ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸ್‌ಲೆನ್ಸ್ (ಸಿಒಇ) ಅನ್ನು ಆಟಗಾರರ ಗಾಯದ ವಿಚಾರದಲ್ಲಿ ದೂಷಿಸುವುದು ಸರಿಯಲ್ಲ ಎಂದು ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸಮರ್ಥಿಸಿಕೊಂಡಿದ್ದಾರೆ. ಆಟಗಾರರು ಮಷಿನ್‌ಗಳಲ್ಲ, ಮನುಷ್ಯರು, ಹಾಗಾಗಿ ಗಾಯಗೊಳ್ಳುವುದು ಸಹಜ ಎಂದ ಅವರು, ಸಿಒಇ ಮತ್ತು ತಂಡದ ಆಡಳಿತದ ನಡುವೆ ಯಾವುದೇ ಸಂವಹನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಆಟಗಾರರು ಮಷಿನ್‌ಗಳಲ್ಲ. ಆಟದಲ್ಲಿ ಗಾಯಗೊಳ್ಳುವುದು ಸಾಮಾನ್ಯ. ಅದಕ್ಕಾಗಿ ಬಿಸಿಸಿಐನ ಸೆಂಟರ್ ಆಫ್ ಎಕ್ಸ್‌ಲೆನ್ಸ್ (ಸಿಒಇ) ಅನ್ನು ದೂಷಿಸುವುದು ಸರಿಯಲ್ಲ ಎಂದು ಸಿಒಇ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸಮರ್ಥಿಸಿಕೊಂಡರು.
ಬೆಂಗಳೂರಿನ ಹೊರವಲಯದಲ್ಲಿರುವ ಸಿಒಇ ಕೇಂದ್ರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹಾಗೂ ಕಾರ್ಯದರ್ಶಿ ದೇವ್‌ಜಿತ್ ಸಾಯ್ಕಿಯಾ, ಸಿಒಇಗೆ ಭೇಟಿ ನೀಡಿದರು. ಈ ವೇಳೆ ಭಾರತೀಯ ಆಟಗಾರರು ಪದೇಪದೇ ಗಾಯಗೊಳ್ಳುತ್ತಿರುವ ಸಂಬಂಧ ಲಕ್ಷ್ಮಣ್ ಹಾಗೂ ಫಿಟ್ನೆಸ್ ಟೈನ್ರರ್‌ಗಳ ಜೊತೆ ಬಿಸಿಸಿಐ ಪದಾಧಿಕಾರಿಗಳು ಮಹತ್ವದ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಒಇಯಲ್ಲಿ ತಮ್ಮ 2 ವರ್ಷದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡ ಲಕ್ಷ್ಮಣ್, ಗಾಯಾಳುಗಳ ಸಮಸ್ಯೆ ಹೆಚ್ಚುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿವರಣೆ ನೀಡಿದರು.
‘ಆಟಗಾರರು ಎಲ್ಲರಂತೆ ಮನುಷ್ಯರು. ಅವರು ಮಷಿನ್‌ಗಳಲ್ಲ. ಹೀಗಾಗಿ, ಗಾಯಗೊಳ್ಳುವುದು ಸಹಜ. ಗಾಯದಿಂದ ಚೇತರಿಸಿಕೊಳ್ಳಲು ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ’ ಎಂದರು.
