ಸೈಬರ್ ವಂಚಕರ ಪಾಲಾಗುತ್ತಿದ್ದ 2.16 ಕೋಟಿ ರು.ಗಳನ್ನು ‘ಗೋಲ್ಡನ್‌ ಅವರ್‌’ನಲ್ಲಿ ರಕ್ಷಣೆ ಮಾಡುವಲ್ಲಿ ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋರ್ಟ್‌ ಅನುಮತಿ ಪಡೆದು ಡಾ.ರೆಡ್ಡೀಸ್‌ ಲ್ಯಾಬೋರೇಟರೀಸ್‌ಗೆ ಸೇರಿದ್ದ 2.16 ಕೋಟಿ ರು.ಗಳನ್ನು ವರ್ಗಾಯಿಸಲಾಗಿದೆ

ಬೆಂಗಳೂರು : ಸೈಬರ್ ವಂಚಕರ ಪಾಲಾಗುತ್ತಿದ್ದ 2.16 ಕೋಟಿ ರು.ಗಳನ್ನು ‘ಗೋಲ್ಡನ್‌ ಅವರ್‌’ನಲ್ಲಿ ರಕ್ಷಣೆ ಮಾಡುವಲ್ಲಿ ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇ-ಮೇಲ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರು. ದೋಚುವ ಸೈಬರ್ ವಂಚಕರ ಜಾಲವನ್ನು ಬೇಧಿಸಿರುವ ಸೈಬರ್‌ ಕ್ರೈಂ ಪೊಲೀಸರು, ಇದೀಗ ಕೋರ್ಟ್‌ ಅನುಮತಿ ಪಡೆದು ಡಾ.ರೆಡ್ಡೀಸ್‌ ಲ್ಯಾಬೋರೇಟರೀಸ್‌ಗೆ ಸೇರಿದ್ದ 2.16 ಕೋಟಿ ರು.ಗಳನ್ನು ವರ್ಗಾಯಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಕರಣದ ವಿವರ:

ನಗರದ ಎಂ.ಜಿ. ರಸ್ತೆಯಲ್ಲಿರುವ ಗ್ರೂಪ್‌ ಫಾರ್ಮಾ ಕಂಪನಿ ಹೈದರಬಾದ್‌ ಮೂಲದ ಡಾ. ರೆಡ್ಡೀಸ್‌ ಲ್ಯಾಬೋರೇಟರೀಸ್‌ ಔಷಧಿ ವಿತರಣಾ ಒಪ್ಪಂದ ಮಾಡಿಕೊಂಡಿದ್ದು, ಕೋಟ್ಯಂತರ ರು. ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗ್ರೂಪ್‌ ಕಂಪನಿಯಿಂದ ರೆಡ್ಡೀಸ್‌ ಲ್ಯಾಬೋರೇಟರೀಸ್‌ಗೆ 2.16 ಕೋಟಿ ರು. ಮೌಲ್ಯದ ಔಷಧಿಯನ್ನು ಕಳುಹಿಸಲಾಗಿತ್ತು. ಬಳಿಕ ಬಿಲ್ ಕಳುಹಿಸಿ ಹಣ ಪಾವತಿ ಮಾಡುವಂತೆ ಇ-ಮೇಲ್‌ ಮೂಲಕ ಗ್ರೂಪ್‌ ಫಾರ್ಮಾ ಸಿಬ್ಬಂದಿ ರೆಡ್ಡೀಸ್‌ ಕಂಪನಿಗೆ ಸಂದೇಶ ಕಳುಹಿಸಿದ್ದರು.

ಈ ಮಧ್ಯೆ, ಗ್ರೂಪ್‌ ಕಂಪನಿಯ ಸರ್ವರ್ ಹ್ಯಾಕ್‌ ಮಾಡಿರುವ ಸೈಬರ್ ವಂಚಕರು, ಕಂಪನಿಯ ಎಲ್ಲಾ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ನಂತರ ಕಂಪನಿಯ ಕೆಕೇಶವ@ಗ್ರೂಪ್‌ಫಾರ್ಮಾ.ಇನ್‌ ಎಂಬ ಇ-ಮೇಲ್ ವಿಳಾಸವನ್ನು ನಕಲಿ ಮಾಡಿದ್ದರು. ಅಂದರೆ ಎಲ್ಲಾ ಬಿಗ್‌ ಲೆಟರ್‌ಗಳಿಂದ ಹೊಸ ಇ-ಮೇಲ್ ವಿಳಾಸ ಸೃಷ್ಟಿಸಿ ಡಾ. ರೆಡ್ಡೀಸ್‌ ಗ್ರೂಪ್‌ಗೆ 2.16 ಕೋಟಿ ರು. ಹಣವನ್ನು ನಿರ್ದಿಷ್ಟ ಖಾತೆಗೆ ಜಮೆ ಮಾಡುವಂತೆ ಸಂದೇಶ ಕಳುಹಿಸಿದ್ದರು.

