ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ನಂಬಿ ವಾರಣಾಸಿಯಿಂದ ಅಸ್ಸಾಂಗೆ ಬಂದ62ರ ವೃದ್ಧನಿಗೆ ಮೋಸ ಆಗಿದೆ. ಮದುವೆಯಾಗುವ ಭರವಸೆ ನೀಡಿ ವಂಚಿಸಿದ ಯುವತಿಯಿಂದ ವೃದ್ಧ ಆಘಾತಕ್ಕೊಳಗಾಗಿದ್ದಾನೆ.
ಇದು ಸಾಮಾಜಿಕ ಜಾಲತಾಣದ ಯುಗ ಪ್ರೀತಿಯಿಂದ ಹಿಡಿದು ಮದುವೆಯೂ ಆನ್‌ಲೈನ್‌ನಲ್ಲಿ ಆಗುವುದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಅರಸಿ ಹೊರಟ 62ರ ಹರೆಯದ ವೃದ್ಧನಿಗೆ ಶಾಕ್ ಆಗಿದ್ದು, ಮನಸ್ಸು ಒಡೆದು ಹೋಗಿದೆ. ಹಾಗಿದ್ದರೆ ಆಗಿದ್ದೇನು?
62ರ ವೃದ್ಧನಿಗಾಯ್ತು ಫೇಸ್‌ಬುಕ್ ಪ್ರೀತಿ
62ರ ವೃದ್ಧರೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದ್ದು, ಪ್ರೀತಿಯೂ ಆಗಿದೆ. ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅರಸಿ ಈ ಅಜ್ಜ ಉತ್ತರಪ್ರದೇಶದ ವಾರಣಾಸಿಯಿಂದ ಅಸ್ಸಾಂನ ಶಿವಸಾಗರಕ್ಕೆ ಬಂದಿಳಿದಿದ್ದಾರೆ. ಆದರೆ ಅಲ್ಲಿ ಅವರಿಗೆ ಬ್ರೇಕಪ್ ಆಗಿದೆ.
ವೃದ್ಧನಿಗೆ ಮದುವೆಯಾಗುವೆ ಎಂಬ ಭರವಸೆ ನೀಡಿದ್ದ 26ರ ಯುವತಿ
ಈ 26ರ ಯುವತಿಗೆ ಅದೇನು ಹುಚ್ಚು ಹಿಡಿದಿತ್ತೋ ಗೊತ್ತಿಲ್ಲ, ಫೇಸ್‌ಬುಕ್‌ನಲ್ಲಿ ಸಿಕ್ಕ ವಾರಣಾಸಿ ಮೂಲದ ಈ ವೃದ್ಧನಿಗೆ ಈಕೆ ಮದುವೆಯಾಗುವ ಭರವಸೆ ನೀಡಿದ್ದಳಂತೆ, ಈಕೆಯ ಪ್ರೀತಿಯ ಭರವಸೆಯನ್ನು ನಂಬಿದ ವೃದ್ಧ ಯುವತಿ ಇರುವ ಅಸ್ಸಾಂಗೆ ರೈಲು ಏರಿಯೇ ಬಿಟ್ಟಿದ್ದಾನೆ.
ವೃದ್ಧನ ನೋಡಿ ಮದುವೆ ನಿರಾಕರಿಸಿದ ಯುವತಿ:
ಹೀಗೆ ಅಸ್ಸಾಂನ ಶಿವಸಾಗರ ತಲುಪಿದ ವೃದ್ಧ ಯುವತಿ ಮನೆಮುಂದೆ ಬಂದು ನಿಂತಿದ್ದಾನೆ. ಆದರೆ ಯುವತಿ ಮಾತ್ರ ಆತನನ್ನು ನೋಡಿದ ಮೇಲೆ ಮದುವೆಯಾಗುವುದಕ್ಕೆ ನಿರಾಕರಿಸಿದ್ದಾರೆ. ಬರೀ ಇಷ್ಟೇ ಅಲ್ಲ ಈ ಇಳಿವಯಸ್ಸಿನಲ್ಲಿ ಮಗಳ ವಯಸ್ಸಿನ ಪ್ರಾಯದ ಯುವತಿಯ ಪ್ರೀತಿ ಅರಸಿ ಬಂದ ವೃದ್ಧ ಅಲ್ಲಿ ಗ್ರಾಮಸ್ಥರ ಕೋಪಕ್ಕೂ ತುತ್ತಾಗಿದ್ದಾರೆ. ನಂತರ ಪೊಲೀಸರು ಬಂದು ಪರಿಸ್ಥಿತಿ ನಿಭಾಯಿಸಿದ್ದಾರೆ.
