ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ, ಯುವತಿಯಿಂದ 4.5 ಲಕ್ಷ ರೂ. ಹಣ ಪಡೆದು, ತಾನು ವಿಚ್ಛೇದಿತ ಎಂಬ ಸತ್ಯ ಮುಚ್ಚಿಟ್ಟು ಈಗ ಬೇರೆ ಮದುವೆಗೆ ಸಿದ್ಧತೆ. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ಯುವತಿ, ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಯುವಕನ ಮನೆ ಮುಂದೆ ನ್ಯಾಯಕ್ಕಾಗಿ ಗಲಾಟೆ ನಡೆಸಿದ್ದಾರೆ.

ಚಿಕ್ಕಮಗಳೂರು(ಡಿ.13): ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸಿದ ಯುವತಿಗೆ ಮೋಸ ಮಾಡಿ, ಆಕೆಯಿಂದ ಹಣ ಪಡೆದು, ಈಗ ಬೇರೆ ಮದುವೆಗೆ ಸಿದ್ಧನಾಗಿದ್ದ ಯುವಕನ ಮನೆ ಮುಂದೆ ಸಂತ್ರಸ್ತ ಯುವತಿ ಗಲಾಟೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿವೋರ್ಸ್ ಆದ ವಿಷಯ ಮುಚ್ಚಿಟ್ಟು ಪ್ರೀತಿ!

ಹಾಸನ ಜಿಲ್ಲೆಯ ಬೇಲೂರು ಮೂಲದವರಾದ ಅಶ್ವಿನಿ ಎಂಬ ಯುವತಿ, ಕಲ್ಯಾಣ ನಗರದ ನಿವಾಸಿ ಶರತ್ ಎಂಬ ಯುವಕನನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಶರತ್‌ನು ಅಶ್ವಿನಿಯಿಂದ 4.5 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದ ಎನ್ನಲಾಗಿದೆ. ಆದರೆ, ಶರತ್‌ಗೆ ಈ ಮೊದಲೇ ಮದುವೆಯಾಗಿ ಕೇವಲ ಎರಡು ತಿಂಗಳಲ್ಲಿ ವಿಚ್ಛೇದನ (Divorce) ಆಗಿರುವ ವಿಷಯವನ್ನು ಮುಚ್ಚಿಟ್ಟು ಅಶ್ವಿನಿಯನ್ನು ಪ್ರೀತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮದುವೆಯಾಗುವುದಾಗಿ ಅಶ್ವಿನಿಯ ತಾಯಿಯ ಬಳಿಗೂ ಹೋಗಿ ಭರವಸೆ ನೀಡಿದ್ದ ಕಾರಣ, ಅಶ್ವಿನಿ ತಾಯಿ ಮಗಳಿಗೆ ಬಂದಿದ್ದ ಐದು ಉತ್ತಮ ಮದುವೆ ಸಂಬಂಧಗಳನ್ನು ನಿರಾಕರಿಸಿದ್ದರು.

ನ್ಯಾಯಕ್ಕಾಗಿ ಯುವಕನ ಮನೆಮುಂದೆ ಅಶ್ವಿನಿ ಗಲಾಟೆ:

ಸದ್ಯ ಶರತ್ ನಾಳೆ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ, ಇಂದು ಚಿಕ್ಕಮಗಳೂರು ತಾಲೂಕಿನ ಕಲ್ಯಾಣ ನಗರದಲ್ಲಿರುವ ಶರತ್‌ನ ಮನೆ ಮುಂದೆ ಬಂದು ನ್ಯಾಯಕ್ಕಾಗಿ ಗಲಾಟೆ ಮಾಡಿದ್ದಾರೆ. 'ಈಗ ನನಗೆ ಮೋಸ ಮಾಡಿದ್ದಾನೆ, ನಾಳೆ ಬೇರೆ ಹುಡುಗಿಗೂ ಮೋಸ ಮಾಡ್ತಾನೆ. ಇವನನ್ನು ಹೀಗೆ ಬಿಡಬಾರದು' ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅಶ್ವಿನಿ ಈಗಾಗಲೇ ಆರೋಪಿ ಶರತ್‌ ವಿರುದ್ಧ ಅಟ್ರಾಸಿಟಿ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಶರತ್ ಎಲ್ಲಾ ಕೇಸ್‌ಗಳಿಗೂ ನ್ಯಾಯಾಲಯದಿಂದ ಸ್ಟೇ ತಂದು ಬೇರೆ ಮದುವೆಯಾಗಲು ಮುಂದಾಗಿರುವುದು ಆಶ್ಚರ್ಯ ತಂದಿದೆ.