Student Kidnap | ಶ್ರೀಮಂತನೆಂದು ಭಾವಿಸಿ ಆಟೊ ಚಾಲಕನ ಪುತ್ರ ಕಿಡ್ನಾಪ್‌ : ಲಕ್ಷಾಂತರ ಸುಲಿಗೆ

  • ಕಾಲೇಜಿಗೆ ಕಾರಿನಲ್ಲಿ ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಣ
  • ಅಪಹರಿಸಿ  1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಅರೆಸ್ಟ್
3 Arrested for Kidnaping auto Driver Son  in Bengaluru snr

ಬೆಂಗಳೂರು (ನ.23):  ಕಾಲೇಜಿಗೆ (college) ಕಾರಿನಲ್ಲಿ (Car) ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಿಸಿ  1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು (Students) ಸೇರಿದಂತೆ ಆರು ಮಂದಿಯನ್ನು ಅನ್ನ ಪೂರ್ಣೇಶ್ವರಿ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ (Arrest). ನಗರದ ಖಾಸಗಿ ಕಾಲೇಜಿನ ಬಿಸಿಎ ಪದವಿ ವಿದ್ಯಾರ್ಥಿಗಳಾದ (BCA Students) ಭುವನ್‌, ಪ್ರಜ್ವಲ್‌, ಅನಿಲ್‌ ಮತ್ತು ಬಿಪಿಒ (BPO) ಉದ್ಯೋಗಿಗಳಾದ ದೀಪು, ನಿಶ್ಚಯ್‌, ಕ್ಯಾಬ್‌ ಚಾಲಕ ಪ್ರಜ್ವಲ್‌ ಬಂಧಿತರು. ಈ ಆರು ಮಂದಿ ನ.18ರಂದು ಪಾಪ ರೆಡ್ಡಿ ಪಾಳ್ಯದ ಬಿಸಿಎ ಪದವಿ ವಿದ್ಯಾರ್ಥಿ ಅಭಿಷೇಕ್‌ (20) ಎಂಬುವವನ್ನು ಅಪಹರಿಸಿ, ಚಿನ್ನದ ಸರ (Gold Chain) ಹಾಗೂ ನಗದು ಸುಲಿಗೆ ಮಾಡಿದ್ದರು. ಬಳಿಕ ಯಾರಿಗೂ ಈ ಕೃತ್ಯದ ಬಗ್ಗೆ ಮಾಹಿತಿ ನೀಡದಂತೆ ಎಚ್ಚರಿಕೆ ನೀಡಿ ಅಭಿಷೇಕನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ (Police) ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕನ ಪುತ್ರನಾದ ಅಭಿಷೇಕ್‌, ವ್ಯಾಸಂಗ ಜತೆಗೆ ರಿಯಲ್‌ ಎಸ್ಟೇಟ್‌ (Real Estate ) ಕಂಪನಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಕಾಲೇಜಿಗೆ ಆಗಾಗ್ಗೆ ಸಹೋದರನ ಕಾರು ತೆಗೆದುಕೊಂಡು ಬರುತ್ತಿದ್ದ. ಇದನ್ನು ಕೆಲ ದಿನಗಳಿಂದ ಗಮನಿಸಿದ್ದ ಆರೋಪಿಗಳಾದ ಭುವನ್‌ ಮತ್ತು ಪ್ರಜ್ವಲ್‌, ಅಭಿಷೇಕ್‌ನನ್ನು ಅಪಹರಿಸಿ ಹಣ (Money) ಸುಲಿಗೆ ಮಾಡಲು ಸಹಚರರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದರು. ಅದರಂತೆ ನ.18ರ ಬೆಳಗ್ಗೆ ಕಾರಿನಲ್ಲಿ ಕಾಲೇಜಿಗೆ ಬಂದಿದ್ದ ಅಭಿಷೇಕ್‌, ಇಬ್ಬರು ಸ್ನೇಹಿತರ ಜತೆ ಮಾತನಾಡಿಕೊಂಡು ನಿಂತಿದ್ದ. ಈ ವೇಳೆ ಅಭಿಷೇಕ್‌ ಚಲನವಲನದ ಮೇಲೆ ನಿಗಾವಹಿಸಿದ್ದ ಆರೋಪಿಗಳು, ಅಭಿಷೇಕ್‌ ಜತೆಯಲ್ಲಿದ್ದ ಸ್ನೇಹಿತರು ಹೋಗುತ್ತಿದಂತೆ ಇಬ್ಬರು ಮಂಕಿ ಕ್ಯಾಪ್‌ ಧರಿಸಿಕೊಂಡು ಬಂದು ತಲೆಗೆ ಹಲ್ಲೆ ಮಾಡಿ ಅಭಿಷೇಕ್‌ನ ಕಾರಿನಲ್ಲೇ ಅಪಹರಿಸಿದ್ದರು.