ಮದುವೆಯಾಗುವ ಭರವಸೆ ನೀಡಿದಳು ಅದಕ್ಕೆ ಬಂದೆ ಎಂದ ವೃದ್ಧ:
ಈ ಘಟನೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವೀಡಿಯೋದಲ್ಲಿ ಜನರು ಅಲ್ಲಿ ಸೇರಿ ವೃದ್ಧನ ಮೇಲೆ ಹಲ್ಲೆಗೆ ಮುಂದಾಗುವುದನ್ನು ಕಾಣಬಹುದು. ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ವೇಳೆ ಈ ವೃದ್ಧನ ಬಳಿ ಏಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದಾಗ ಈ ವೃದ್ಧ ವ್ಯಕ್ತಿ ತಮ್ಮ ಫೇಸ್‌ಬುಕ್ ಪ್ರೀತಿಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ತಾನು ಬನಾರಸ್‌ನಿಂದ ಬಂದಿದ್ದೇನೆ. ನನಗೆ 3 ವರ್ಷದಿಂದ ಆ ಹುಡುಗಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು. ನಾವು ಮೂರು ವರ್ಷದಿಂದ ಮಾತನಾಡುತ್ತಿದ್ದೆವು. ಆಕೆ ತಾನು ನಿಮ್ಮನ್ನು ಮದುವೆಯಾಗಲು ಸಿದ್ಧಳಿದ್ದೇನೆ ಎಂದು ಹೇಳಿದ್ದಳು ಅದೇ ಕಾರಣಕ್ಕೆ ಇಲ್ಲಿಗೆ ಬಂದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ಆಯ್ತು. ಇಂತಹ ಜನರು ಇರ್ತಾರೆ ಎಂದು ನನಗೇನೂ ಗೊತ್ತು ಮೊದಲೇ ಗೊತ್ತಾಗಿದ್ದರೆ ಬರ್ತಾನೆ ಇರಲಿಲ್ಲ ಎಂದು ಆ ವೃದ್ಧ ಬಹಳ ದುಃಖಿತನಾಗಿ ಹೇಳಿದ್ದಾರೆ. ಈ ವೃದ್ಧನನ್ನು ಬನರಾಸ್‌ನ ಮನೀಶ್ ಗುಪ್ತಾ ಎಂದು ಗುರುತಿಸಲಾಗಿದೆ. ಅಸ್ಸಾಂನ ಜೆಂಗೊನಿಕಾಟಿಯಾ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡ್ತಿದ್ದ ಮಹಿಳೆ ವೃದ್ಧನಿಗೆ ಹೀಗೆ ಮದುವೆಯ ಆಮಿಷ ಒಡ್ಡಿ ಕೈಕೊಟ್ಟಕ್ಕೆ. ಈ ವಿಚಾರ ಸ್ಥಳೀಯರಿಗೆ ಗೊತ್ತಾಗಿ ಅಲ್ಲಿ ಜನ ಸೇರಿ ದೊಡ್ಡ ಗಲಾಟೆಯಾಗಿದ್ದು ನಂತರ ವೃದ್ಧ ಮನೀಶ್ ಗುಪ್ತಾ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ವೃದ್ಧ ಪೋಷಕರಿಗೆ ಫೋನ್ ನೀಡುವ ಮೊದಲು ಎಚ್ಚರ:
ಆದರೆ ಈಗಿನ ಕಾಲದಲ್ಲಿ ಯಾರನ್ನೂ ನಂಬಲಾಗದು ಹೀಗಾಗಿ ಈ ವೃದ್ಧನಿಗೆ ಹೆಂಡ್ತಿ ಮಕ್ಕಳಿದ್ದಾರೋ ಇಲ್ಲವೋ ಅಥವಾ ಒಂಟಿಯಾಗಿದ್ದಾನೋ ಈ ಯಾವ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇಳಿವಯಸ್ಸಿನಲ್ಲಿ ಅನೇಕ ವೃದ್ಧರೂ ಮಕ್ಕಳಂತಾಗಿ ಬಿಡುತ್ತಾರೆ. ಮಾತಿಗೂ ಮಿದುಳಿಗೂ ಕನೆಕ್ಷನ್ ಇರುವುದಿಲ್ಲ, ತಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವಿರುವುದಿಲ್ಲ, 60 ಕಳೆದ ಮೇಲೆ ಅರಳು ಮರಳು ಎಂಬಂತೆ ವರ್ತಿಸುತ್ತಿರುತ್ತಾರೆ. ಹೀಗಿರುವಾಗ ಇಂತಹವರ ಕೈಗೆ ಮೊಬೈಲ್ ಸಿಕ್ಕರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತಾಗುತ್ತದೆ. ಏನೂ ಮಾಡುತ್ತಿದ್ದೇವೆ ಎಂಬುವುದರ ಯೋಚನೆಯೂ ಇರುವುದಿಲ್ಲ, ಇದರ ಜೊತೆಗೆ ಇತ್ತೀಚೆಗೆ ಹೊಸದಾಗಿ ಆರಂಭವಾಗಿರುವ ಆನ್‌ಲೈನ್ ಸ್ಕ್ಯಾಮ್‌ಗಳಿಗೆ ಇಂತಹವರೇ ಹೆಚ್ಚಾಗಿ ಬಲಿಯಾಗ್ತಿದ್ದಾರೆ. ಇಳಿವಯಸ್ಸಿನಲ್ಲಿ ಮಾನದ ಜೊತೆಗೆ ಹಣವೂ ಹೋಗಿ ಕಂಗಾಲಾಗಿ ಸಾವಿನ ದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ವೃದ್ಧ ಪೋಷಕರ ಕೈಗೆ ಸ್ಮಾರ್ಟ್ ಫೋನ್ ಕೊಡುವ ಮೊದಲು ಎಚ್ಚರ ವಹಿಸುವುದು ಬಹಳ ಅಗತ್ಯ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಇದನ್ನೂ ಓದಿ: ನಂಗೆ ಕನ್ನಡ ಬರುತ್ತೆ ಎಂದ ಮುಂಬೈಕರ್‌ಗೆ ರಾಜಾತಿಥ್ಯ ನೀಡಿದ ಕನ್ನಡಿಗರು
ಇದನ್ನೂ ಓದಿ: ಟೇಕಾಫ್‌ಗೆ ಸಿದ್ಧಗೊಳ್ಳುತ್ತಿದ್ದಾಗ ಬಡಿದ ಹಕ್ಕಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ರದ್ದು
