ಮತ್ತೆ ತನ್ನ ಹೆಂಡತಿಯೊಂದಿಗೆ ಸಂಬಂಧ ಇದೆ ಎಂದು ಶಂಕೆಯಿಂದ ಕಣ್ಣಿಗೆ ಬಿದ್ದ ಬಸವರಾಜ್‌ನನ್ನು ಚೀಲಗೋಡು ಬಸ್ ನಿಲ್ದಾಣದ ಬಳಿ ತಂಬ್ರ ಹಳ್ಳಿ ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯ ಪಕ್ಕದ ವೀರ ಯೋಧ ಮೌನೇಶ್ ಪುತ್ಥಳಿ ಮುಂಭಾಗದಲ್ಲೇ ಕೊಡಲಿಯಿಂದ ತಲೆ ಮತ್ತು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ ಫಕ್ಕೀರಸ್ವಾಮಿ  

ಹಗರಿಬೊಮ್ಮನಹಳ್ಳಿ(ಅ.13): ತಾಲೂಕಿನ ಚಿಲುಗೋಡು ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆನಂದೇವನಹಳ್ಳಿ ಬಸವರಾಜ್ (26) ಎಂಬಾತನನ್ನು ವಿಜಯದಶಮಿ ಹಬ್ಬದ ಶನಿವಾರ ಮಧ್ಯಾಹ್ನ 1 ಗಂಟೆಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜರುಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಚಿಲುಗೋಡು ಗ್ರಾಮದ ಬಸರಕೋಡು ಫಕ್ಕೀರಸ್ವಾಮಿ ಎಂದು ಗುರುತಿಸಲಾಗಿದೆ. 

ಕೊಲೆಯಾದ ಯುವಕ ಬಸವರಾಜ್ ಫಕ್ಕೀರಸ್ವಾಮಿ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ನನ್ನ ಹೆಂಡತಿ ಕಾಣೆ ಆಗಿದ್ದಾಳೆ ಎಂದು ಬಸರಕೋಡು ಫಕ್ಕೀರಸ್ವಾಮಿ ದೂರು ನೀಡಿದ್ದರು. 

ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಬಾಲಕನನ್ನೇ ಕೊಂದ ಕಿರಾತಕ!

ದೂರು ನೀಡಿ ತಿಂಗಳ ಬಳಿಕ ಆನಂದೇವನಳ್ಳಿ ಬಸವರಾಜ್‌ ಮತ್ತು ಫಕ್ಕೀರಸ್ವಾಮಿ ಹೆಂಡತಿಯನ್ನು ಪೊಲೀಸರು ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದರು. ನಂತರ ರಾಜಿ ಪಂಚಾಯ್ತಿ ಮೂಲಕ ಪರಸ್ಪರ ಮುಚ್ಚಳಿಕೆ ಪತ್ರ ಬರೆದು ಕೊಟ್ಟು, ಫಕ್ಕೀರಸ್ವಾಮಿ ತನ್ನ ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದರು. ಈ ಘಟನೆಯ ನಂತರ ಊರು ತೊರೆದಿದ್ದ ಬಸವರಾಜ್ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದನು. 

ಮತ್ತೆ ತನ್ನ ಹೆಂಡತಿಯೊಂದಿಗೆ ಸಂಬಂಧ ಇದೆ ಎಂದು ಶಂಕೆಯಿಂದ ಕಣ್ಣಿಗೆ ಬಿದ್ದ ಬಸವರಾಜ್‌ನನ್ನು ಚೀಲಗೋಡು ಬಸ್ ನಿಲ್ದಾಣದ ಬಳಿ ತಂಬ್ರ ಹಳ್ಳಿ ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯ ಪಕ್ಕದ ವೀರ ಯೋಧ ಮೌನೇಶ್ ಪುತ್ಥಳಿ ಮುಂಭಾಗದಲ್ಲೇ ಕೊಡಲಿಯಿಂದ ತಲೆ ಮತ್ತು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ 100 ಮೀಟರ್‌ ದೂರ ಓಡಿ ಹೋಗಿ ರಸ್ತೆಯಲ್ಲಿಯೇ ಕೊಡಲಿ ಬಿಟ್ಟು ತಂಬ್ರಹಳ್ಳಿ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೊಲೆಯಾದ ಶವದ ಮುಂದೆ ಕುಟುಂಬದವರು ರೋಧಿಸುತ್ತಿದ್ದದ್ದು ಕಂಡುಬಂತು. ಸ್ಥಳಕ್ಕೆ ಸಿಪಿಐ ವಿಕಾಸ್ ಲಮಾಣಿ, ತಂಬ್ರಹಳ್ಳಿ ಪಿಎಸ್‌ಐ ಗುರುಚಂದ್ರ ಯಾದವ್ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.