*   27,95,000 ರು. ಕಳೆದುಕೊಂಡ ಸಾಫ್ಟ್‌ವೇರ್‌ ಎಂಜಿನಿಯರ್‌ ಸೆಡ್ರಿಕ್‌ ಕುಟಿನ್ಹೊ*  ಮುಂಬೈಗೆ ಬರುವಂತೆ ಹೇಳಿದ್ದ ವಂಚಕರು*  ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ ಸೆಡ್ರಿಕ್‌

ಪಡುಬಿದ್ರಿ(ಮಾ.30): ಇಲ್ಲಿನ ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ಸೆಡ್ರಿಕ್‌ ಕುಟಿನ್ಹೊ ಎಂಬವರು ಮಾಡೆಲಿಂಗ್‌ ಮಾಡುವ ಆಸೆಯಿಂದ 27,95,000 ರು.ಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಅವರು 2019ರಿಂದ ವರ್ಕ್ ಫ್ರಮ್‌ ಹೋಮ್‌(Work From Home) ಮಾಡುತ್ತಿದ್ದರು. ಈ ಮಧ್ಯೆ ಮುಂಬೈಯ ಪ್ರಿಯಾಂಕ, ಪೂನಮ್‌, ಜೆನ್ನಿಫರ್‌, ಮುಖೇಶ್‌ ಮತ್ತು ಮೋಹನ್‌ ಜಿ. ಎಂಬವರು ಅವರ ಮೊಬೈಲಿಗೆ ಕರೆ ಮಾಡಿ ಮಾಡೆಲಿಂಗ್‌(Modeling) ಮಾಡಿದರೆ 2-3 ದಿನಕ್ಕೆ 2-3 ಲಕ್ಷ ರು. ಗಳಿಸಬಹುದೆಂದು ಹೇಳಿದ್ದರು.

ಅದಕ್ಕೆ 20 ಸಾವಿರ ರು.ಗಳನ್ನು ಕೋಆರ್ಡಿನೇಟರ್‌ ಶುಲ್ಕವಾಗಿ ಕಳುಹಿಸುವಂತೆ ತಿಳಿಸಿ ಅಕೌಂಟ್‌ ನಂಬರ್‌ ನೀಡಿದ್ದರು. ಅದನ್ನು ನಂಬಿದ ಸೆಡ್ರಿಕ್‌ ಹಣವನ್ನು(Money) ಪಾವತಿಸಿದ್ದರು. ಇದೇ ರೀತಿ ಪದೇ ಪದೇ ಕರೆ ಮಾಡಿದ ಆರೋಪಿ ಯುವತಿಯರು, ಆಸೆ ಹುಟ್ಟಿಸಿ, ಸ್ಟುಡಿಯೋ ವೆಚ್ಚ, ಫೋಟೋಶೂಟ್‌, ವಿಮಾನ ಟಿಕೇಟ್‌ ಎಂದೆಲ್ಲಾ ಹೇಳಿ, ಫೆ. 2ರಿಂದ ಮಾ.23ರ ವರೆಗೆ ಹತ್ತಾರು ಕಂತುಗಳಲ್ಲಿ ಒಟ್ಟು 27,95,000 ರು.ಗಳನ್ನು ಬೇರೆಬೇರೆ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾರೆ. 

ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ವಿರುದ್ಧ ಕಿಡ್ನಾಪ್‌ ಕೇಸ್‌

ಮಧ್ಯೆ ಮುಂಬೈಯ ವಿಮಾನ ಟಿಕೇಟನ್ನೂ ಕಳುಹಿಸಿ, ಮಾ.12ರಂದು ಮುಂಬೈಯ(Mumbai) ಅಂಧೇರಿಗೆ ಬರುವಂತೆ ಹೇಳಿದ್ದರು. ಅಲ್ಲಿ ಹೋದಾಗ ಮುಖೇಶ್‌ ಮತ್ತು ಮೋಹನ್‌ ಜಿ. ಎಂಬುವರ ಸ್ಟುಡಿಯೋದಲ್ಲಿ ಫೋಟೋಶೂಟ್‌(Photoshoot) ಮಾಡಿಸಿದ್ದರು. ಇದೀಗ ಆರೋಪಿತರು ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಆರೋಪಿಗಳು ಸೇರಿ ತಮಗೆ ಮೋಸ ಮಾಡಿದ್ದಾರೆ ಎಂದು ಸೆಡ್ರಿಕ್‌ ಅವರು ಪಡುಬಿದ್ರಿ ಪೊಲೀಸ್‌(Police) ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಪಿಕಿ ನವಾಜ್‌, ಆಕಾಶಭವನ ಶರಣ್‌ಗೆ ಗೂಂಡಾ ಕಾಯ್ದೆ ದೃಢ

ಮಂಗಳೂರು(Mangaluru): ಕಾಟಿಪಳ್ಳದ ದೀಪಕ್‌ ರಾವ್‌ ಹತ್ಯೆ ಪ್ರಕರಣ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ಕಾಟಿಪಳ್ಳದ ಪಿಂಕಿ ನವಾಝ್‌ (27) ಮತ್ತು ಇನ್ನೊಬ್ಬ ರೌಡಿ ಆಕಾಶಭವನ ಶರಣ್‌ (37) ಮೇಲೆ ಗೂಂಡಾ ಕಾಯ್ದೆಯನ್ನು ಹೈಕೋರ್ಟ್‌ ಮಂಗಳವಾರ ದೃಢಗೊಳಿಸಿದೆ. ಇನ್ನು ಒಂದು ವರ್ಷ ಅವಧಿಗೆ ಇದು ಅನ್ವಯವಾಗಲಿದೆ.

