Asianet Suvarna News Asianet Suvarna News

ಯಾದಗಿರಿ: ಅರಣ್ಯಾಧಿಕಾರಿ ಕೊಲೆ ಮರೆಮಾಚಲು 40 ಲಕ್ಷ ಡೀಲ್‌?

ಕೊಲೆಗಾರರು ಪರಾರಿಯಾಗಿದ್ದು ಅವರು ಇಲ್ಲಿಗೆ ಬಂದಾಗ ಬಂಧಿಸಲಾಗುತ್ತದೆ. ಅಲ್ಲೀವರೆಗೂ ಮೌನವಾಗಿರುವಂತೆ ಅಧಿಕಾರಿಯೊಬ್ಬರು ತಮಗೆ ಸೂಚಿಸಿದ್ದರು ಎಂದು ಅಂದಿನ ಘಟನೆಗಳ ನೆನೆದ ಸಹೋದರ ಬಕ್ಕಪ್ರಭು, ಆರೋಪಿಗಳ ಪಾರು ಮಾಡಲು ಲಕ್ಷಾಂತರ ರು.ಗಳ ಸಂಚು ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
 

40 Lakh Deal to Hide the Forest Officer Murder Case in Yadgir grg
Author
First Published Jun 23, 2024, 10:37 AM IST

ಆನಂದ್‌ ಎಂ. ಸೌದಿ

ಯಾದಗಿರಿ(ಜೂ.23):  ಶಹಾಪುರ ಅರಣ್ಯ ಇಲಾಖೆಯಲ್ಲಿ ಡಿವೈಎಫ್‌ಓ ಆಗಿದ್ದ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪುರ ಮೂಲದ ಮಹೇಶ ಕನಕಟ್ಟಿ ಕೊಲೆ ಪ್ರಕರಣದಲ್ಲಿ ಖಾಕಿಪಡೆ ನಡೆ ಕುರಿತು ಕುಟುಂಬಸ್ಥರಿಂದ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹಲ್ಲೆ ನಡೆಸಿದ್ದು ಕಂಡುಬಂದಿದ್ದರೂ, 302 ಐಪಿಸಿನಡಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಹಲವು ಒತ್ತಡಗಳ ನಂತರ, ಜೂ.17 ರಂದು ದೂರು ದಾಖಲಿಸಿ ಐವರನ್ನು ಬಂಧಿಸಲಾಗಿದೆ. ಕೆಲವರ ಪಾರು ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನೇ ಡಿಲೀಟ್‌ ಮಾಡಿರುವ ಶಂಕೆಯಿದೆ ಎಂದು ಮೃತ ಮಹೇಶ ಸಹೋದರ ಬಕ್ಕಪ್ರಭು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೊಲೆಗಾರರು ಪರಾರಿಯಾಗಿದ್ದು ಅವರು ಇಲ್ಲಿಗೆ ಬಂದಾಗ ಬಂಧಿಸಲಾಗುತ್ತದೆ. ಅಲ್ಲೀವರೆಗೂ ಮೌನವಾಗಿರುವಂತೆ ಅಧಿಕಾರಿಯೊಬ್ಬರು ತಮಗೆ ಸೂಚಿಸಿದ್ದರು ಎಂದು ಅಂದಿನ ಘಟನೆಗಳ ನೆನೆದ ಸಹೋದರ ಬಕ್ಕಪ್ರಭು, ಆರೋಪಿಗಳ ಪಾರು ಮಾಡಲು ಲಕ್ಷಾಂತರ ರು.ಗಳ ಸಂಚು ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಲ್ಲೆಯಾಗುವ ಭೀತಿ: ತುಮಕೂರಿಗೆ ದರ್ಶನ್ ಸಹಚರರ ಶಿಫ್ಟ್‌ಗೆ ಪೊಲೀಸರ ಮನವಿ

ಸರ್ಕಾರಿ ನೌಕರರೊಬ್ಬರ ಅನುಮಾನಾಸ್ಪದ ಸಾವಿನ ತನಿಖೆ ನಡೆಸಬೇಕಾದ ಪೊಲೀಸರು, ಆರೋಪಿಗಳ ಜೊತೆ ಸಂಧಾನ ನಡೆಸಿದ್ದಾರೆ. ಇದು ಹೃದಯಾಘಾತದಿಂದಾದ ಸಾವು ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿತ್ತು ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ದೂರು ನೀಡಿದರೆ ಅನುಕಂಪದ ನೌಕರಿಯೂ ಕುಟುಂಬಸ್ಥರಿಗೆ ಸಿಗಲಿಕ್ಕಿಲ್ಲ ಎಂದು ಹೇಳಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಏನಾಗಿತ್ತು?

ಜೂ.5 ರಂದು ಜಿಲ್ಲೆಯ ಶಹಾಪುರ ನಗರದ ಮೋಟಗಿ ಹೋಟೆಲ್‌ ಬಳಿ ಡಿವೈಎಫ್‌ಓ ಮಹೇಶ ಅವರನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ತೆರಳಿದ್ದ ಮಹೇಶ ಹಾಗೂ ಕೆಲವರ ಮಧ್ಯೆ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಅವರನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದರು.

ಸಲಿಂಗ ಕಾಮದ ಆರೋಪ: ಸೂರಜ್‌ ರೇವಣ್ಣಗೆ ಪೊಲೀಸ್‌ ಗ್ರಿಲ್‌..!

28ರಂದು ಕೋಲಿ ಸಮಾಜ ಪ್ರತಿಭಟನೆ

ಡಿವೈಎಫ್‌ಓ ಮಹೇಶ ಕೊಲೆ ಪ್ರಕರಣದ ತನಿಖೆ ಹಾಗೂ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ಜೂ.28ರಂದು ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ ಅಧಿಕಾರಿಗಳಿಗೇ ರಕ್ಷಣೆ ಇಲ್ಲ: ಬಿಜೆಪಿ ಟೀಕೆ

ಕಾಂಗ್ರೆಸ್‌ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳಿಗೇ ರಕ್ಷಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್‌’ದಲ್ಲಿ ಟೀಕಿಸಿರುವ ‘ಬಿಜೆಪಿ ಕರ್ನಾಟಕ’, ನಿಮ್ಮದೇ ಇಲಾಖೆಯ ಅಧಿಕಾರಿಯ ಸಾವಿಗೆ ನ್ಯಾಯ ಕೊಡಿಸುವ ಸೌಜನ್ಯ ಇದೆಯಾ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರನ್ನು ಕೇಳಿದೆ. ಮಹೇಶ ಹತ್ಯೆ ಕುರಿತು ಕನ್ನಡಪ್ರಭ ಜೂ.21ರಂದು ವರದಿ ಪ್ರಕಟಿಸಿತ್ತು.

Latest Videos
Follow Us:
Download App:
  • android
  • ios