ಪಿಎಫ್‌ಐ ದಾಳಿ ವೇಳೆ ಸಾವರ್ಕರ್ ಸೇರಿ ಹಲವು ಪುಸ್ತಕ, ಹಣ ಪತ್ತೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಪ್ರಮುಖರ ಮನೆಗಳ ಮೇಲೆ ದಾಳಿ ವೇಳೆ ಪುಸಕ್ತಗಳು ಹಾಗೂ ಹಣ ಸೇರಿದಂತೆ ಕೆಲವು ದಾಖಲೆಗಳ ಜಪ್ತಿ
ಬೆಂಗಳೂರು(ಸೆ.24): ರಾಜ್ಯದಲ್ಲಿ ಗಲಭೆ ಸೃಷ್ಟಿಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಪ್ರಮುಖರ ಮನೆಗಳ ಮೇಲೆ ದಾಳಿ ವೇಳೆ ಪುಸಕ್ತಗಳು ಹಾಗೂ ಹಣ ಸೇರಿದಂತೆ ಕೆಲವು ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ‘ಹಿಂದೂ ಟೆರರಿಸಂ ಆನ್ ಮೈನಾರಿಟಿಸ್’, ‘ಕೋಮುವಾದ ಮತ್ತು ಭಯೋತ್ಪಾದನೆ’, ‘ಹೌ ಅಮೆರಿಕಾ ಗಾಟ್ ಡಿಫೀಟೆಡ್ ಇನ್ ವಾರ್ ಆನ್ ಟೆರರ್’ ಹಾಗೂ ‘ಸಾರ್ವಕರ್ ಸತ್ಯ ಎಷ್ಟು-ಮಿಥ್ಯ ಎಷ್ಟು’ ಹೀಗೆ ಕೆಲ ಪ್ರಮುಖ ಪುಸಕ್ತಗಳು ಜಪ್ತಿಯಾಗಿವೆ. ಅಲ್ಲದೆ ಕೆಲ ವಾರ ಪತ್ರಿಕೆಗಳು ಹಾಗೂ ಮೊಬೈಲ್‌ಗಳನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
34 ಲಕ್ಷ ರು ಲೆಕ್ಕ ಕೇಳಿದ ಪೊಲೀಸರು:
ಈ ದಾಳಿ ವೇಳೆ ಕಲಬುರಗಿ ಪಿಎಫ್‌ಐ ಜಿಲ್ಲಾಧ್ಯಕ್ಷ ಶೇಖ್ ಏಜಾಜ್ ಅಲಿ ಬಳಿ 14 ಲಕ್ಷ ರು, ಶಿವಮೊಗ್ಗದ ಪಿಎಫ್‌ಐ ಪ್ರಾದೇಶಿಕ ವಲಯ ಅಧ್ಯಕ್ಷ ಶಾಹಿದ್ ಖಾನ್ ಮನೆಯಲ್ಲಿ 19 ಲಕ್ಷ ರು ಹಾಗೂ ದಾವಣಗೆರೆ ಜಿಲ್ಲೆಯ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಇಮಾಮುದ್ದೀನ್ ಮನೆಯಲ್ಲಿ 1 ಲಕ್ಷ ರು ಸೇರಿ 34 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಹಣದ ಬಗ್ಗೆ ಲೆಕ್ಕ ನೀಡುವಂತೆ ಆರೋಪಿಗಳಿಗೆ ವಿಚಾರಣೆ ವೇಳೆ ಪೊಲೀಸರು ಪ್ರಶ್ನಿಸಿದ್ದು, ಇದಕ್ಕೆ ಸೂಕ್ತ ಉತ್ತರ ನೀಡದೆ ಆರೋಪಿಗಳು ತಡಬಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!
ಇನ್ನೂ 15 ಪಿಎಫ್‌ಐ ಮುಖಂಡರ ಬಂಧನ
ಸಮಾಜದಲ್ಲಿ ಎರಡು ಸಮುದಾಯಗಳ ನಡುವಿನ ದ್ವೇಷ ಹುಟ್ಟು ಹಾಕಲು ಹಾಗೂ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ರಾಜ್ಯದ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ ಪ್ಯಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ 15 ಪ್ರಮುಖ ನಾಯಕರನ್ನು ಬಂಧಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬಂಧಿತರಾದವರ ಸಂಖ್ಯೆ 21ಕ್ಕೆ ಏರಿದೆ.
ಗುರುವಾರ 7 ಮಂದಿಯನ್ನು ಎನ್‌ಐಎ ಬಂಧಿಸಿತ್ತು. 15 ಮಂದಿಯನ್ನು ರಾಜ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇವರನ್ನು ಬಂಧಿಸಿ ಶುಕ್ರವಾರ ಬೆಂಗಳೂರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಗ ಇವರನ್ನು ಕೋರ್ಟು ಹೆಚ್ಚಿನ ತನಿಖೆ ಸಲುವಾಗಿ 10 ದಿನ ಕಾಲ ಬೆಂಗಳೂರು ಪೊಲೀಸರ ವಶಕ್ಕೆ ನೀಡಿದೆ.
