* ತ್ರಿಕೋನ ಸರಣಿ ಗೆದ್ದು ಬೀಗಿದ ಪಾಕಿಸ್ತಾನ ತಂಡ* ನ್ಯೂಜಿಲೆಂಡ್ ಎದುರು 5 ವಿಕೆಟ್‌ಗಳ ಜಯ ಸಾಧಿಸಿದ ಬಾಬರ್ ಅಜಂ ಪಡೆ* ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಮೊಹಮ್ಮದ್ ನವಾಜ್

ಕ್ರೈಸ್ಟ್‌ಚರ್ಚ್‌(ಅ.14): ಆಲ್ರೌಂಡರ್ ಮೊಹಮ್ಮದ್ ನವಾಜ್‌ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ತಂಡವು ಆತಿಥೇಯ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿ ತ್ರಿಕೋನ ಟಿ20 ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಉಳಿದ ತಂಡಗಳಿಗೆ ಸ್ಷಷ್ಟ ಸಂದೇಶ ರವಾನಿಸಿದೆ.

ಇಲ್ಲಿನ ಹೇಗ್ಲೆ ಓವಲ್‌ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ನೀಡಿದ್ದ 164 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 29 ರನ್‌ ಗಳಿಸುವಷ್ಟರಲ್ಲಿ ನಾಯಕ ಬಾಬರ್ ಅಜಂ ವಿಕೆಟ್ ಕಳೆದುಕೊಂಡಿತು. ಇನ್ನು ಚುರುಕಿನ ರನ್ ಗಳಿಸುವ ಯತ್ನದಲ್ಲಿ ಶಾನ್ ಮಸೂದ್ ಕೂಡಾ 19 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಟಿ20 ನಂ.1 ಶ್ರೇಯಾಂಕಿತ ಬ್ಯಾಟರ್ 34 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಪಾಕಿಸ್ತಾನ ತಂಡವು 11.3 ಓವರ್‌ಗಳಲ್ಲಿ 74 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. 

ಈ ವೇಳೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಮೊಹಮ್ಮದ್ ನವಾಜ್ ಹಾಗೂ ಹೈದರ್ ಅಲಿ ಜೋಡಿ 46 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಹೈದರ್ ಅಲಿ ಕೇವಲ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ನವಾಜ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 38 ರನ್ ಬಾರಿಸಿದರೆ, ಕೊನೆಯಲ್ಲಿ ಇಫ್ತಿಕರ್ ಅಹಮದ್ 14 ಎಸೆತಗಳಲ್ಲಿ 25 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

T20 World Cup: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ INOX

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡವು ಮೊದಲ ಓವರ್‌ನಲ್ಲೇ ಫಿನ್ ಅಲೆನ್‌ ವಿಕೆಟ್‌ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಡೆವೊನ್ ಕಾನ್‌ವೇ ಹಾಗೂ ನಾಯಕ ಕೇನ್‌ ವಿಲಿಯಮ್ಸ್‌ ಕೊಂಚ ಆಸರೆಯಾದರು. ಕೇನ್ ವಿಲಿಯಮ್ಸ್‌ ಕೇವಲ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 59 ರನ್ ಬಾರಿಸಿದರೆ, ಗ್ಲೆನ್‌ ಫಿಲಿಫ್ಸ್‌(29), ಚಾಪ್ಮನ್ 25 ಹಾಗೂ ಜೇಮ್ಸ್‌ ನೀಶಮ್‌ 17 ರನ್ ಬಾರಿಸುವ ಮೂಲಕ ಕಿವೀಸ್ ತಂಡವು ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.