5ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಪ್ರಮುಖರನ್ನು ಉಳಿಸಿಕೊಂಡು 6 ಆಟಗಾರ್ತಿಯರನ್ನು ಕೈಬಿಟ್ಟಿದೆ. ಅಕ್ಟೋಬರ್ 28ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ತಂಡಗಳ ಪರ್ಸ್ ವಿವರಗಳು ಬಹಿರಂಗವಾಗಿವೆ.

ಬೆಂಗಳೂರು: ಎರಡು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ, ಐದನೇ ಸೀಸನ್ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ತಮಗೆ ಬೇಕಾದ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದ್ದು, ಆರು ಆಟಗಾರ್ತಿಯರಿಗೆ ತಂಡದಿಂದ ಗೇಟ್‌ಪಾಸ್ ಮಾಡಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಲವು ಅನುಭವಿ ಹಾಗೂ ಯುವ ಆಟಗಾರ್ತಿಯರನ್ನೊಳಗೊಂಡ ಕೋರ್ ಪಡೆಯನ್ನು ಉಳಿಸಿಕೊಂಡಿದೆ.

ಐದನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆಯು ಮುಂಬರುವ ಅಕ್ಟೋಬರ್ 28, 2026ರಂದು ಕೊಚ್ಚಿಯಲ್ಲಿ ನಡೆಯಲಿದೆ. ಐದನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬರುವ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಇದೀಗ ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್, ಅಮನ್‌ಜೋತ್ ಕೌರ್, ಅಮೇಲಿಯಾ ಕೆರ್ರ್, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ ಸೇರಿದಂತೆ ಹಲವು ತಾರಾ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ರೀಟೈನ್ ಮಾಡಿಕೊಂಡ ಆಟಗಾರ್ತಿಯರಿವರು:

ಹರ್ಮನ್‌ಪ್ರೀತ್ ಕೌರ್, ಅಮನ್‌ಜೋತ್ ಕೌರ್, ಹೀಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ರ್, ನಥಾಲಿ ಸೀವರ್ ಬ್ರಂಟ್, ನಿಕೋಲಾ ಕ್ಯಾರಿ, ರಾಹಿಲಾ ಫಿರ್ದೋಸ್, ಎಸ್. ಸಂಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ.

ಆರು ಆಟಗಾರ್ತಿಯರನ್ನು ರಿಲೀಸ್ ಮಾಡಿದ ಮುಂಬೈ ಇಂಡಿಯನ್ಸ್:

ಇನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಪೂನಂ ಖೇಮ್ನರ್, ಸೈಕಾ ಇಶಾಕ್, ತ್ರಿವೇಣಿ ವಸಿಷ್ಠ, ನಲ್ಲಾ ರೆಡ್ಡಿ, ಇಲ್ಲಿಂಗ್‌ವರ್ತ್, ಜಿ ಕಮಿಲಿನಿ.

ಯಾವ ತಂಡದ ಬಳಿ ಪರ್ಸ್ ಎಷ್ಟಿದೆ?

ಡೆಲ್ಲಿ ಕ್ಯಾಪಿಟಲ್ಸ್‌ 13 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪರ್ಸ್‌ನಲ್ಲಿ 1.10 ಕೋಟಿ ರುಪಾಯಿ ಇದೆ. ಗರಿಷ್ಠ 5 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.

ಗುಜರಾತ್ ಜೈಂಟ್ಸ್‌ 15 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪರ್ಸ್‌ನಲ್ಲಿ 1.25 ಕೋಟಿ ರುಪಾಯಿ ಇದೆ. ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.

ಮುಂಬೈ ಇಂಡಿಯನ್ಸ್‌ 11 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪರ್ಸ್‌ನಲ್ಲಿ 1 ಕೋಟಿ ರುಪಾಯಿ ಇದೆ. ಗರಿಷ್ಠ 7 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪರ್ಸ್‌ನಲ್ಲಿ 1.15 ಕೋಟಿ ರುಪಾಯಿ ಇದೆ. ಗರಿಷ್ಠ 5 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.

ಯುಪಿ ವಾರಿಯರ್ಸ್‌ 11 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪರ್ಸ್‌ನಲ್ಲಿ 3.65 ಕೋಟಿ ರುಪಾಯಿ ಇದೆ. ಗರಿಷ್ಠ 7 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.