ಪತಿ ಮರಣದ ದಿನವೇ ಪತ್ನಿ- ಮಗುವನ್ನು ತಿರಸ್ಕರಿಸಿದ ಕುಟುಂಬ; ಸಖಿ ಸೆಂಟರ್‌ಗೆ ದಾಖಲು 

  • ಪತಿಯ ಮರಣದ ದಿನವೇ ಪತ್ನಿ ಹಾಗೂ ಮಗುವನ್ನು ತಿರಸ್ಕರಿಸಿದ ಕುಟುಂಬ
  • ಸಖಿ ಸೆಂಟರ್‌ಗೆ ಸೇರಿಸಿ ಮಾನವೀಯತೆ ಮೆರೆದ ಮಾಜ ಸೇವಕ ವಿಶು ಶೆಟ್ಟಿ 
  • ಅಯ್ಯಪ್ಪ ಪತ್ನಿಗೆ ಹೆರಿಗೆಯಾಗಿ 20 ದಿನಗಳಷ್ಟೇ ಕಳೆದಿವೆ
A family that rejects the wife and child on the day of the husband's death at Udupi

ಉಡುಪಿ (ಆ.26) : ಹಲವಾರು ವರ್ಷಗಳಿಂದ ಮೆಕ್ಯಾನಿಕ್ ಆಗಿ ಜೀವನ ನಿರ್ವಹಿಸುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (28) ಎಂಬವರು ಗುರುವಾರ ಹಠಾತ್ ಹೃದಯಾಘಾತದಿಂದ ಮೃತ ಪಟ್ಟರು, ಆದರೆ ಈ‌ ನೋವಿನ ವೇಳೆ ಸಾಂತ್ವನ ಹೇಳಬೇಕಾದ ಬಾಂಧವರು ಮೃತನ ಪತ್ನಿ ಹಾಗೂ ಮಗುವನ್ನು ತಿರಸ್ಕರಿಸಿದ್ದಾರೆ. ಈ ಅಮಾನವೀಯ ಘಟನೆ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಯಾದಗಿರಿ; ಕಾಲುವೆಗೆ ಕಾರು, ಪತಿ ಸಾವು,  ಮಗು ಎತ್ತಿಕೊಂಡು ಈಜಿ ದಡ ಸೇರಿದ ತಾಯಿ

ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ(Vishu Shetty ambalawadi) ಅವರು ಸ್ಥಳಕ್ಕೆ ಧಾವಿಸಿ ಮೃತನ ಪತ್ನಿ ಹಾಗೂ ಆಕೆಯ 20 ದಿನಗಳ ಹಸುಗೂಸನ್ನು ಉಡುಪಿ(Udupi)ಯ ಸಖಿ ಸೆಂಟರ್‌(Sakhi Centre)ಗೆ ದಾಖಲಿಸಿ ಮಾನವೀಯ ನೆರವು ನೀಡಿದ್ದಾರೆ. ಮೃತ ಅಯ್ಯಪ್ಪ ಅವರ ಪತ್ನಿಗೆ ಹೆರಿಗೆಯಾಗಿ 20 ದಿನಗಳಷ್ಟೇ ಕಳೆದಿದ್ದು, ವಿಧಿಯ ಲೀಲೆಗೆ ಕುಟುಂಬ ತತ್ತರಿಸಿದೆ.

ಪ್ರಕರಣದ ಹಿನ್ನಲೆ : ಅಯ್ಯಪ್ಪ ಅವರು ಉಡುಪಿಯಲ್ಲಿ ವೃತ್ತಿಯಲ್ಲಿ ಮ್ಯಾಕನಿಕ್ ಆಗಿದ್ದರು, ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಅಯ್ಯಪ್ಪ ಅವರು ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ಮದುವೆಗೆ ಎರಡೂ ಕಡೆಯಿಂದಲೂ ತೀವ್ರ ವಿರೋಧವಿತ್ತು ಎನ್ನಲಾಗಿದೆ. 

