ಗ್ರಾಸ್ ಐಲೆಟ್[ನ.11]: ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ದಾಖಲೆಯ ಆರಂಭಿಕ ಜೊತೆಯಾಟದಿಂದ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 84 ರನ್ ಭರ್ಜರಿ ಜಯ ಸಾಧಿಸಿದೆ.

ಬ್ಯಾಟ್ ಕೆಳಗಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ

ಶನಿವಾರ ತಡರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಪಡೆದಿದೆ. 186 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 101 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ಶಿಖಾ ಪಾಂಡೆ, ಸ್ಪಿನ್ನರ್‌ಗಳಾದ ರಾಧಾ ಯಾದವ್ ಹಾಗೂ ಪೂನಮ್ ಯಾದವ್ ತಲಾ 2 ವಿಕೆಟ್‌ಗಳನ್ನು ಕಬಳಿಸಿದರು. ದೀಪ್ತಿ ಹಾಗೂ ಪೂಜಾ ತಲಾ
1 ವಿಕೆಟ್ ಪಡೆದಿದರು. 

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿದರು. ಆರಂಭಿಕ ಶಫಾಲಿ ಹಾಗೂ ಸ್ಮೃತಿ ಮಂಧನಾ ಮೊದಲ ವಿಕೆಟ್‌ಗೆ ದಾಖಲೆಯ 143 ರನ್ ಆರಂಭಿಕ ಜೊತೆಯಾಟವಾಡಿದರು. 2013ರಲ್ಲಿ ಬಾಂಗ್ಲಾ ವಿರುದ್ಧ ತಿರುಶ್ ಕಾಮಿನಿ ಹಾಗೂ ಪೂನಮ್ ರಾವತ್ ಕಲೆಹಾಕಿದ್ದ 130 ರನ್ ಈವರೆಗಿನ ದಾಖಲೆಯಾಗಿತ್ತು. ಶಫಾಲಿ ಸ್ಫೋಟಕ ಆಟಕ್ಕೆ ಸಾಥ್ ನೀಡಿದ ಮಂಧನಾ ಬಿರುಸಿನ ಅರ್ಧಶತಕ ದಾಖಲಿಸಿದ್ದರು. ಮೊದಲ 10 ಓವರ್‌ಗಳಲ್ಲಿ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 102 ರನ್ ಪೇರಿಸಿತ್ತು. ಶಫಾಲಿ 49 ಎಸೆತಗಳಿಂದ 73 ರನ್ ಗಳಿಸಿದ್ದು, 6 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿದ್ದವು. ಮಂಧನಾ ಎದುರಿಸಿದ 46 ಎಸೆತಗಳಿಂದ 11 ಬೌಂಡರಿಗಳಿಂದ 67 ರನ್ ಗಳಿಸಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 13 ಎಸೆತಗಳಿಂದ 21 ರನ್, ವೇದಾ ಕೃಷ್ಣಮೂರ್ತಿ 7 ಎಸೆತಗಳಲ್ಲಿ 15 ರನ್ ಗಳಿಸಿ ಅಜೇಯರಾಗಿ ಉಳಿದರು.

ಸ್ಕೋರ್: 

ಭಾರತ 20 ಓವರಲ್ಲಿ 185/4 (ಶಫಾಲಿ 73, ಸ್ಮೃತಿ 67, ಅನಿಸಾ 2-35)

ವೆಸ್ಟ್ ಇಂಡೀಸ್ 20 ಓವರಲ್ಲಿ 101/9 (ಶೆಮಿನೆ 33, ಹೇಲೆ 13, ರಾಧಾ 2-10).