ಚಾಕು ತೋರಿಸಿ ಬೆದರಿಕೆ:

ಕಾರಿನಲ್ಲಿ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ (BDA Complex) ಕಡೆಯಿಂದ ದಾಬಸ್‌ಪೇಟೆಗೆ ಕಡೆಗೆ ಹೋಗಿರುವ ಆರೋಪಿಗಳು, ಬಳಿಕ ದೇವನಹಳ್ಳಿ ಕಡೆಗೆ ತೆರಳಿ ಸುತ್ತಾಡಿಸಿದ್ದರು. ಈ ವೇಳೆ ಅಭಿಷೇಕ್‌ನನ್ನು ಕೂಗಾಡದಂತೆ ಚಾಕು ತೋರಿಸಿ ಬೆದರಿಸಿ, 70 ಸಾವಿರ ರು. ಹಾಗೂ 8 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದರು. ಬಳಿಕ ದೇವನ ಹಳ್ಳಿಯಲ್ಲಿ ಕಾರು ನಿಲ್ಲಿಸಿ ಇ-ಸ್ಟಾಂಪ್‌ ಪೇಪರ್‌ ಖರೀದಿಸಿರುವ ಆರೋಪಿಗಳು, 10 ಲಕ್ಷ ರು. ಸಾಲ ಪಡೆದಿದ್ದೇನೆ ಎಂದು ಅಭಿಷೇಕ್‌ನಿಂದ ಬರೆಸಿ ಸಹಿ ಪಡೆದಿದ್ದರು.

ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ

ಅಭಿಷೇಕ್‌ ತಂದೆ ಮೊಬೈಲ್‌ ಕರೆ (Call) ಮಾಡಿರುವ ಆರೋಪಿಗಳು, ನಿಮ್ಮ ಮಗ ನಮ್ಮಿಂದ 10 ಲಕ್ಷ ರು. ಸಾಲ ಪಡೆದಿದ್ದಾನೆ. ಇದಕ್ಕೆ ಅಗ್ರಿಮೆಂಟ್‌ ಕಾಪಿಗೆ ಸಹಿ ಹಾಕಿದ್ದಾನೆ. ಆ ಹಣ (Money) ವಾಪಸ್‌ ಕೊಡಬೇಕು. ಇಲ್ಲವಾದರೆ, ಮನೆ ಬಳಿ ಬಂದು ವಸೂಲಿ ಮಾಡುತ್ತೇವೆ. ಸದ್ಯ ನಿಮ್ಮ ಮಗ ನಮ್ಮೊಂದಿಗೆ ಇದ್ದಾನೆ. ಆತನನ್ನು ಬಿಡಬೇಕಾದರೆ, 1 ಲಕ್ಷ ರು ವನ್ನು ಖಾತೆಗೆ ಹಾಕಬೇಕು. ಇಲ್ಲವಾದರೆ, ಮಗ ಹಾಗೂ ಕಾರು ಸಿಗುವುದಿಲ್ಲ ಎಂದು ಬೆದರಿಸಿದ್ದಾರೆ. ಈ ಧಮಕಿಗೆ ಹೆದರಿದ ಆಟೋ ಚಾಲಕ (Auto Driver),  45 ರು ಸಾವಿರವನ್ನು ಮಗನ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದಾರೆ.

ಟೀ ಅಂಗಡಿ ಮಾಲೀಕನ ಖಾತೆಗೆ ಹಣ ವರ್ಗ

ಅಭಿಷೇಕ್‌ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಲೊಟ್ಟೆಗೊಲ್ಲಹಳ್ಳಿ ಕೆನರಾ ಬ್ಯಾಂಕ್ (Canara bank) ಎಟಿಎಂಗೆ ತೆರಳಿ  9 ಸಾವಿರದಂತೆ ಮೂರು ಬಾರಿ ಹಣ ಡ್ರಾ ಮಾಡಿದ್ದಾರೆ. ಬಳಿಕ ಟೀ ಅಂಗಡಿ ಮಾಲೀಕನ ಖಾತೆಗೆ ಉಳಿದ ಹಣವನ್ನು ಪೇಟಿಮ್‌ ಮಾಡಿಸಿ, ಆತನಿಂದ ನಗದು ಪಡೆದುಕೊಂಡಿದ್ದಾರೆ. ಕಡೆಗೆ ಈ ಅಪಹರಣ ವಿಚಾರ ಯಾರಿಗೂ ತಿಳಿಸದಂತೆ ಅಭಿಷೇಕ್‌ನನ್ನು ಎಚ್ಚರಿಸಿರುವ ಆರೋಪಿಗಳು, ಸಂಜೆ 4.30ರ ಸುಮಾರಿಗೆ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಬಳಿಕ ಅಭಿಷೇಕ್‌ ಹಾಗೂ ಆತನ ತಂದೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ಅದರಂತೆ ಇನ್‌ಸ್ಪೆಕ್ಟರ್‌ ಲೋಹಿತ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೊಬೈಲ್‌ ಸಿಗ್ನಲ್‌ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ

ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios