8 ವರ್ಷದ ಬಾಲಕಿಯ ಸುಳ್ಳಿನಿಂದ ಡೆಲಿವರಿ ಬಾಯ್‌ಗೆ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸರಿಯಾಗಿ ಗೂಸಾ ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ನೋಡಿದ ಬಳಿಕ, ಬಾಲಕಿಯೇ ಸುಳ್ಳು ಹೇಳಿದ್ದಾಳೆ ಎನ್ನುವುದು ಗೊತ್ತಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು (ಜೂ.16): ಡೆಲಿವರಿ ಏಜೆಂಟ್‌ ನನ್ನನ್ನು ಬಲವಂತವಾಗಿ ಕಟ್ಟಡದ ಟೆರಸ್‌ಗೆ ಕರೆದುಕೊಂಡು ಹೋಗಿದ್ದ ಎಂದು 8 ವರ್ಷದ ಬಾಲಕಿ ಹೇಳಿದ್ದನ್ನೇ ನಂಬಿದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಮತ್ತು ಸಿಬ್ಬಂದಿಗಳು, ಫುಡ್‌ ಡೆಲಿವರಿ ಏಜೆಂಟ್‌ಗೆ ಮನಸೋಇಚ್ಛೆ ಥಳಿಸಿ ಪೊಲೀಸರಿಗೆ ಕರೆ ಮಾಡಿದ ಘಟನೆ ನಡೆದಿದೆ. ಆದರೆ, ಪೊಲೀಸರು ಆಗಮಿಸಿ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ಬಳಿಕ 8 ವರ್ಷದ ಬಾಲಕಿ ಹೇಳಿದ್ದು ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಕಳೆದ ಸೋಮವಾರ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ನೀಲಾದ್ರಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಮಗಳನ್ನು ದಂಪತಿಗಳು ಹುಡುಕುತ್ತಿದ್ದ ವೇಳೆ ಆಕೆ, ಕಟ್ಟಡದ ಟೆರಸ್‌ ಮೇಲೆ ಪತ್ತೆಯಾಗಿದ್ದಾಳೆ. ಈ ವೇಳೆ ಅಲ್ಲಿಗೆ ಹೋಗಿದ್ದೇಕೆ ಎಂದು ಪಾಲಕರು ಪ್ರಶ್ನೆ ಮಾಡಿದ್ದಾಗ, ಫುಡ್‌ ಡೆಲಿವರಿ ಏಜೆಂಟ್‌ ತನ್ನನ್ನು ಟೆರಸ್‌ಗೆ ಕರೆದುಕೊಂಡು ಹೋಗಿದ್ದ ಎಂದು ತಿಳಿಸಿದ್ದಲ್ಲದೆ, ಆತನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೈ ಕಚ್ಚಿ ಓಡಿ ಬಂದೆ ಎಂದಿದ್ದಳು. ಇದರ ಬೆನ್ನಲ್ಲಿಯೇ ಬಾಲಕಿಯ ಪಾಲಕರು ಸ್ಥಳೀಯರು ಹಾಗೂ ಭದ್ರತಾ ಸಿಬ್ಬಂದಿಗೆ ಮಾಹಿತಿ ತಿಳಿಸಿ, ಇಡೀ ಅಪಾರ್ಟ್‌ಮೆಂಟ್ ಗೇಟ್‌ಗಳನ್ನು ಬಂದ್ ಮಾಡಿಸಿದ್ದಾರೆ. ಈ ವೇಳೆ ಕ್ಯಾಂಪಸ್‌ನಲ್ಲಿದ್ದ ಡೆಲಿವರಿ ಏಜೆಂಟ್‌ನತ್ತ ಬಾಲಕಿ ಬೆರಳು ತೋರಿಸಿದ್ದಾಳೆ.

ಆ ಬಳಿಕ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಆತನನ್ನು ಥಳಿಸಿದ್ದು, ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಲಕಿಯೇ ಏಕಾಂಗಿಯಾಗಿ ಟೆರಸ್‌ಗೆ ಹೋಗಿದ್ದು ಗೊತ್ತಾಗಿದೆ. ಡೆಲಿವರಿ ಏಜೆಂಟ್‌ ಕರೆದುಕೊಂಡು ಹೋಗಿದ್ದ ಎಂದು ಪಾಲಕರು ಹಾಗೂ ಪೊಲೀಸರ ಬಳಿ ಬಾಲಕಿ ಸುಳ್ಳು ಹೇಳಿದ್ದಳು.

