ಕೇರಳದಲ್ಲಿ 85 ಲಕ್ಷಕ್ಕೂ ಅಧಿಕ ಮನೆಗಳಿವೆ. ಆದರೆ, ರಾಜ್ಯದ ಅಧಿಕೃತ ಹಾಲು ಮಹಾಮಂಡಳಿಯಾಗಿರುವ ಮಿಲ್ಮಾ ಕೇವಲ 16 ಲಕ್ಷ ಲೀಟರ್ ಹಾಲನ್ನು ಮಾತ್ರವೇ ಮಾರಾಟ ಮಾಡುತ್ತದೆ. ನಂದಿನಿ ಹಾಲು ಮಾರಾಟ ರಾಜ್ಯದಲ್ಲಿ ವ್ಯಾಪಕವಾಗಿದೆ ಇದಕ್ಕೆ ತಡೆ ನೀಡುವಂತೆ ಎನ್‌ಡಿಡಿಬಿಗೆ ದೂರು ನೀಡಲು ಕೇರಳ ಸಜ್ಜಾಗಿದೆ.
ತಿರುವನಂತಪುರ (ಜೂ.16): ಅನುಮತಿ ಪಡೆಯದೆ ತನ್ನ ರಾಜ್ಯದಲ್ಲಿ ನಾಲ್ಕು ಮಾರಾಟ ಮಳಿಗೆಗಳನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತೆರೆದಿದೆ ಎಂದು ಕೇರಳ ಸರ್ಕಾರ ಹಾಗೂ ಕೇರಳ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (National Dairy Development Board)ದೂರು ನೀಡಲೂ ನಿರ್ಧರಿಸಿದೆ. ಮಲಪ್ಪುರಂ (Malappuram) ಜಿಲ್ಲೆಯ ಮಂಚೇರಿ ಹಾಗೂ ತಿರೂರ್, ಎರ್ನಾಕುಲಂ (Ernakulam) ಜಿಲ್ಲೆಯ ಕೊಚ್ಚಿ (Kochi) ಹಾಗೂ ಪಠಾಣಂತಿಟ್ಟಜಿಲ್ಲೆಯ ಪಂಡಲಂನಲ್ಲಿ ನಂದಿನಿ ತನ್ನ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಇದಲ್ಲದೆ ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್‌ಗಳಲ್ಲಿ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿವೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಪಶುಸಂಗೋಪನಾ ಸಚಿವೆ (Animal Husbandry Minister) ಜೆ.ಚಿಂಚುರಾಣಿ (J. Chinchurani), ‘ಒಂದು ರಾಜ್ಯದಲ್ಲಿ ವ್ಯವಹಾರ ನಡೆಸಲು ಪ್ರವೇಶ ಬಯಸುತ್ತೀರಿ ಎಂದಾದರೆ ಅಲ್ಲಿನ ಸರ್ಕಾರಗಳಿಂದ ಅನುಮತಿಯನ್ನು ಪಡೆಯಲೇಬೇಕಾಗುತ್ತದೆ. ಆದರೆ ಕೆಎಂಎಫ್‌ನ ‘ನಂದಿನಿ’ ಬ್ರ್ಯಾಂಡ್ ಆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದೆ. ‘ಮಿಲ್ಮಾ’ ದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಲು ಪೂರೈಸುತ್ತದೆ. ನಂದಿನಿ ಏನೂ ಅಷ್ಟು ಉತ್ತಮ ಗುಣಮಟ್ಟದ್ದಲ್ಲ. ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಕೇರಳದಲ್ಲಿ ಯಾರೂ ನಂದಿನಿಯನ್ನು ಖರೀದಿಸಬಾರದು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಿಲ್ಮಾದ ಮಲಬಾರ್ ವಲಯ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ, (K.S.Mani) ದೀರ್ಘಾವಧಿಯಿಂದ ಪಾಲಿಸಿಕೊಂಡು ಬಂದಿರುವ ಅಭ್ಯಾಸ ಹಾಗೂ ಸಂಪ್ರದಾಯಗಳನ್ನು ಉಲ್ಲಂಘನೆ ಮಾಡುವುದು ಯಾವುದೇ ಹಾಲು ಒಕ್ಕೂಟಕ್ಕೆ ನೈತಿಕವಾಗಿ ಸರಿಯಾದುದಲ್ಲ. ಕೇರಳದಲ್ಲಿ ಮಳಿಗೆ ಸ್ಥಾಪಿಸುವ ಮುನ್ನವೇ ವಿರೋಧಿಸಿ ಕೆಎಂಎಫ್‌ಗೆ ಪತ್ರ ಬರೆದಿದ್ದೆ. ಅವರು ಅದನ್ನು ಉಪೇಕ್ಷಿಸಿದ್ದರು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅಮುಲ್-ನಂದಿನಿ ವಿವಾದ ಭುಗಿಲೇಳುವ ಮೊದಲೇ ಕೆಎಂಎಫ್ (KMF)ಕೇರಳದಲ್ಲಿ ತನ್ನ ವ್ಯವಹಾರ ವಿಸ್ತರಿಸಲು ನಿರ್ಧರಿಸಿತ್ತು. ಕರ್ನಾಟಕದಲ್ಲಿ ಅಮುಲ್ ತನ್ನ ವ್ಯವಹಾರ ಆರಂಭಿಸುವುದು ತಪ್ಪು. ಆದರೆ ಅದೇ ವೇಳೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯದ ಸಹಕಾರಿ ಸಂಸ್ಥೆ ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಮೂಗು ತೂರಿಸುವುದು ಸಹಕಾರ ಸಿದ್ಧಾಂತ ಹಾಗೂ ಮೂಲಮೌಲ್ಯಗಳಿಗೆ ವಿರುದ್ಧವಾದುದು ಎಂದಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಹಾಗೂ ಕೇರಳದಲ್ಲಿ ಹಾಲು ಉತ್ಪಾದನೆ ಕಡಿಮೆಯಾದಾಗ ನಂದಿನಿ ಮತ್ತು ತಮಿಳುನಾಡಿನ ಅವಿನ್ ಹಾಲಿನ (Avin milk) ಮೇಲೆ ಕೇರಳ ಅವಲಂಬಿತವಾಗುತ್ತದೆ. ಆದರೆ ನಂದಿನಿ ಪ್ರವೇಶದಿಂದ ಮಿಲ್ಮಾ ಏನೂ ಚಿಂತೆಪಡಬೇಕಿಲ್ಲ. ಮಿಲ್ಮಾದ ವ್ಯವಹಾರದ ಮೇಲೆ ನಂದಿನಿ ಉತ್ಪನ್ನಗಳಿಂದ ಯಾವುದೇ ಪ್ರತಿಕೂಲ ಪರಿಣಾಮವಾಗಿಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ನಂದಿನಿಗಿಂತ ಮಿಲ್ಮಾ ಹಾಲು 7 ರು. ದುಬಾರಿಯಾಗಿದೆ.
ಅಮೂಲ್ vs ನಂದಿನಿ ಬಳಿಕ, ಕೇರಳದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಮಿಲ್ಮಾ ವಿರೋಧ!
ಕರ್ನಾಟಕ ಹೇಳೋದೇನು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್ ಎಂಡಿ ಬಿಎಂ ಸತೀಶ್, 'ಕೇರಳ ಜೊತೆಯಲ್ಲಿ ಈ ವಿಚಾರ ಚರ್ಚೆ ಮಾಡುತ್ತೇನೆ' ಎಂದಿದ್ದಾರೆ. “ನಾವು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (KCMMF) ನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇವೆ ಮತ್ತು ಓಣಂ ಮತ್ತು ಇತರ ಹಬ್ಬದ ಋತುಗಳಲ್ಲಿ ಹೆಚ್ಚಿನ ಹಾಲು ಮತ್ತು ಇತರ ಉತ್ಪನ್ನಗಳನ್ನು ಒದಗಿಸುವ ಮೂಲಕ ನಾವು ಯಾವಾಗಲೂ ಅವರನ್ನು ಬೆಂಬಲಿಸುತ್ತೇವೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಅವರು ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ಅಧ್ಯಯನ ಮಾಡಬೇಕಿದೆ. ನಾನು ಶೀಘ್ರದಲ್ಲೇ ನನ್ನ ಅಧಿಕಾರಿಗಳು ಮತ್ತು ಕೇರಳ ಸಹವರ್ತಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಬಿಎಂ ಸತೀಶ್ ತಿಳಿಸಿದ್ದಾರೆ.
ನೆರೆ ರಾಜ್ಯದಲ್ಲಿ ನಂದಿನಿಗೆ ವಿರೋಧ: ಕರ್ನಾಟಕದಲ್ಲಿ ಅಮುಲ್ ಪರ - ವಿರೋಧ ಚರ್ಚೆ ವೇಳೆ ಕೇರಳ ಕ್ಯಾತೆ
