ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ ಆಡದಿರುವುದಕ್ಕೆ ಬಿಸಿಸಿಐ ನಿಯಮವೇ ಕಾರಣ. ಅವರು ಈಗಾಗಲೇ ಅಂಡರ್-19 ವಿಶ್ವಕಪ್ ಆಡಿದ್ದು, ಇತರ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲೇ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಮಸ್ಕತ್‌(ನ.09): ಭಾರತದ ಯುವ ಕ್ರಿಕೆಟ್‌ನ ಹೊಸ ಬ್ಯಾಟಿಂಗ್‌ ಸೆನ್ಸೇಷನ್‌ ವೈಭವ್‌ ಸೂರ್ಯವಂಶಿ ಅಲ್ಪ ಅವಧಿಯಲ್ಲೇ ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿರುವ ಈ 15 ವರ್ಷದ ಆಟಗಾರ ಒಮನ್‌ನಲ್ಲಿ ನಡೆಯುತ್ತಿರುವ ಅಂಡರ್‌-19 ಏಷ್ಯಾಕಪ್‌ನಲ್ಲಿ ಆಡುತ್ತಿಲ್ಲ. ಭಾರತ ತಂಡ ಟೂರ್ನಿಯಲ್ಲಿ ಕಣಕ್ಕಿಳಿದಿರುವಾಗ ವೈಭವ್‌ ತಂಡದಲ್ಲಿ ಇಲ್ಲದಿರುವುದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ವಯಸ್ಸಿನ ಮಾನದಂಡದ ಪ್ರಕಾರ ವೈಭವ್‌ ಸೂರ್ಯವಂಶಿ ಅಂಡರ್‌-19 ಏಷ್ಯಾಕಪ್‌ನಲ್ಲಿ ಆಡಲು ಅರ್ಹರಾಗಿದ್ದಾರೆ. ಆದರೂ ಅವರು ತಂಡದಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾರಿಗೆ ತಂದಿರುವ ನಿಯಮವೇ ಪ್ರಮುಖ ಕಾರಣ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಅಂಡರ್‌-19 ವಿಶ್ವಕಪ್‌ಗೆ ಮಾತ್ರ ಅನ್ವಯಿಸುವ ನಿಯಮ!

ಕಿರಿಯರ ಹಂತದಲ್ಲಿ ವಯಸ್ಸಿನ ವಂಚನೆಯನ್ನು ತಡೆಯುವ ಉದ್ದೇಶದಿಂದ ಬಿಸಿಸಿಐ 2016ರಲ್ಲಿ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿತ್ತು. ಇದರ ಪ್ರಕಾರ, ಒಬ್ಬ ಆಟಗಾರ ಎರಡು ಆವೃತ್ತಿಗಳ ಅಂಡರ್‌-19 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ವೈಭವ್‌ ಸೂರ್ಯವಂಶಿ ಈ ವರ್ಷದ ಆರಂಭದಲ್ಲಿ ಜಿಂಬಾಬ್ವೆಯಲ್ಲಿ ನಡೆದ ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್‌ ಸಿಡಿಸಿ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಭಾರತ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದಿತ್ತು.

ಈ ನಿಯಮದ ಹಿನ್ನೆಲೆಯಲ್ಲಿ ವೈಭವ್‌ ಮತ್ತೊಂದು ಅಂಡರ್‌-19 ವಿಶ್ವಕಪ್‌ನಲ್ಲಿ ಆಡಲು ಅವಕಾಶ ಹೊಂದಿಲ್ಲ. ಕಿರಿಯರ ಕ್ರಿಕೆಟ್‌ನಲ್ಲಿ ವಯಸ್ಸಿನ ದಾಖಲೆಗಳನ್ನು ತಿರುಚುವ ಪ್ರಕರಣಗಳನ್ನು ನಿಯಂತ್ರಿಸುವುದು ಬಿಸಿಸಿಐ ಈ ನಿಯಮ ಜಾರಿಗೆ ತಂದಿರುವ ಪ್ರಮುಖ ಉದ್ದೇಶವಾಗಿದೆ. ಇದಷ್ಟೇ ಅಲ್ಲದೇ ಹೊಸ ಹೊಸ ಯುವ ಆಟಗಾರರಿಗೆ ಅಂಡರ್‌-19 ವಿಶ್ವಕಪ್‌ ಆಡಲು ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಬಿಸಿಸಿಐ ಈ ನಿಯಮ ಜಾರಿಗೆ ತಂದಿದೆ.

