ಟೀಂ ಇಂಡಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ರಿಕೆಟಿಗ ರಮಣ್‌ದೀಪ್ ಸಿಂಗ್, ಜನಪ್ರಿಯ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರೊಂದಿಗೆ ಗುಟ್ಟಾಗಿ ವಿವಾಹವಾಗಿದ್ದಾರೆ. ಅರ್ಶದೀಪ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಿಂದ ಈ ಮದುವೆ ವಿಚಾರ ಬೆಳಕಿಗೆ ಬಂದಿದ್ದು, ಖಾಸಗಿ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು.

ಬೆಂಗಳೂರು: ಟೀಂ ಇಂಡಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ರಮಣ್‌ದೀಪ್ ಸಿಂಗ್ ದಿಢೀರ್ ಎನ್ನುವಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಮಣ್‌ದೀಪ್ ಸಿಂಗ್ ಸದ್ಯ ಭಾರತ ತಂಡದಿಂದ ಹೊರಬಿದ್ದಿದ್ದು, ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 29 ವರ್ಷದ ರಮಣ್‌ದೀಪ್ ಸಿಂಗ್‌ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ರಮಣ್‌ದೀಪ್ ಸಿಂಗ್‌ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಬ್ಯೂಟಿಫುಲ್ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದಾರೆ. ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ಜತೆ ಹೊಸ ಇನ್ನಿಂಗ್ಸ್ ಆರಂಭಿಸಿದ ರಮಣ್‌ದೀಪ್ ಸಿಂಗ್

ಟೀಂ ಇಂಡಿಯಾ ಕ್ರಿಕೆಟಿಗ ರಮಣ್‌ದೀಪ್ ಸಿಂಗ್, ಇದೀಗ ಟೆಲಿವಿಷನ್ ನಟಿ ಚಾರ್ಲಿ ಚೌವ್ಹಾಣ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಾರ್ಲಿ ಚೌವ್ಹಾಣ್ ಈಗಾಗಲೇ ಹಲವು ರಿಯಾಲಿಟಿ ಶೋ ಹಾಗೂ ಟಿವಿ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಅರ್ಶದೀಪ್ ಸಿಂಗ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ ಈ ನವಜೋಡಿಗೆ ಶುಭಹಾರೈಸಿದಾಗ, ಈ ಮದುವೆ ವಿಚಾರ ಬೆಳಕಿಗೆ ಬಂದಿದೆ. ರಮಣ್‌ದೀಪ್ ಸಿಂಗ್ ಹಾಗೂ ಚಾರ್ಲಿ ಚೌವ್ಹಾಣ್ ಖಾಸಗಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕುಟುಂಬಸ್ಥರು, ಅತ್ಯಾಪ್ತ ಸ್ನೇಹಿತರು ಹಾಗೂ ಬಂಧುಗಳು ಮಾತ್ರ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಂಜಾಬ್ ತಂಡದ ನಮನ್‌ ಧೀರ್, ಅಶ್ವಿನಿ ಕುಮಾರ್, ಅರ್ಶದೀಪ್ ಸಿಂಗ್ ಹಾಗೂ ಹರ್ಪ್ರೀತ್ ಬ್ರಾರ್ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದರು.

Scroll to load tweet…

ರಮಣ್‌ದೀಪ್ ಸಿಂಗ್ ಪತ್ನಿ ಚಾರ್ಲಿ ಚೌವ್ಹಾಣ್ ಯಾರು?

ರಮಣ್‌ದೀಪ್ ಸಿಂಗ್ ಪತ್ನಿ ಚಾರ್ಲಿ ಚೌವ್ಹಾಣ್, ಜನಪ್ರಿಯ ಟೆಲಿವಿಷನ್ ನಟಿಯಾಗಿದ್ದಾರೆ. ಶಿಮ್ಲಾದಲ್ಲಿ ಹುಟ್ಟಿದ ಚಾರ್ಲಿ 'ಬೆಸ್ಟ್ ಫ್ರೆಂಡ್ಸ್‌ ಫಾರೆವರ್', ಕೈಸೆ ಯೇ ಯಾರಿಯೋ ನಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ. ಇನ್ನು ದಿ ಲವ್ ಬೈಟ್ಸ್‌ನಂತಹ ಶಾರ್ಟ್ ಫಿಲ್ಮ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಭಾರತ ಪರ ಎರಡು ಪಂದ್ಯಗಳನ್ನಾಡಿರುವ ರಮಣ್‌ದೀಪ್ ಸಿಂಗ್:

ರಮಣ್‌ದೀಪ್ ಸಿಂಗ್ ಐಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಮಣ್‌ದೀಪ್ ಸಿಂಗ್ ಭಾರತ ಪರ ಇದುವರೆಗೂ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ರಮಣ್‌ದೀಪ್ ಸಿಂಗ್ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೀಂ ಇಂಡಿತಾ ಪರ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ರಮಣ್‌ದೀಪ್ ಸಿಂಗ್ ಭಾರತ ಪರ ಎರಡು ಪಂದ್ಯಗಳನ್ನಾಡಿದ್ದು, ಈ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ರಮಣ್‌ದೀಪ್ ಸಿಂಗ್ 15 ರನ್ ಗಳಿಸಿದ್ದರು. ಇನ್ನು ಎರಡು ಪಂದ್ಯಗಳಿಂದ ರಮಣ್‌ದೀಪ್ ಸಿಂಗ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ.