ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ಮೊಹಮದ್ ಸಿರಾಜ್‌ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 6 ವಿಕೆಟ್‌ಗಳ ಜಯ ಸಾಧಿಸಿ, ಟೆಸ್ಟ್ ಸರಣಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಕೊಲಂಬೊ: ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್, ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನ ಉತ್ತಮ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇವರಿಬ್ಬರ ಆಕರ್ಷಕ ಆಟದ ನೆರವಿನಿಂದ 207 ರನ್‌ಗಳನ್ನು 45 ಓವರಲ್ಲಿ ಬೆನ್ನತ್ತಿದ ಭಾರತ, 6 ವಿಕೆಟ್‌ಗಳ ಜಯ ಸಾಧಿಸಿತು.
ಮೊದಲ ದಿನ ಲಂಕಾ ಇಲೆವೆನ್ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 363 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 2ನೇ ದಿನ ಭಾರತ, ಪಡಿಕ್ಕಲ್‌ರ ಶತಕದ ನೆರವಿನಿಂದ 6 ವಿಕೆಟ್‌ಗೆ 357 ರನ್ ಗಳಿಸಿತ್ತು. ಭಾನುವಾರ ಎರಡೂ ತಂಡಗಳಿಗೆ ತಲಾ 45 ಓವರ್ ಬ್ಯಾಟಿಂಗ್ ದೊರೆಯಿತು. 6 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ, 45 ಓವರಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿತು. ಗೆಲ್ಲಲು 207 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಜೈಸ್ವಾಲ್ ಹಾಗೂ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 100 ರನ್ ಸೇರಿಸಿತು.\
ಆಕರ್ಷಕ ಅರ್ಧಶತಕ ಸಿಡಿಸಿದ ಜೈಸ್ವಾಲ್
ಜೈಸ್ವಾಲ್ 46 ಎಸೆತದಲ್ಲಿ 61 ರನ್ ಸಿಡಿಸಿ ರಿಟೈರ್ಡ್ ಹರ್ಟ್ ಆದರು. ಕೈಬೆರಳಿಗೆ ಪೆಟ್ಟಾಗಿದ್ದರಿಂದ ಮೊದಲೆರಡು ದಿನ ಮೈದಾನಕ್ಕಿಳಿಯದ ಗಿಲ್, 3ನೇ ದಿನ ಆಡಿ 44 ರನ್ ಗಳಿಸಿದರು. ಪಂತ್ 28, ಜುರೆಲ್ 17, ಜಡೇಜಾ 22 ರನ್ ಕೊಡುಗೆ ನೀಡಿದರು. ಕೊನೆ 3 ಓವರ್ ಬಾಕಿ ಇದ್ದಾಗ ಭಾರತಕ್ಕೆ ಗೆಲ್ಲಲು 28 ರನ್ ಬೇಕಿತ್ತು. ಮೊಹಮದ್ ಸಿರಾಜ್ 15 ಎಸೆತದಲ್ಲಿ 4 ಸಿಕ್ಸರ್, 1 ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಭಾರತ 45 ಓವರಲ್ಲಿ 4 ವಿಕೆಟ್‌ಗೆ 214 ರನ್ ಕಲೆಹಾಕಿ, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿತು.
ಬಿಸಿಸಿಐ ಆಯ್ಕೆಗಾರ ಹುದ್ದೆ ಬಗ್ಗೆ ಲಕ್ಷ್ಮಣ್ ನಿರಾಸಕ್ತಿ?
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಪ್ರಧಾನ ಆಯ್ಕೆಗಾರ ಹುದ್ದೆಯಲ್ಲಿರುವ ಅಜಿತ್ ಅಗರ್ಕರ್‌ರ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದ್ದು, ಆ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿ ಬರುತ್ತಿತ್ತು. ಆದರೆ, ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಲಕ್ಷ್ಮಣ್ ತಾವು ಆ ಹುದ್ದೆಯ ಆಕಾಂಕ್ಷಿಯಲ್ಲ, ತಮಗೆ ಆಸಕ್ತಿಯೂ ಇಲ್ಲ ಎನ್ನುವ ಸುಳಿವು ನೀಡಿದರು.
‘2024ರಲ್ಲಿ ನಾನು ಭಾರತ ತಂಡದ ಕೋಚ್ ಆಗಬೇಕಿತ್ತು. ಆದರೆ ಆಗಿನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗಿ ನಾನು ಕೋಚ್ ಹುದ್ದೆಯನ್ನು ನಯವಾಗಿ ನಿರಾಕರಿಸಿದ್ದೆ’ ಎಂದರು. ಆ ಮೂಲಕ ಈಗ ತಮಗೆ ಆಯ್ಕೆಗಾರ ಹುದ್ದೆ ಬಗ್ಗೆ ಆಸಕ್ತಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.