ನಮ್ಮ ಇನ್ನೊಂದು ಮಗುವನ್ನು ಶಾಲೆಯ ಬಸ್‌ ಬಳಿ ಬಿಡಲು ತೆರಳಿದ್ದೆವು ಎಂದು ಪೊಲೀಸರಿಗೆ ತಿಳಿಸಿದ ಪಾಲಕರು, ವಾಪಾಸ್‌ ಮನೆಗೆ ಬಂದಾಗ ಮಗಳು ಕಂಡಿರಲಿಲ್ಲ. ಸಾಕಷ್ಟು ಹುಡುಕಾಟದ ಬಳಿಕ, 30 ನಿಮಿಷ ಕಳೆದು ಈಕೆ ಮನೆಯ ಟೆರಸ್‌ ಮೇಲೆ ಸಿಕ್ಕಿದ್ದಳು. ಈ ವೇಳೆ ಡೆಲಿವರಿ ಏಜೆಂಟ್‌ ತನ್ನನ್ನು ಟೆರಸ್‌ಗೆ ಕರೆದುಕೊಂಡು ಬಂದಿದ್ದಾಗಿ ಬಾಲಕಿ ತಿಳಿಸಿದ್ದಳು. 'ಫುಡ್‌ ಡೆಲಿವರಿ ಏಜೆಂಟ್‌ ಮನೆಯ ಬೆಲ್‌ ಒತ್ತಿದ್ದ. ನಾನು ಬಾಗಿಲು ತೆಗೆದಾಗ ನನ್ನನ್ನು ಎಳೆದುಕೊಂಡು ಟೆರಸ್‌ಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಅವನ ಕೈ ಕಚ್ಚಿ ನಾನು ಓಡಿ ಬಂದಿದ್ದೆ' ಎಂದು ಬಾಲಕಿ ಹೇಳಿದ್ದಳು.

ಆ ನಂತರ ನಾವು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ, ಪ್ರಧಾನ ಗೇಟ್‌ನಿಂದ ಯಾರಿಗೂ ಹೊರಬಿಡಲು ಅವಕಾಶ ಕೊಡಬೇಡಿ ಎಂದು ತಿಳಿಸಿದ್ದೆವು. ಡೆಲಿವರಿ ಏಜೆಂಟ್‌ನನ್ನು ಹುಡುಕಿದ ಬಳಿಕ, ಸಿಟ್ಟಾಗಿದ್ದ ಭದ್ರತಾ ಸಿಬ್ಬಂದಿಗಳು ಹಾಗೂ ನಿವಾಸಿಗಳು ಆತನಿಗೆ ಬಡಿದು, ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ಪಾಲಕರು ತಿಳಿಸಿದ್ದಾರೆ.ಈ ನಡುವೆ ಕೆಲವು ಡೆಲಿವರಿ ಏಜೆಂಟ್‌ಗೆ ಇದರ ಮಾಹಿತಿ ಸಿಕ್ಕಾಗ ಅಪಾರ್ಟ್‌ಮೆಂಟ್‌ನ ಪ್ರಧಾನ ಗೇಟ್‌ನ ಬಳಿ ಪ್ರತಿಭಟನೆಯನ್ನೂ ಆರಂಭ ಮಾಡಿದ್ದರು.

ಟ್ವಿಟರ್‌ನಲ್ಲಿ ಹೆಣ್ಮಕ್ಕಳ ಲಿಪ್‌ಸ್ಟಿಕ್‌ ಫೋಟೋ ವೈರಲ್‌, ಅಂಥದ್ದೇನಾಯ್ತು!