ಹೀಗಾಗಿ ಅಯ್ಯಪ್ಪ ಅವರು ನಿಧನರಾದ ಸುದ್ದಿಯನ್ನು ಅವರ ಮನೆಯವರಿಗೆ ತಿಳಿಸಿದಾಗ ಮೃತ ದೇಹವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸಖಿ ಸೆಂಟರ್‌ಗೆ ದಾಖಲಿಸಿ, ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಬಾದಾಮಿಗೆ ರವಾನಿಸಲಾಗಿದೆ.

ಇಲಾಖೆಗಳ ಸೂಕ್ತ ಸ್ಪಂದನಕ್ಕೆ ಆಗ್ರಹ  ಅಯ್ಯಪ್ಪ ಅವರ ಪತ್ನಿ ಹೆರಿಗೆಯಾಗಿ ಕೇವಲ 20 ದಿನಗಳಾಗಿದ್ದು, ಬಾಣಂತನದ ಆರೈಕೆಯಲ್ಲಿರ ಬೇಕಾದ ಈ ಜೀವ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಒದ್ದಾಡುತ್ತಿದೆ. ಆಕೆಯ ರೋದನ ನೆರೆದವರ ಕಣ್ಣೀರು ತರಿಸುವಂತಿದ್ದರೂ, ಪತಿಯ ಮನೆಯವರಿಗೆ ಆಕೆಯ ಬಗ್ಗೆ ಅನುಕಂಪ ಬಾರದಿರುವುದು ನೋವಿನ ಸಂಗತಿ.  

ಬಾಣಂತಿಯಾಗಿರುವ ಈಕೆಯ ಔಷಧೋಪಾಚಾರ ಹಾಗೂ ಸೂಕ್ತ ಆರೈಕೆ ಬಗ್ಗೆ ಸಂಬಂ ಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಆಗ್ರಹಿಸಿದ್ದಾರೆ. ಅಲ್ಲದೆ ಇವರಿಬ್ಬರ ಪ್ರೇಮ ವಿವಾಹವಾಗಿರುವುದರಿಂದ ಎರಡೂ ಕಡೆಯ ಕುಟುಂಬದೊಂದಿಗೆ ಸೂಕ್ತ ಮಾತುಕತೆ ನಡೆಸಿ, ಅಯ್ಯಪ್ಪ ಅವರ ಹೆಂಡತಿ ಮತ್ತು ಮಗು ಬೀದಿ ಪಾಲಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊಪ್ಪಳ: ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿ ಸಾವು, ಸಾವಿನಲ್ಲೂ ಒಂದಾದ ಅಜ್ಜ, ಅಜ್ಜಿ

ಮೆಕ್ಯಾನಿಕ್ ಅಯ್ಯಪ್ಪ ಅವರ ಪತ್ನಿ ಮಾನಸಿಕವಾಗಿ ತೀವ್ರ ಅಘಾತಗೊಂಡಿದ್ದಾರೆ. ಹೀಗಾಗಿ ಅವರಿಗೆ ಹಾಗೂ ಅವರ 20 ದಿನಗಳ ಮಗುವಿಗೆ ಸಾಂತ್ವನ ಮತ್ತು ಆರೈಕೆಯ ಅಗತ್ಯವಿದೆ. ಈ ಕುಟುಂಬ ಬಾಡಿಗೆ ಮನೆಯಲ್ಲಿರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಿದೆ. ಹೀಗಾಗಿ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿಯಿಂದ ಈ ಪ್ರಕರಣವನ್ನು ನಿಭಾಯಿಸಿ ತಾಯಿ ಮತ್ತು ಮಗುವಿಗೆ ರಕ್ಷಣೆ ಹಾಗೂ ಭವಿಷ್ಯದ ಭದ್ರತೆ ಸಿಗುವಂತೆ ಮಾಡಬೇಕು  ಎಂದು ವಿಶು ಶೆಟ್ಟಿಅಂಬಲಪಾಡಿ ಒತ್ತಾಯಿಸಿದ್ದಾರೆ

Latest Videos
Follow Us:
Download App:
  • android
  • ios