ಆ.15ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಜಸ್‌ಪ್ರೀತ್ ಬೂಮ್ರಾ ಹಾಗೂ ಸಾಯಿ ಸುದರ್ಶನ್‌ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಈಗ ಸರಣಿಯಿಂದ ಹೊರಬಿದ್ದಿದ್ದಾರಲ್ಲ? ಎಂಬ ಪ್ರಶ್ನೆಗೆ ಲಕ್ಷ್ಮಣ್ ಈ ಮೇಲಿನಂತೆ ಉತ್ತರಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಸಿಸಿಐ ಕಾರ್ಯದರ್ಶಿ ಸಾಯ್ಕಿಯಾ, ‘ಪ್ರತಿ ಸರಣಿಗೆ 4-5 ವಾರ ಇರುವಂತೆಯೇ ನಾವು ತಂಡದ ಆಯ್ಕೆ ನಡೆಸುತ್ತೇವೆ. ಕೆಲವೊಮ್ಮೆ ಆಯ್ಕೆಯಾದ ಆಟಗಾರರು ಸರಣಿ ಆರಂಭದ ವೇಳೆ ಸಂಪೂರ್ಣ ಫಿಟ್ ಆಗುತ್ತಾರೆ, ಕೆಲವರು ಆಗುವುದಿಲ್ಲ. ಫಿಟ್ ಆಗದ ಸಂದರ್ಭದಲ್ಲಿ ನಾವು ಬದಲಿ ಆಟಗಾರರನ್ನು ಹೆಸರಿಸಬೇಕಾಗುತ್ತದೆ’ ಎಂದು ಹೇಳಿದರು.
ಮುಂದುವರಿದು, ‘ಸಿಒಇ ಕೇವಲ ಪುನಶ್ಚೇತನ ಕೇಂದ್ರವಲ್ಲ. ಭಾರತೀಯ ಕ್ರಿಕೆಟಿಗರ ಏಳಿಗೆಯಲ್ಲಿ ಸಿಒಇ ಹಲವು ರೀತಿಗಳಲ್ಲಿ ನೆರವಾಗಲಿದೆ. ಹೀಗಾಗಿ, ಆಟಗಾರರು ಚೇತರಿಸಿಕೊಳ್ಳಲು ವಿಳಂಬವಾದರೆ, ಸಿಒಇಯನ್ನು ದೂಷಿಸಲು ಸಾಧ್ಯವಿಲ್ಲ. ದೂಷಿಸಲು ಹೊರಟರೆ, ಬಲಿಪಶು ಮಾಡಲು ಯಾರನ್ನಾದರೂ ಹುಡುಕಿದಂತಾಗುತ್ತದೆ’ ಎಂದು ಲಕ್ಷ್ಮಣ್ ಸ್ಪಷ್ಟಪಡಿಸಿದರು.
ಸಂವಹನ ಕೊರತೆ ಇಲ್ಲ: ಭಾರತ ತಂಡದ ಆಡಳಿತ ಹಾಗೂ ಸಿಒಇ ನಡುವೆ ಸಂವಹನ ಕೊರತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್, ‘ನಮ್ಮ ಹಾಗೂ ತಂಡದ ಕೋಚ್, ಫಿಸಿಯೋ, ಟ್ರೈನರ್, ಆಯ್ಕೆಗಾರರ ನಡುವೆ ಯಾವುದೇ ರೀತಿಯಲ್ಲಿ ಸಂವಹನ ಸಮಸ್ಯೆ ಇಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬ ಆಟಗಾರನ ಪುನಶ್ಚೇತನದ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ತಂಡದೊಂದಿಗೆ ಹಂಚಿಕೊಳ್ಳುತ್ತೇವೆ. ಎಲ್ಲವೂ ನಮ್ಮ ಸಾಫ್ಟ್‌ವೇರ್‌ನಲ್ಲೇ ಲಭ್ಯವಿರಲಿದೆ. ಹೀಗಾಗಿ ಪಾರದರ್ಶಕವಾಗಿ ಎಲ್ಲ ಮಾಹಿತಿ ಸಿಗಲಿದೆ’ ಎಂದರು.