ಯಾರುು ಬಂಧಿತರು?:
ಬೆಂಗಳೂರಿನ ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನ ನಾಸಿರ್ ಪಾಷ, ಗೋವಿಂದಪುರದ ಸಮೀಪದ ಎಚ್‌ಬಿಆರ್ ಲೇಔಟ್ 1ನೇ ಹಂತದ ಮಹಮ್ಮದ್ ಮನ್ಸೂರ್, ದಾವಣಗೆರೆ ಜಿಲ್ಲೆಯ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಇಮಾಮುದ್ದೀನ್, ಕಲಬುರಗಿ ಪಿಎಫ್‌ಐ ಜಿಲ್ಲಾಧ್ಯಕ್ಷ ಶೇಖ್ ಏಜಾಜ್ ಅಲಿ, ರಾಜ್ಯ ಸಮಿತಿ ಸದಸ್ಯ ಶಾಹೀದ್ ನಾಸಿರ್, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪಿಎಫ್‌ಐ ಮುಖಂಡ ಅಬ್ದುಲ್ ಖಾದರ್, ವಿಟ್ಲದಲ್ಲಿ ಮಹಮ್ಮದ್ ತಪ್ಶಿರ್, ಜೊಕ್ಕಟ್ಟೆಯ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಕಾವೂರು ನಿವಾಸಿ ಪಿಎಫ್‌ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮೊಯಿದ್ದೀನ್ ಹಳೆಯಂಗಡಿ, ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಟಿಪ್ಪುನಗರ ನಿವಾಸಿ ಅಜೀಜ್ ಅಬ್ದುಲ್ ಶುಕೂರ್ ಹೊನ್ನಾವರ, ಶಿವಮೊಗ್ಗದ ಪಿಎಫ್‌ಐ ಪ್ರಾದೇಶಿಕ ವಲಯ ಅಧ್ಯಕ್ಷ ಶಾಹಿದ್ ಖಾನ್, ಮೈಸೂರು ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಮೌಲಾನ ಮಹಮದ್ ಕಲೀಂವುಲ್ಲಾ ಖಾನ್ ಹಾಗೂ ಕೊಪ್ಪಳ ಪಿಎಫ್‌ಐ ಜಿಲ್ಲಾಧ್ಯಕ್ಷ ಗಂಗಾವತಿಯ ಅಬ್ದುಲ್ ಫಯಾಸ್ ಬಂಧಿತರಾಗಿದ್ದಾರೆ.
5 ಮಂದಿ ನಾಪತ್ತೆ:
ಈ ದಾಳಿ ವೇಳೆ ತಲೆಮರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಅಯೂಬ್ ಕೆ.ಅಘಾನಡಿ, ದಾವಣಗೆರೆ ಜಿಲ್ಲೆ ಹರಿಹರ ಪ್ರಾರ್ಥನಾ ನಗರದ ತಾಹೀರ್, ಮಂಗಳೂರು ನಗರದ ಮಹಮ್ಮದ್ ಷರೀಫ್, ಆಶ್ರಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೆಮ್ಮಾರಪಟ್ಟೆಅಬ್ದುಲ್ ರಜಾಕ್ ಪತ್ತೆಗೆ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ
ಇವರ ಮೇಲಿನ ಆರೋಪ ಏನು?:
ಸಮುದಾಯಗಳ ನಡುವಿನ ದ್ವೇಷ ಹುಟ್ಟು ಹಾಕಲು ಹಾಗೂ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ ಹಳ್ಳಿ) ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಬೆಂಗಳೂರು ಪೊಲೀಸರು, ಪಿಎಫ್‌ಐ ಸಂಘಟನೆ ಜಾಲದ ಪತ್ತೆಗೆ ತನಿಖೆ ಶುರು ಮಾಡಿದ್ದರು.
ಅಂತೆಯೇ ಬೆಂಗಳೂರು, ಮೈಸೂರು, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ಕಲಬುರಗಿ, ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿ 14 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ರಾಜ್ಯದ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ ಎಲ್ಲ ಪಿಎಫ್‌ಐ ಮುಖಂಡರನ್ನು ತಡ ರಾತ್ರಿ ಪೊಲೀಸರು ನಗರಕ್ಕೆ ಕರೆತಂದರು. ನಂತರ ಬಂಧನ ಪ್ರಕ್ರಿಯೆಗೊಳಪಡಿಸಿದ ಪೊಲೀಸರು, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಿಗಳನ್ನು ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಈ ಕೋರಿಕೆ ಮನ್ನಿಸಿದ ನ್ಯಾಯಾಲಯವು, ಆರೋಪಿಗಳಿಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು. ಬಳಿಕ ಆರೋಪಿಗಳನ್ನು ಮಡಿವಾಳದ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.