ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ, ದಿವ್ಯಾಂಗ ಯುವತಿಯ ಮೇಲೆ ಬಲತ್ಕಾರ ಎಸಗಿದ ನೆರೆಮನೆಯ ಯುವಕ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಮದುವೆಗೆ ನಿರಾಕರಿಸಿದ್ದರಿಂದ, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ (ಡಿ.13): ದಿವ್ಯಾಂಗ ಯುವತಿಯ ಮೇಲೆ ಬಲತ್ಕಾರ ನಡೆಸಿ, ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರಿಗೂ ಹೇಳದಂತೆ ಆರೋಪಿ ಬೆದರಿಕೆ:
ಪುರ ಗ್ರಾಮದ ನಿವಾಸಿ ರಮ್ಯಾ (26) ದೂರು ನೀಡಿದ ಯುವತಿಯಾಗಿದ್ದು, ಇವರು ದಿವ್ಯಾಂಗರಾಗಿದ್ದಾರೆ. ರಮ್ಯಾ ಮನೆಯಲ್ಲಿ ಒಬ್ಬರೇ ಇದ್ದಾಗ, ಪಕ್ಕದ ಮನೆಯ ಪೃಥ್ವಿ ಎಂಬಾತ ಈಕೆಯ ಮೇಲೆ ಬಲತ್ಕಾರ ಎಸಗಿದ್ದಾನೆ. ಆದರೆ ಈ ವಿಷಯವನ್ನು ಯಾರಿಗೂ ಹೇಳದಂತೆ ಆತ ಸಂತ್ರಸ್ತೆಗೆ ನಿರಂತರ ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ಈ ವಿಚಾರ ಯಾರಿಗಾದರೂ ಹೇಳಿದರೆ, ರಮ್ಯಾ ಅವರ ಅಪ್ಪ, ಅಮ್ಮನನ್ನು ಕೊಲ್ಲುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಸಂತ್ರಸ್ತೆ ಗರ್ಭಿಣಿ: ಮದುವೆಯಾಗಲು ನಿರಾಕರಿಸಿ ಮೋಸ:
ಕಳೆದ ಅಕ್ಟೋಬರ್ ತಿಂಗಳಲ್ಲಿ ರಮ್ಯಾ ಅವರಿಗೆ ವಾಂತಿ ಶುರುವಾಗಿದ್ದರಿಂದ, ವೈದ್ಯರ ಬಳಿ ತಪಾಸಣೆ ಮಾಡಿಸಿದ್ದಾರೆ. ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿಸಿದಾಗ ರಮ್ಯಾ ಅವರು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ರಮ್ಯಾ ಅವರು ಪೃಥ್ವಿಯ ಕುಟುಂಬದವರೊಂದಿಗೆ ಮದುವೆ ಮಾಡುವಂತೆ ಮಾತುಕತೆ ನಡೆಸಿದ್ದರು. ಆರಂಭದಲ್ಲಿ ಮದುವೆಗೆ ಒಪ್ಪಿದ್ದ ಪೃಥ್ವಿ ಮತ್ತು ಆತನ ಮನೆಯವರು, ಇದೀಗ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ರಮ್ಯಾ ತಮ್ಮ ಮೇಲೆ ನಡೆದ ದೌರ್ಜನ್ಯ ಹಾಗೂ ಮೋಸದ ಕುರಿತು ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪೃಥ್ವಿ ವಿರುದ್ಧ ತನಿಖೆ ಕೈಗೊಂಡಿದ್ದಾರೆ.