ಏಷ್ಯಾಕಪ್‌ನಲ್ಲಿ ಆಡಲು ವೈಭವ್‌ಗೆ ವಯಸ್ಸಿನ ನಿರ್ಬಂಧವಿಲ್ಲ!

ಹಾಗಾದರೆ ವೈಭವ್‌ ಸೂರ್ಯವಂಶಿ ಅಂಡರ್‌-19 ಕ್ರಿಕೆಟ್‌ ಆಡಲು ಅನರ್ಹರಾಗಿದ್ದಾರೆಯೇ? ವಯಸ್ಸಿನ ದೃಷ್ಟಿಯಿಂದ ನೋಡಿದರೆ ಖಂಡಿತವಾಗಿಯೂ ಇಲ್ಲ. ಅವರಿಗೆ ಇನ್ನೂ 15 ವರ್ಷ ವಯಸ್ಸಾಗಿದ್ದು, ಅಂಡರ್‌-19 ವಿಭಾಗದಲ್ಲಿ ಆಡುವ ಅರ್ಹತೆ ಇದೆ. ‘ಔಟ್‌ಲುಕ್‌’ ವರದಿಯ ಪ್ರಕಾರ, ಬಿಸಿಸಿಐನ ಈ ನಿಯಮ ಅಂಡರ್‌-19 ವಿಶ್ವಕಪ್‌ಗೆ ಮಾತ್ರ ಅನ್ವಯಿಸುತ್ತದೆ. ಇತರ ಅಂಡರ್‌-19 ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ಸಾರ್ವತ್ರಿಕ ನಿಷೇಧವಿಲ್ಲ. ಹೀಗಾಗಿ, ವೈಭವ್‌ ಸೂರ್ಯವಂಶಿ ಅಂಡರ್‌-19 ಏಷ್ಯಾಕಪ್‌ನಲ್ಲಿ ಆಡದಿರುವುದಕ್ಕೆ ವಯಸ್ಸಿನ ಅರ್ಹತೆಯ ಕೊರತೆ ಕಾರಣವಲ್ಲ.

ಆದರೆ, ವೈಭವ್‌ ಇನ್ನು ಮುಂದೆ ಅಂಡರ್‌-19 ವಿಶ್ವಕಪ್‌ನಲ್ಲಿ ಆಡಲು ಅರ್ಹರಾಗಿರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಬಿಸಿಸಿಐ ಇತರ ಯುವ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿರುವುದು ಸೂಕ್ತ ಆಯ್ಕೆ ಎನ್ನಲಾಗಿದೆ. ಈಗಾಗಲೇ ವೈಭವ್‌ ಹಿರಿಯರ ಭಾರತ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾಕಪ್‌ನಲ್ಲಿ ಪಾಕ್‌ ವಿರುದ್ಧ ಕಣಕ್ಕೆ

ಒಮನ್‌ನಲ್ಲಿ ನಡೆಯುತ್ತಿರುವ ಅಂಡರ್‌-19 ಏಷ್ಯಾಕಪ್‌ನಲ್ಲಿ ಆಡದಿದ್ದರೂ ವೈಭವ್‌ ಸೂರ್ಯವಂಶಿ ಮತ್ತೊಂದು ಪ್ರಮುಖ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ರೈಸಿಂಗ್‌ ಸ್ಟಾರ್ಸ್‌ ಏಷ್ಯಾಕಪ್‌ ಟೂರ್ನಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಭಾಗವಾಗಿದ್ದಾರೆ. ತಿಲಕ್‌ ವರ್ಮಾ ನಾಯಕತ್ವದ ಭಾರತ ಎ ತಂಡ ಈ ತಿಂಗಳ ಕೊನೆಯಲ್ಲಿ ಟೂರ್ನಿಯಲ್ಲಿ ಆಡಲಿದೆ. ನವೆಂಬರ್‌ 22ರಂದು ದೋಹಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಎ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಇತ್ತ, ಲಕ್ಷ್ಯ ರೈಚಂದಾನಿ ನಾಯಕತ್ವದ ಭಾರತ ಅಂಡರ್‌-19 ತಂಡ ಒಮನ್‌ನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತ ಕಿರಿಯರ ತಂಡ ಸೋಲು ಅನುಭವಿಸಿತ್ತು.