ಆರಂಭದಲ್ಲಿ ಸೂಕ್ತ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿರಲಿಲ್ಲ. ಬುಧವಾರದ ವೇಳೆಗೆ ಅಪಾರ್ಟ್‌ಮೆಂಟ್‌ನ ಪಕ್ಕದಲ್ಲಿರುವ ಮಹಿಳಾ ಪಿಜಿಯಲ್ಲಿದ್ದ ಸಿಸಿಟಿವಿಯ ದೃಶ್ಯಗಳನ್ನು ಪಡೆದುಕೊಳ್ಳಲಾಗಿತ್ತು. ಇದರಲ್ಲಿ ಈ ಅಪಾರ್ಟ್‌ಮೆಂಟ್‌ನ ಟೆರಸ್‌ನ ಮೆಟ್ಟಿಲುಗಳ ದೃಶ್ಯಗಳು ಕವರ್‌ ಆಗುತ್ತಿದ್ದವು. ಈ ದೃಶ್ಯಾವಳಿಗಳಲ್ಲಿ ಬಾಲಕಿ ಏಕಾಂಗಿಯಾಗಿ ಟೆರಸ್‌ಗೆ ಹೋಗಿದ್ದು ಕಂಡಿದೆ. ಇದನ್ನು ನೋಡಿ ಪೋಷಕರಿಗೆ ಕೂಡ ಆಘಾತವಾಗಿತ್ತು.
ಓದುವ ಟೈಮ್‌ನಲ್ಲಿ ಟೆರಸ್‌ಗೆ ಹೋಗಿದ್ದಕ್ಕೆ ಅಪ್ಪ-ಅಮ್ಮ ಬೈಯಬಹುದು ಎನ್ನುವ ಕಾರಣಕ್ಕೆ ತಾನು ಸುಳ್ಳು ಹೇಳಿದ್ದೆ ಎಂದು ಬಾಲಕಿ ಈ ವೇಳೆ ತಿಳಿಸಿದ್ದಾಳೆ. ಇದರ ಬೆನ್ನಲ್ಲಿಯೇ ಬಾಲಕಿಯರ ತಂದೆ-ತಾಯಿ ಡೆಲಿವರಿ ಏಜೆಂಟ್‌ಗೆ ಕ್ಷಮೆ ಯಾಚಿಸಿದ್ದಾರೆ. 'ನನ್ನ ಮಗಳಿಗೂ ಕೂಡ ಐದು ವರ್ಷ. ನಿಮ್ಮ ಆತಂಕವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮ ಯಾರ ಬಗ್ಗೆಯೂ ನನಗೆ ಸಿಟ್ಟಿಲ್ಲ. ಆದರೆ, ನಾನೇನೂ ತಪ್ಪು ಮಾಡಿಲ್ಲ. ಹುಡುಗಿ ಸುಳ್ಳು ಹೇಳುತ್ತಿದ್ದಾಳೆ ಎಂದರೂ ನೀವ್ಯಾರೂ ಕೇಳಲಿಲ್ಲ. ಅದಕ್ಕೆ ಬೇಸರವಿದೆ' ಎಂದು ಡೆಲಿವರಿ ಏಜೆಂಟ್‌ ಹೇಳಿದ್ದಾರೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ದೂರು ಸಲ್ಲಿಸುವ ಅವಕಾಶ ನಿಮಗಿದೆ ಎಂದು ಪೊಲೀಸರು ಹೇಳಿದರೂ, ಅದಕ್ಕೆ ಆತ ನಿರಾಕರಿಸಿದ್ದಾನೆ.

Milma VS Nandini: 'ನಂದಿನಿ ಗುಣಮಟ್ಟ ಕಳಪೆ, ಮಲಯಾಳಿಗಳು ಖರೀದಿಸ್ಬೇಡಿ..' ಕೇರಳ ಸಚಿವೆಯ ದ್ವೇಷದ ಹೇಳಿಕೆ

ಕೆಲವೇ ದಿನಗಳನ್ನು ನಾನು, ನನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಅಸ್ಸಾಂಗೆ ಹೋಗುತ್ತಿದ್ದೇನೆ. ಕೇಸ್‌ ದಾಖಲು ಮಾಡಿದ ಬಳಿಕ ಕೋರ್ಟ್‌, ಪೊಲೀಸ್‌ ಅಂತಾ ಅಲೆದಾಡಲು ಸಾಧ್ಯವಿಲ್ಲ. ಇದನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಹೇಳಿದ್ದಾರೆ.