ಇವರಿಬ್ಬರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಅತ್ಯಾಚಾರ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್‌ಗಳಾಗಿದ್ದರು. ಕೋಮು ಸಾಮರಸ್ಯ ಕಾಪಾಡುವುದು ಹಾಗೂ ಸಮಾಜ ವಿದ್ರೋಹದ ಪರಿಸ್ಥಿತಿಯಿಂದ ರಕ್ಷಣೆಯ ಸಲುವಾಗಿ ತಮಗಿರುವ ಅಧಿಕಾರ ಚಲಾಯಿಸಿ ಈ ಇಬ್ಬರು ಆರೋಪಿಗಳ ವಿರುದ್ಧ 2022ರ ಫೆಬ್ರವರಿಯಲ್ಲಿ ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಗೂಂಡಾ ಕಾಯ್ದೆ ಹೇರಿದ್ದರು.

1 ಲಕ್ಷ ರು. ಬಹುಮಾನ: 

ಇಬ್ಬರಿಗೂ ಗೂಂಡಾ ಕಾಯ್ದೆ ಜಾರಿಗೊಳಿಸಿ, ಹೈಕೋರ್ಚ್‌ನಲ್ಲಿ ದೃಢಗೊಳ್ಳಲು ಕಾರಣಕರ್ತರಾದ ಮಂಗಳೂರು ಪೊಲೀಸ್‌ ಕಮಿಷನರ್‌ ನೇತೃತ್ವದ ತಂಡಕ್ಕೆ 1 ಲಕ್ಷ ರು. ಬಹುಮಾನವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಘೋಷಿಸಿದ್ದಾರೆ.

Uttara Kannada: ಕುಡುಕರನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ತು 17 ಲಕ್ಷ ರೂ..!

ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್‌, ಉತ್ತರ ವಿಭಾಗ ಎಸಿಪಿ ಮಹೇಶ್‌ ಕುಮಾರ್‌, ಸಿಸಿಆರ್‌ಬಿ ಎಸಿಪಿ ರವೀಶ್‌, ಕಾವೂರು ಇನ್‌ಸ್ಪೆಕ್ಟರ್‌ ರಾಘವ್‌ ಪಡೀಲ್‌, ಸುರತ್ಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಮತ್ತು ತಂಡ ಗೂಂಡಾ ಕಾಯಿದೆ ಜಾರಿಗೆ ಪೂರಕ ದಾಖಲೆ ಸಂಗ್ರಹಿಸಲು ಸಹಕರಿಸಿದ್ದರು.

ಬೆಳ್ತಂಗಡಿ: ಅಂತಾರಾಜ್ಯ ಕಳ್ಳನ ಬಂಧನ

ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದಲ್ಲಿ ಬ್ಯಾಗ್‌ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಿದ ಪ್ರಕರಣವೊಂದರ ತನಿಖೆ ನಡೆಸಿದ ಪೊಲೀಸರು ಅಂತರ್‌ ರಾಜ್ಯ ಕಳ್ಳನನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟದ ಬಳಿ ತಮ್ಮ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್‌ ಇಟ್ಟಿದ್ದರು. ಈ ವೇಳೆ ಕಳ್ಳರು ಅದನ್ನು ಕಳವು ಮಾಡಿದ್ದು, ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಷಾರೆ ಗ್ರಾಮದ ಇಂದಿರಾನಗರದ ನಿವಾಸಿ ಮಿತುನ್‌ ಚೌವಾಣ(31) ನನ್ನು ಬಂಧಿಸಿ, ಆತನ ಬಳಿಯಿದ್ದ 80,000 ರು. ಮೌಲ್ಯದ 37 ಗ್ರಾಂನ ಚಿನ್ನದ ಓಲೆ, 32,000 ರು. ಮೌಲ್ಯದ 8.04 ಗ್ರಾಂ ನ ಲಕ್ಷ್ಮೀ ಮಾಲೆ, 16,230 ರು. ಮೌಲ್ಯದ ಚಿನ್ನದ ಸರ, 40,000 ರು. ಮೌಲ್ಯದ 10.2 ಗ್ರಾಂನ ಬ್ರಾಸ್‌ ಲೈಟ್‌, 15,000 ರು. ಮೌಲ್ಯದ ಬ್ರಾಸ್‌ ಲೈಟ್‌, 8,500 ರು. ಮೌಲ್ಯದ 2.190 ಗ್ರಾಂನ ಉಂಗುರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 2.4 ಲಕ್ಷ ರು. ಎಂದು ಅಂದಾಜಿಸಲಾಗಿದೆ.

ಆರೋ(Accused) ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳ್ಳತನ(Theft) ಮಾಡುವ ಅಭ್ಯಾಸ ಹೊಂದಿದ್ದು, ಆತನ ಮೇಲೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್‌ ಉಪಾಧೀಕ್ಷರು ಬಂಟ್ವಾಳ ಉಪವಿಭಾಗದ ಪ್ರತಾಪ್‌ ಸಿಂಗ್‌ ತೋರಟ್‌ ಮತ್ತು ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಅವರ ನೇತೃತ್ವದಲ್ಲಿ ಪಿಎಸ್‌ಐ ಕೃಷ್ಣಕಾಂತ್‌ ಪಾಟೀಲ್‌ ಅವರ ವಿಶೇಷ ತಂಡದ ಸಿಬ್ಬಂದಿ ಬೆನ್ನಿಚ್ಚನ್‌, ಪ್ರಶಾಂತ್‌, ರಾಹುಲ, ಸತೀಶ್‌ ನಾಯ್ಕ, ವಿಜು, ರವೀಂದ್ರ, ಕೃಷ್ಣಪ್ಪ ಹಾಗೂ ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್‌ ಮತ್ತು ದಿವಾಕರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್‌ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.