ದುಲೀಪ್ ಟ್ರೋಫಿ ಫೈನಲ್ ಸ್ಟೇಡಿಯಂಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ: ಸಾಯ್ಕಿಯಾ
ಬೆಂಗಳೂರು: ಆ.23ರಿಂದ ಸೆ.10ರ ವರೆಗೂ ಸಿಒಇನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಫೈನಲ್ ಪಂದ್ಯವನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸಾಯ್ಕಿಯಾ ತಿಳಿಸಿದರು. 2026-27ರ ದೇಸಿ ಋತು ದುಲೀಪ್ ಟ್ರೋಫಿಯೊಂದಿಗೆ ಆರಂಭಗೊಳ್ಳಲಿದ್ದು, ಸಿಒಇ ಒಳಕ್ಕೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸಾಯ್ಕಿಯಾ, ‘ಸಿಒಇಗೆ ಸರ್ಕಾರ ಭೂಮಿ ಮಂಜೂರು ಮಾಡಿದಾಗ, ಈ ಆವರಣದೊಳಗೆ ಪ್ರೇಕ್ಷಕರನ್ನು ಬಿಡುವಂತಿಲ್ಲ ಎನ್ನುವ ಷರತ್ತು ವಿಧಿಸಿತ್ತು. ಆ ಷರತ್ತನ್ನು ಮೀರಲು ಆಗುವುದಿಲ್ಲ. ಈ ಬಾರಿ ಹೆಚ್ಚು ಪಂದ್ಯಗಳನ್ನು ನೇರ ಪ್ರಸಾರ ಮಾಡುವ ವ್ಯವಸ್ಥೆ ಕೈಗೊಂಡಿದ್ದೇವೆ. ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ನಡೆಸುವ ಬಗ್ಗೆ ಖಂಡಿತವಾಗಿಯೂ ಚಿಂತನೆ ನಡೆಸುತ್ತೇವೆ’ ಎಂದರು.
ಕ್ರೀಡಾ ವೈದ್ಯಕೀಯ ವಿಭಾಗಕ್ಕೆ ಮುಖ್ಯಸ್ಥರಿಗಾಗಿ 1 ವರ್ಷದಿಂದ ಹುಡುಕುತ್ತಿದ್ದೇವೆ, ಸಿಗ್ತಿಲ್ಲ: ಲಕ್ಷ್ಮಣ್
ಬೆಂಗಳೂರು: ಬಿಸಿಸಿಐನ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ ಕ್ರೀಡಾ ವಿಜ್ಞಾನ ಹಾಗೂ ವೈದ್ಯಕೀಯ ವಿಭಾಗದ ಮುಖ್ಯಸ್ಥರಿಗಾಗಿ ಕಳೆದ 1 ವರ್ಷದಿಂದ ಹುಡುಕಾಟ ನಡೆಸುತ್ತಿದ್ದೇವೆ, ಆದರೆ ಸಿಗುತ್ತಿಲ್ಲ ಎಂದು ಸಿಒಇ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸಾಯ್ಕಿಯಾ ಅಸಹಾಯಕತೆ ವ್ಯಕ್ತಪಡಿಸಿದರು. ‘18 ತಿಂಗಳ ಹಿಂದೆ ನಿತಿನ್ ಪಟೇಲ್ ಹುದ್ದೆ ತೊರೆದ ಬಳಿಕ ಸೂಕ್ತ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಬಿಸಿಸಿಐ ನಿರಂತರ ಪ್ರಯತ್ನ ನಡೆಸುತ್ತಿದ್ದು, 3-4 ವಿದೇಶಿಗರ ಸಂದರ್ಶನವನ್ನೂ ನಡೆಸಿದೆ. ಕೆಲವರು ಕೊನೆ ಹಂತದಲ್ಲಿ ಹುದ್ದೆ ಸ್ವೀಕರಿಸಲ್ಲ ಎಂದು ನಿರಾಕರಿಸಿದ್ದಾರೆ’ ಎಂದು ಲಕ್ಷ್ಮಣ್ ಹೇಳಿದರು.
‘ಕ್ರೀಡಾ ವಿಜ್ಞಾನ ಹಾಗೂ ವೈದ್ಯಕೀಯ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಸರಿಹೊಂದುವ ವ್ಯಕ್ತಿಗಳು ತೀರಾ ವಿರಳ. ನಮಗಷ್ಟೇ ಅಲ್ಲ, ವಿದೇಶಿ ಕ್ರಿಕೆಟ್ ಬೋರ್ಡ್‌ಗಳೂ ಕೊರತೆ ಎದುರಿಸುತ್ತಿವೆ’ ಎಂದು ದೇವ್‌ಜಿತ್ ತಿಳಿಸಿದರು.