ವಂಚಕರ ಖಾತೆಗೆ ಹಣ ಜಮೆ ಮಾಡಿದ್ದ ಸಿಬ್ಬಂದಿ:

ಇದನ್ನು ನಂಬಿದ ರೆಡ್ಡೀಸ್‌ ಲ್ಯಾಬೋರೇಟರೀಸ್‌ ಕಂಪನಿ ಸಿಬ್ಬಂದಿ, ನಕಲಿ ಇ-ಮೇಲ್‌ ವಿಳ‍ಾಸದಿಂದ ಬಂದಿದ್ದ ಬ್ಯಾಂಕ್‌ ಖಾತೆಗೆ 2.16 ಕೋಟಿ ರು. ವರ್ಗಾವಣೆ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಹಣ ಕಳುಹಿಸಿದ ಬಗ್ಗೆ ಗ್ರೂಪ್ ಕಂಪನಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಹಣ ಜಮೆ ಆಗದಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ಗ್ರೂಪ್‌ ಕಂಪನಿಯ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್‌ 2ರಂದು ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಗೋಲ್ಡನ್‌ ಅವರ್‌ನಲ್ಲಿ ಹಣ ಜಪ್ತಿ:

ದೂರು ಸ್ವೀಕರಿಸಿದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸೈಬರ್‌ ಕ್ರೈಂ ಠಾಣೆ ಪೊಲೀಸರು, ಯಾವ ಖಾತೆಗೆ ಹಣ ಜಮೆಯಾಗಿದೆ ಎಂದು ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ನಿರ್ದಿಷ್ಟ ಬ್ಯಾಂಕ್‌ಗೆ ನೋಟಿಸ್ ನೀಡಿ ನಕಲಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ಜಪ್ತಿಗೆ ಕೋರಿದ್ದರು. ಅದರಂತೆ ಬ್ಯಾಂಕ್‌ ಅಧಿಕಾರಿಗಳು ಸಂಪೂರ್ಣ ಹಣ ಜಪ್ತಿ ಮಾಡಿದ್ದಾರೆ. ಹೀಗೆ ಗೋಲ್ಡನ್‌ ಅವರ್‌ನಲ್ಲಿ (ಒಂದು ಗಂಟೆಯಲ್ಲಿ) ಪೂರ್ಣ ಹಣವನ್ನು ಜಪ್ತಿ ಮಾಡಿಸಿದ್ದಾರೆ.

ಮಹಿಳೆಯ ಬ್ಯಾಂಕ್‌ ಖಾತೆಗೆ ಹಣ ಜಮೆ:

ತನಿಖೆಯಲ್ಲಿ ಗುಜರಾತ್‌ನ ವಡೋಧರದಲ್ಲಿರುವ ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಗೆ ಪೂರ್ಣ ಹಣ ಜಮೆ ಆಗಿರುವುದು ಪತ್ತೆಯಾಗಿದೆ. ಬಳಿಕ ಆಕೆಯೊಂದಿಗೆ ಈ ಬಗ್ಗೆ ಚರ್ಚಿಸಿದಾಗ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಆದರೆ, ಆಕೆಯು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಆಕೆ ಗುಣಮುಖಳಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜಿರಿಯಾದಲ್ಲಿ ಕುಳಿತು ವಂಚನೆ

ಇನ್ನು ಸೈಬರ್ ಕ್ರೈಂ ಪೊಲೀಸರ ತಾಂತ್ರಿಕ ತನಿಖೆಯಲ್ಲಿ ಸೈಬರ್ ವಂಚಕರು ನೈಜಿರಿಯಾದಲ್ಲಿ ಕುಳಿತು ಬೆಂಗಳೂರಿನ ಗ್ರೂಪ್‌ ಕಂಪನಿಯ ಸರ್ವರ್‌ ಹ್ಯಾಕ್‌ ಮಾಡಿ, ಇ-ಮೇಲ್ ಸ್ಪೂಫಿಂಗ್‌ ಮಾಡಿ ರೆಡ್ಡೀಸ್‌ ಲ್ಯಾಬೋರೇಟರೀಸ್‌ ಇ-ಮೇಲ್ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೋಲ್ಡನ್ ಅವರ್‌ ಎಂದರೇನು?

ಸೈಬರ್‌ ವಂಚನೆಗೆ ಒಳಗಾದವರು ಒಂದು ಗಂಟೆಯೊಳಗಾಗಿ ದೂರು ನೀಡಬೇಕು. ಅದನ್ನು ಗೋಲ್ಡನ್‌ ಅವರ್‌ ಎಂದು ಹೇಳಲಾಗುತ್ತದೆ. ಆ ಅ‍ವಧಿಯಲ್ಲಿ ದೂರು ನೀಡಿದರೆ ಹಣ ಜಪ್ತಿ ಮಾಡಲು ಸಾಧ್ಯವಾಗುತ್ತದೆ. ಗ್ರೂಪ್‌ ಫಾರ್ಮಾದ ಸಿಬ್ಬಂದಿ ಹಣ ಕಳೆದುಕೊಂಡ ಕೆಲವೇ ಕ್ಷಣಗಳಲ್ಲಿ ದೂರು ನೀಡಿದ್ದರು. ಹೀಗಾಗಿ ನಮ್ಮ ಪೊಲೀಸರು ಕ್ಷಣಾರ್ಧದಲ್ಲಿ ಕಾರ್ಯಾಚರಣೆ ಕೈಗೊಂಡು ವರ್ಗಾವಣೆಯಾಗಿರುವ ಬ್ಯಾಂಕ್‌ ಖಾತೆಯ ವಿವರ ಪಡೆದು ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿ ಫ್ರೀಜ್‌ ಮಾಡಿಸಿದ್ದರಿಂದ ವಂಚಕರ ಖಾತೆಗೆ ಹಣ ಹೋಗದೆ ಉಳಿದಿದೆ. ಆದ್ದರಿಂದ ಸಾರ್ವಜನಿಕರು ಸೈಬರ್‌ ವಂಚನೆಗೊಳಗಾದಲ್ಲಿ ಮೊದಲ ಒಂದು ಗಂಟೆಯೊಳಗೆ ದೂರು ನೀಡಬೇಕು ಎಂದು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಮನವಿ ಮಾಡಿದ್ದಾರೆ.