ಒಂದರಲ್ಲಿ ಹಿಂಬಾಲಿಸಿ ಬಂದು ಆತನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಅದೆಲ್ಲವೂ ರಸ್ತೆ ಬದಿಯಲ್ಲಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆತ ನೇರವಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರು ಸದ್ಯ ಆತನಿಗೆ ರಕ್ಷಣೆ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ರಾತ್ರಿ ಘಟನೆ ನಡೆದಿರುವ ಮಂಗಳಾದೇವಿ ನಗರದ ಆ ಮನೆಯ ಬಳಿಗೂ ಮಡಿಕೇರಿ ನಗರ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.
ಸದ್ಯ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಹಲ್ಲೆ ಮಾಡಿದ ಆ ಮೂವರ ಸುಳಿವು ಇನ್ನೂ ದೊರೆತ್ತಿಲ್ಲ. ಹೀಗಾಗಿ ಇದು ಹನಿಟ್ರ್ಯಾಪೋ ಅಥವಾ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ನಡೆದಿರುವ ಹಲ್ಲೆಯೋ ಎನ್ನುವುದು ನಿರ್ಧಾರವಾಗಿಲ್ಲ. ಆದರೆ ಈ ರೀತಿ ಹಲ್ಲೆಯಾಗಿರುವುದಕ್ಕೆ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪ್ರವಾಸೋದ್ಯಮದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹೋಂಸ್ಟೇ, ರೆಸಾರ್ಟ್ಗಳಿದ್ದು ಈ ಘಟನೆ ಅವುಗಳ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಆಗಿದೆ. ಮೇಲ್ನೋಟಕ್ಕೆ ಇದು ಹನಿಟ್ರ್ಯಾಪ್ ಎನ್ನುವಂತೆ ಕಾಣಿಸುತ್ತಿದ್ದು, ಒಂದು ವೇಳೆ ಅದೇ ಆಗಿದ್ದರೆ, ಸಂಬಂಧಿಸಿದ ಮಹಿಳೆ ಮತ್ತು ಹಲ್ಲೆ ನಡೆಸಿರುವ ಮೂವರು ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಪ್ರಸನ್ನ ಭಟ್ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಫೇಸ್ಬುಕ್ನಲ್ಲಿ ಆದ ಪರಿಚಯದಿಂದ ಸಲಿಗೆಗೆ ತಿರುಗಿ ಅದನ್ನೇ ಬಳಸಿಕೊಂಡು ವ್ಯಕ್ತಿಯ ಮೇಲೆ ಹನಿಟ್ರ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಗೆ ಬರಬೇಕಾಗಿದೆ.