ಪಾಕಿಸ್ತಾನ ಕಿರಿಯರ ವಿರುದ್ಧ ಭಾರತಕ್ಕೆ ಸೋಲು!

ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾನುವಾರ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋಲು ಎದುರಾಗಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಭಾರತದ ವಿರುದ್ಧ ಪಾಕ್‌ 3 ವಿಕೆಟ್‌ ಅಂತರದಲ್ಲಿ ಗೆದ್ದಿತು. ಇದರೊಂದಿಗೆ ಪಾಕ್‌ ಸತತ 2 ಗೆಲುವಿನೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಭಾರತ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲಿನೊಂದಿಗೆ 2ನೇ ಸ್ಥಾನದಲ್ಲೇ ಉಳಿದುಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 46.3 ಓವರ್‌ಗಳಲ್ಲಿ 208 ರನ್‌ಗೆ ಆಲೌಟಾಯಿತು. ರನ್‌ ಖಾತೆ ತೆರೆಯುವ ಮೊದಲೇ ನಾಯಕ ಲಕ್ಷ್ಯ ರಾಯ್ಚಂದಾನಿ ವಿಕೆಟ್‌ ಕಳೆದುಕೊಂಡ ಭಾರತ ಸಂಕಷ್ಟಕ್ಕೊಳಗಾಯಿತು. ಆರ್ಯವೀರ್‌ ಸೆಹ್ವಾಗ್‌ 22 ರನ್‌ ಗಳಿಸಿದರೆ, ವಿ.ಕೆ.ವಿನೀತ್‌ 9, ಯಶವರ್ಧನ್‌ ಚೌಹಾಣ್‌ 1, ಅನ್ವಯ್‌ ದ್ರಾವಿಡ್‌ 10 ರನ್‌ಗೆ ವಿಕೆಟ್‌ ಒಪ್ಪಿಸಿದರು. 42ಕ್ಕೆ 4, ಬಳಿಕ 86 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡವನ್ನು ಮೇಲೆತ್ತಿದ್ದು ಅರ್ಜುನ್ ರಜಪೂತ್‌. ಅವರು 85 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 107 ರನ್‌ ಸಿಡಿಸಿದರು. ಕಾವ್ಯ ಪರೇಶ್‌ 23 ರನ್‌ ಕೊಡುಗೆ ನೀಡಿದರು.

ಕಮ್‌ಬ್ಯಾಕ್‌:

ಸ್ಪರ್ಧಾತ್ಮಕ ಗುರಿ ಪಡೆದ ಪಾಕ್‌ ಕೂಡಾ ಆರಂಭಿಕ ಆಘಾತಕ್ಕೊಳಗಾಯಿತು. 61 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡ ಸೋಲಿನ ಭೀತಿಯಲ್ಲಿತ್ತು. ಆದರೆ 6ನೇ ವಿಕೆಟ್‌ಗೆ 107 ರನ್‌ ಜೊತೆಯಾಟ ಮೂಡಿಬಂತು. ಹಂಝ ಝಹೂರ್‌ ಔಟಾಗದೆ 100 ರನ್‌ ಸಿಡಿಸಿ, ತಂಡವನ್ನು 48.1 ಓವರ್‌ಗಳಲ್ಲಿ ಗೆಲ್ಲಿಸಿದರು. ಮನಾಲ್‌ ಚೌಹಾಣ್ 3 ವಿಕೆಟ್‌ ಕಿತ್ತರು.