Fake investment app fraud: ನಕಲಿ ಟ್ರೇಡಿಂಗ್ ಆ್ಯಪ್‌ಗಳನ್ನು ಸೃಷ್ಟಿಸಿ, ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ಮೂಲಕ ಸಂತ್ರಸ್ತರ ವಿಶ್ವಾಸ ಗಳಿಸಿ, ವಂಚಕರು ಆನ್‌ಲೈನ್ ಹೂಡಿಕೆಯ ಹೆಸರಲ್ಲಿ ಹಂತ ಹಂತವಾಗಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.

ತಿರುವನಂತಪುರ (ಅ.4): ನಕಲಿ ಆ್ಯಪ್ ಸೃಷ್ಟಿಸಿ, ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ಮೂಲಕ ಜನರನ್ನು ನಂಬಿಸಿ ಸುಮಾರು ಮೂರೂವರೆ ಕೋಟಿ ರೂಪಾಯಿ ದೋಚಿದ್ದ ಗ್ಯಾಂಗ್‌ನ ಓರ್ವನನ್ನು ತಿರುವನಂತಪುರ ಸಿಟಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರದ ಉಳ್ಳೂರು ನಿವಾಸಿ ವೈದ್ಯರೊಬ್ಬರಿಗೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ, ಹೂಡಿಕೆ ವಂಚನೆ ಮೂಲಕ 3.43 ಕೋಟಿ ರೂ. ದೋಚಿದ್ದ ಗ್ಯಾಂಗ್‌ನ ಸದಸ್ಯ, ಬೆಂಗಳೂರು ನಿವಾಸಿ ಧನುಷ್ ನಾರಾಯಣಸ್ವಾಮಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಳ್ಳೂರು ನಿವಾಸಿಯಿಂದ ದೋಚಿದ್ದ ಹಣದಲ್ಲಿ 1.20 ಕೋಟಿ ರೂಪಾಯಿಯನ್ನು ಆರೋಪಿಯ ಬ್ಯಾಂಕ್ ಖಾತೆಯಿಂದ ತನಿಖಾ ತಂಡ ವಶಪಡಿಸಿಕೊಂಡಿದೆ.

ವಂಚನೆ ನಡೆದಿದ್ದು ಹೇಗೆ?

ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ದೋಚಿದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ವಿದೇಶಕ್ಕೆ ಸಾಗಿಸುವುದು ಈ ಗ್ಯಾಂಗ್‌ನ ಕೆಲಸ. ನಕಲಿ ಟ್ರೇಡಿಂಗ್ ಆ್ಯಪ್‌ಗಳನ್ನು ಸೃಷ್ಟಿಸಿ, ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ಮೂಲಕ ಆನ್‌ಲೈನ್ ಹೂಡಿಕೆಗೆ ಸಂತ್ರಸ್ತರ ವಿಶ್ವಾಸ ಗಳಿಸಿ, ವಂಚಕರು ಹಂತ ಹಂತವಾಗಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು. ವಂಚನೆಗೊಳಗಾಗಿದ್ದು ಗೊತ್ತಾದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ತನಿಖೆಯಲ್ಲಿ, ಆರೋಪಿಗಳು ಸಂತ್ರಸ್ತರನ್ನು ವಾಟ್ಸಾಪ್, ಟೆಲಿಗ್ರಾಂನಂತಹ ಸೋಶಿಯಲ್ ಮೀಡಿಯಾಗಳ ಮೂಲಕ ಸಂಪರ್ಕಿಸಿ ಹೂಡಿಕೆ ಮಾಡಲು ಒತ್ತಾಯಿಸುತ್ತಿದ್ದರು ಎಂಬುದು ಬಯಲಾಗಿದೆ.

ಹಣ ವರ್ಗಾವಣೆಯಾದ ಖಾತೆಗಳನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ, ಬೆಂಗಳೂರಿನ ಒಂದು ನಕಲಿ ಕಂಪನಿಯ ಖಾತೆಗೆ ಹಣ ಜಮೆಯಾಗುತ್ತಿರುವುದು ತಿಳಿದುಬಂದಿದೆ. ಈ ಖಾತೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಯ ಮಾಹಿತಿ ಲಭಿಸಿದೆ. ಹೂಡಿಕೆ ವಂಚನೆಗಾಗಿಯೇ ಆರೋಪಿ ನಕಲಿ ಕಂಪನಿ ಹೆಸರಲ್ಲಿ ಖಾತೆ ತೆರೆದಿದ್ದ. ಆತನ ಖಾತೆಯಿಂದ 1.20 ಕೋಟಿ ರೂಪಾಯಿ ವಶಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿದೆ. ಬೆಂಗಳೂರಿನಲ್ಲಿ ಬಂಧಿತನಾದ ಆರೋಪಿಯನ್ನು ಕೇರಳಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ರಿಮಾಂಡ್ ಮಾಡಲಾಗಿದೆ.