ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಭಾರತ-ಲಂಕಾ ಫೈಟ್ಕಳೆದ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ

ಸೈಲೆಟ್‌(ಅ.15): 2004ರ ಚೊಚ್ಚಲ ಆವೃತ್ತಿಯಿಂದಲೂ ಸತತ 6 ಬಾರಿ ಚಾಂಪಿಯನ್‌ ಆಗಿ, ಕಳೆದ ಬಾರಿ ರನ್ನರ್‌-ಅಪ್‌ ಆಗಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ 7ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಶನಿವಾರ ಶ್ರೀಲಂಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೆಣಸಲಿದೆ.

ಏಕದಿನ ಮಾದರಿಯಲ್ಲಿ ನಡೆದಿದ್ದ ಮೊದಲ 4 ಆವೃತ್ತಿಗಳಲ್ಲೂ ಭಾರತ, ಲಂಕಾ ವಿರುದ್ಧವೇ ಗೆದ್ದು ಚಾಂಪಿಯನ್‌ ಆಗಿತ್ತು. ಬಳಿಕ 2 ಬಾರಿ ಪಾಕಿಸ್ತಾನಕ್ಕೆ ಸೋಲುಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ಭಾರತ, ಕಳೆದ ವರ್ಷ ಫೈನಲ್‌ನಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿತ್ತು. ಮತ್ತೊಂದೆಡೆ ಲಂಕಾಕ್ಕೆ ಇದು 5ನೇ ಫೈನಲ್‌ ಆಗಿದ್ದು, ಭಾರತದ ವಿರುದ್ಧ 4 ಬಾರಿ ಸೋಲಿಗೆ ಸೇಡು ತೀರಿಸಿಕೊಂಡು ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

ಭಾರತಕ್ಕೆ ಶರಣಾಗಿದ್ದ ಲಂಕಾ

ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲೇ ಶ್ರೀಲಂಕಾ ಸವಾಲನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 6 ವಿಕೆಟ್‌ಗೆ 150 ರನ್‌ ಗಳಿಸಿದ್ದ ಭಾರತ, ಲಂಕಾವನ್ನು 109 ರನ್‌ಗೆ ಆಲೌಟ್‌ ಮಾಡಿ 41 ರನ್‌ ಜಯ ಸಾಧಿಸಿತ್ತು. ಲೀಗ್‌ ಹಂತದಲ್ಲಿ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಿದ್ದ ಭಾರತ, ಸೆಮೀಸ್‌ನಲ್ಲಿ ಥಾಯ್ಲೆಂಡ್‌ಗೆ ಸೋಲುಣಿಸಿ ಫೈನಲ್‌ಗೇರಿದರೆ, 3ನೇ ಸ್ಥಾನಿಯಾಗಿ ಸೆಮೀಸ್‌ಗೇರಿ ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಶ್ರೀಲಂಕಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಆಸ್ಪ್ರೇಲಿಯಾ-ಇಂಗ್ಲೆಂಡ್‌ 3ನೇ ಟಿ20 ಮಳೆಗೆ ಬಲಿ

ಕ್ಯಾನ್ಬೆರ್ರಾ: ಆಸ್ಪ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯ ಮಳೆಗೆ ಆಹುತಿಯಾಗಿದ್ದು, ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಪ್ರವಾಸಿ ಇಂಗ್ಲೆಂಡ್‌ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿತು. ಶುಕ್ರವಾರದ ಪಂದ್ಯಕ್ಕೆ ಹಲವು ಬಾರಿ ಮಳೆ ಅಡ್ಡಿಪಡಿಸಿತು. ಹೀಗಾಗಿ ತಲಾ 12 ಓವರ್‌ ಪಂದ್ಯ ನಿಗದಿಪಡಿಸಲಾಯಿತು. ಬಟ್ಲರ್‌(65) ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ 2 ವಿಕೆಟ್‌ಗೆ 112 ರನ್‌ ಗಳಿಸಿತು. ಬಳಿಕ ಆಸೀಸ್‌ 3.5 ಓವರಲ್ಲಿ 3 ವಿಕೆಟ್‌ಗೆ 30 ರನ್‌ ಗಳಿಸಿದ್ದಾಗ ಮತ್ತೆ ಮಳೆ ಸುರಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು.

ಟಿ20: ಮೇಘಾಲಯ ವಿರುದ್ಧ ರಾಜ್ಯಕ್ಕೆ ಜಯ

ಮೊಹಾಲಿ: ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ 2ನೇ ಗೆಲುವು ದಾಖಲಿಸಿದೆ. ಶುಕ್ರವಾರ ಎಲೈಟ್‌ ‘ಸಿ’ ಗುಂಪಿನ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 9 ವಿಕೆಟ್‌ ಜಯಗಳಿಸಿತು. ಇದರೊಂದಿಗೆ 8 ಅಂಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

T20 World Cup ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ಮಣಿಸಿ ತ್ರಿಕೋನ ಸರಣಿ ಗೆದ್ದ ಪಾಕಿಸ್ತಾನ..!

ಮೊದಲು ಬ್ಯಾಟ್‌ ಮಾಡಿದ ಮೇಘಾಲಯವನ್ನು ವೇಗಿ ವೈಶಾಖ್‌ ಕಾಡಿದರು. ಮೇಘಾಲಯ 20 ಓವರಲ್ಲಿ 8 ವಿಕೆಟ್‌ಗೆ ಕೇವಲ 89 ರನ್‌ ಗಳಿಸಿತು. ವೈಶಾಕ್‌ 4 ಓವರಲ್ಲಿ ಕೇವಲ 5 ರನ್‌ ನೀಡಿ 3 ವಿಕೆಟ್‌ ಪಡೆದರು. ರಾಜ್ಯ ತಂಡ 10.1 ಓವರಲ್ಲಿ ಗುರಿ ತಲುಪಿತು. ಪಡಿಕ್ಕಲ್‌ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ನಾಯಕ ಮಯಾಂಕ್‌ ಅಗರ್‌ವಾಲ್‌(47), ಮನೀಶ್‌ ಪಾಂಡೆ(42) ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಭಾನುವಾರ ಜಮ್ಮು-ಕಾಶ್ಮೀರ ವಿರುದ್ಧ ಆಡಲಿದೆ.

ಸ್ಕೋರ್‌: 
ಮೇಘಾಲಯ 20 ಓವರಲ್ಲಿ 89/8 (ಸಂಗ್ಮಾ 34, ತಿವಾರಿ 22, ವೈಶಾಕ್‌ 3-5), 
ಕರ್ನಾಟಕ 10.1 ಓವರಲ್ಲಿ 90/1 (ಮಯಾಂಕ್‌ 47*, ಮನೀಶ್‌ 42*, ಅಭಿಷೇಕ್‌ 1-15)