ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಮತ್ತು ದ.ಕ. ಜಿಲ್ಲಾ ಪೊಲೀಸರು ಮಂಗಳವಾರ ನಸುಕಿನ ಜಾವ ದ.ಕ. ಜಿಲ್ಲೆಯಲ್ಲಿ ಒಟ್ಟು 14 ಮಂದಿ ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಮಂಗಳೂರು(ಸೆ. 28): ಇತ್ತೀಚೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ದಿಢೀರನೆ ದಾಳಿ ನಡೆಸಿ ಪಿಎಫ್‌ಐ ಸಂಘಟನೆಯ ಐವರು ಮುಖಂಡರನ್ನು ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ, ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಮತ್ತು ದ.ಕ. ಜಿಲ್ಲಾ ಪೊಲೀಸರು ಮಂಗಳವಾರ ನಸುಕಿನ ಜಾವ ದ.ಕ. ಜಿಲ್ಲೆಯಲ್ಲಿ ಒಟ್ಟು 14 ಮಂದಿ ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸುರತ್ಕಲ್‌, ಉಳ್ಳಾಲ, ಬಜ್ಪೆ, ಕುದ್ರೋಳಿ, ಮೂಡುಬಿದಿರೆ ಠಾಣಾ ವ್ಯಾಪ್ತಿಯ 10 ಮಂದಿ ಮುಖಂಡರು, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಪುತ್ತೂರಿನ ಪಿಎಫ್‌ಐ ಅಧ್ಯಕ್ಷ, ಬಂಟ್ವಾಳದಲ್ಲಿ ಪಿಎಫ್‌ಐ ನಗರ ಜಿಲ್ಲಾಧ್ಯಕ್ಷ ಸೇರಿದಂತೆ ಮೂವರ ಬಂಧನವಾಗಿದೆ. ಸಿಆರ್‌ಪಿಸಿ 107 ಮತ್ತು 151 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಬಂಧಿತರು ಯಾರು?: 

ಬಂಟ್ವಾಳ ನಿವಾಸಿ ಪಿಎಫ್‌ಐ ನಗರ ಜಿಲ್ಲಾಧ್ಯಕ್ಷ ಇಜಾಜ್‌ ಅಹಮ್ಮದ್‌ (35), ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್‌ ಅರಿಯಡ್ಕ, ಬಂಟ್ವಾಳ ಬಿ.ಮೂಡದ ರಾಝಿಕ್‌ ಹಾಗೂ ಫಿರೋಝ್‌, ಮಂಗಳೂರು ಪಾಂಡೇಶ್ವರ ಎಚ್‌ಎಂಎಸ್‌ ಕಂಪೌಂಡ್‌ ನಿವಾಸಿ ಮಹಮ್ಮದ್‌ ಶರೀಫ್‌, ಕುದ್ರೋಳಿ ಸಿಪಿಸಿ ಕಂಪೌಂಡ್‌ನ ಮುಝೈರ್‌ ಕುದ್ರೋಳಿ (32) ಹಾಗೂ ಮೊಹಮ್ಮದ್‌ ನೌಫಾಲ್‌ ಹಂಝ (35), ತಲಪಾಡಿ ಕೆಸಿ ನಗರ ನಿವಾಸಿ ಶಬೀರ್‌ ಅಹಮ್ಮದ್‌ (30), ಉಳ್ಳಾಲ ಮಾಸ್ತಿಕಟ್ಟೆಯ ನವಾಝ್‌ ಉಳ್ಳಾಲ (46), ಉಳಾಯಿಬೆಟ್ಟಿನ ಆಚಾರಿಬೆಟ್ಟು ನಿವಾಸಿ ಮೊಹಮ್ಮದ್‌ ಇಕ್ಬಾಲ್‌ (33), ಕೃಷ್ಣಾಪುರ ಕಾಟಿಪಳ್ಳದ ಚೊಕ್ಕಬೆಟ್ಟು 8ನೇ ಬ್ಲಾಕ್‌ ನಿವಾಸಿ ದಾವೂದ್‌ ನೌಶಾದ್‌, ಬಜ್ಪೆಯ ಕಿನ್ನಿಪದವು ಕೆಪಿ ನಗರದ ನಝೀರ್‌ ಹಾಗೂ ಇಸ್ಮಾಯಿಲ್‌ ಎಂಜಿನಿಯರ್‌ (40), ಮೂಡುಬಿದಿರೆಯ ಮುಂಡೇಲು ನಿವಾಸಿ ಇಬ್ರಾಹಿಂ (38) ಬಂಧಿತರು.

