ತನ್ನದೇ ಸಾವಿನ ಸುದ್ದಿ ವೈರಲ್ ಆಗ್ತಿರೋದನ್ನ ನೋಡಿದ ಪಾಕಿಸ್ತಾನ ಕ್ರಿಕೆಟಿಗನೊಬ್ಬ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರ ರಿಯಾಕ್ಷನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಫೇಕ್ ಸುದ್ದಿಗಳ ಹಾವಳಿಗೆ ಪಾಕ್ ಕ್ರಿಕೆಟಿಗನೂ ಬಲಿಯಾಗಿದ್ದಾನೆ.
ಸೋಶಿಯಲ್ ಮೀಡಿಯಾ ಇವತ್ತು ನಮ್ಮನ್ನ ಬೆನ್ನು ಬಿಡದ ಭೂತದಂತೆ ಕಾಡ್ತಿದೆ. ಇಡೀ ಜಗತ್ತಿನ ಬಹುತೇಕ ಜನರು ಸೋಶಿಯಲ್ ಮೀಡಿಯಾ ಲೋಕದಲ್ಲಿ ಮುಳುಗಿರುತ್ತಾರೆ. ಅದರಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಕೆಲವೊಮ್ಮೆ ಭಾರೀ ಸಂಚಲನ ಸೃಷ್ಟಿಸಿಬಿಡುತ್ತವೆ. ಈ ಅನುಭವ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗನಿಗೂ ಆಗಿದೆ.
ಹೌದು, ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಆಜಂ ಖಾನ್ ಇಂಥದ್ದೇ ಒಂದು ನಕಲಿ ಸಾವಿನ ಸುದ್ದಿಗೆ ಗುರಿಯಾಗಿದ್ದಾರೆ. ಸುಳ್ಳು ಸುದ್ದಿ ನೋಡಿದ ಮೇಲೆ ಕೋಪಗೊಳ್ಳುವ ಬದಲು ಆಜಂ ಖಾನ್ ಅತ್ಯಂತ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಆ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ.. 28 ವರ್ಷದ ಆಜಂ ಖಾನ್ ಸ್ನೇಹಿತರ ಜೊತೆ ಕುಳಿತು ತಮ್ಮದೇ ಸಾವಿನ ಸುಳ್ಳು ಸುದ್ದಿ ನೋಡಿ ಜೋರಾಗಿ ನಗುತ್ತಿದ್ದಾರೆ. ನಂತರ ಸ್ನೇಹಿತರೊಂದಿಗೆ ಮಾತನ್ನಾಡುತ್ತ.. ಅಯ್ಯೋ ಪಾಪ, ಒಳ್ಳೆಯ ಆಟಗಾರನಾಗಿದ್ದ. ನಾಳೆ ಪಾಕಿಸ್ತಾನ ತಂಡದ ಪರವಾಗಿ ಆಡಬೇಕಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಇಂಥ ಸುದ್ದಿಗಳು ಹರಿದಾಡಿದಾಗ ಸೆಲೆಬ್ರಿಟಿಗಳು ಒಂದು ಕ್ಷಣ ಆಘಾತಕ್ಕೆ ಒಳಗಾಗುತ್ತಾರೆ. ಇಲ್ಲ ಕೋಪಗೊಳ್ಳುತ್ತಾರೆ. ಇಲ್ಲ ವಿಡಿಯೋ ಮಾಡಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಹರಿದಾಡುತ್ತಿರುವ ಸುದ್ದಿ ಸುಳ್ಳು. ನಾನು ಬದುಕಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸುತ್ತಿರೋರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ. ಆದರೆ ಅಜಂ ಖಾನ್ ಹಾಗೆ ಮಾಡಲಿಲ್ಲ. ತಮ್ಮ ಸಾವಿನ ಸುದ್ದಿಯನ್ನ ತಿಳಿದು ತಮಾಷೆಯಾಗಿ ನಗಾಡಿರೋದು ವೈರಲ್ ಆಗಿದೆ.
ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು, ಎಐ ಆಧಾರಿತ ಅನೇಕ ನಕಲಿ ವಿಚಾರಗಳು ಜನರಿಗೆ ಸುಲಭವಾಗಿ ಸಿಗುತ್ತಿವೆ. ಕ್ಷಣಾರ್ಧದಲ್ಲಿ ವೈರಲ್ ಆಗಿ ಬಿಡುತ್ತವೆ. ಮುಗ್ಧ ಜನರು ಯಾವುದನ್ನು ನಂಬಬೇಕು, ಯಾವುದು ನಂಬಬಾರದು ಎಂದು ಗೊತ್ತಾಗೋದಿಲ್ಲ. ಕಣ್ಣಿಗೆ ಕಾಣುತ್ತಿರೋದೇ ನಿಜ ಎಂದು ಆಘಾತಕ್ಕೆ ಒಳಗಾಗುತ್ತಿರುವ ಸಂಖ್ಯೆಯೂ ಹೆಚ್ಚಾಗಿದೆ. ಪಾಕಿಸ್ತಾನ ಸೇರಿದಂತೆ ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳ ಬಗ್ಗೆ ಇಂತಹ ನಕಲಿ ಸಾವಿನ ವರದಿಗಳು ಹರಡುತ್ತವೆ. ಆಜಂ ಖಾನ್ ವಿಚಾರದಲ್ಲೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳ ಹಾವಳಿ ಮಿತಿಮೀರಿದೆ. ಸಾಮಾನ್ಯ ಜನರಿಂದ ಹಿಡಿದು ಖ್ಯಾತ ಸೆಲೆಬ್ರಿಟಿಗಳವರೆಗೂ ನಕಲಿ ಸುದ್ದಿಗಳ ಹಾವಳಿವರೆಗೆ ಬಲಿಪಶುಗಳಾಗುತ್ತಿದ್ದಾರೆ.
ಆಜಂ ಖಾನ್ ಸಾಧನೆ
ಆಜಂ ಖಾನ್ ಪಾಕಿಸ್ತಾನ ಪರ ಕೊನೆಯದಾಗಿ 2024ರ ಜೂನ್ 6 ರಂದು ಡಲ್ಲಾಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ (USA) ವಿರುದ್ಧ ಕಣಕ್ಕಿಳಿದಿದ್ದರು. ಈವರೆಗೆ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕಾಗಿ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 88 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರೂ ದೇಶೀಯ ಕ್ರಿಕೆಟ್ ಹಾಗೂ ಲೀಗ್‌ಗಳಲ್ಲಿ ಸಕ್ರಿಯವಾಗಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (PSL) ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.