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಮಿಷನರೇಟ್‌ ವ್ಯಾಪ್ತಿಯ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಬಳಿಕ ಆರೋಗ್ಯ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರೋರಾತ್ರಿ ಬಂಧನ: 

ಪೊಲೀಸ್‌ ಇಲಾಖೆಯ ಮೇಲಧಿಕಾರಿಗಳ ಸೂಚನೆ ಮೇರೆಗೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಬೆಳಗ್ಗಿನ ಜಾವ ಸುಮಾರು 3ರಿಂದ 4 ಗಂಟೆಯೊಳಗೆ ಏಕಾಕಾಲದಲ್ಲಿ ಕಾರ್ಯಾಚರಣೆ ನಡೆಸಿ ಅವರವರ ಮನೆಯಿಂದಲೇ ಬಂಧಿಸಲಾಗಿದೆ. ರಾತ್ರಿಯ ಸಮಯವಾಗಿದ್ದರಿಂದ ಮನೆಯವರ ಪ್ರತಿರೋಧ ಬಿಟ್ಟರೆ ಬೇರೆ ಸಂಘಟಿತವಾದ ಯಾವ ವಿರೋಧವೂ ಇಲ್ಲದೆ ನಿರಾಯಾಸವಾಗಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಬೆಳಗಾಗುವುದರೊಳಗೆ ಇಡೀ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ.

ಪ್ರತಿಭಟನೆ ಹತ್ತಿಕ್ಕಲು ಬಂಧನ?: 

ಇತ್ತೀಚೆಗೆ ಎನ್‌ಐಎ ದಾಳಿಯ ಬಳಿಕ ಹಲವೆಡೆ ಪ್ರತಿಭಟನೆ ನಡೆಸಲು ಪಿಎಫ್‌ಐ ಉದ್ದೇಶಿಸಿತ್ತು. ಪ್ರತಿಭಟನೆ ನಡೆದರೆ ಗಲಭೆ ಸೃಷ್ಟಿಯಾಗಬಹುದು ಎನ್ನುವ ಮುನ್ನೆಚ್ಚರಿಕೆ ಕಾರಣದಿಂದ ಸಕ್ರಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪಿಎಫ್‌ಐ ದಾಳಿ ವೇಳೆ ಸಾವರ್ಕರ್‌ ಸೇರಿ ಹಲವು ಪುಸ್ತಕ, ಹಣ ಪತ್ತೆ

ಬಂಧಿತರನ್ನು ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಲೂಕು ದಂಡಾಧಿಕಾರಿ ಎದುರು ಹಾಜರುಪಡಿಸಲಾಗಿದ್ದು, ಬಳಿಕ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಸಬ್‌ಜೈಲ್‌ಗೆ ಸ್ಥಳಾಂತರಿಸಲಾಯಿತು.

ಸೆ.22ರಂದು ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ಒಟ್ಟು 11 ಕಡೆಗಳಲ್ಲಿ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಐವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದಿತ್ತು. ಮಂಗಳೂರಿನಲ್ಲಿರುವ ಪಿಎಫ್‌ಐ ಕಚೇರಿಗೂ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲೇ ಎಲ್ಲ ಕಡೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರತಿರೋಧ ತೋರಿಸಿದ್ದರು. ಇದೀಗ ಮತ್ತೆ ಪೊಲೀಸ್‌ ಕಾರ್ಯಾಚರಣೆ ನಡೆದಿರುವುದು ಪಿಎಫ್‌ಐಗೆ ಶಾಕ್‌ ನೀಡಿದೆ.