15 ವರ್ಷದ ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಅವಕಾಶ ತಪ್ಪಿಹೋಗಿದೆ. ಅನುಭವಿ ಆಟಗಾರರಿಗೆ ಆದ್ಯತೆ ನೀಡಿದ್ದಾಗಿ ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತವು ಐರ್ಲೆಂಡ್ ವಿರುದ್ಧ 34 ರನ್‌ಗಳ ಆಘಾತಕಾರಿ ಸೋಲನುಭವಿಸಿ, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಭಾರತ 'ಎ' ತಂಡದ ಪರ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ರೆಡ್ ಹಾಟ್ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ, ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೀನಿಯರ್ಸ್ ತಂಡದ ಪರ ಪಾದಾರ್ಪಣೆ ಮಾಡುವ ಕನಸು ಕಾಣುತ್ತಿದ್ದರು. ಆದರೆ ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಈ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ತುಟಿಬಿಚ್ಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ವೇಳೆ ನಿನ್ನೆ ವೈಭವ್ ಸೂರ್ಯವಂಶಿ, ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರೇ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ(15 ವರ್ಷ 91 ದಿನ) ಕ್ರಿಕೆಟಿಗ ಎನ್ನುವ ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯುತ್ತಿದ್ದರು. ಈ ಮೊದಲು ಭಾರತದ ಮಹಿಳಾ ಕ್ರಿಕೆಟರ್ ಶಫಾಲಿ ವರ್ಮಾ(15 ವರ್ಷ 239 ದಿನ) ಭಾರತ ಪ್ರತಿನಿಧಿಸಿದ ಅತ್ಯಂತ ಕಿರಿಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಇನ್ನು ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(16 ವರ್ಷ 205) ಸದ್ಯ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ ಅತಿಕಿರಿಯ ಪುರುಷ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟಿದ್ದೇಕೆ?

ಟಾಸ್ ವೇಳೆ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 'ದುರಾದೃಷ್ಟವಶಾತ್ ಇಂದು ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರೊಬ್ಬ ಗನ್ ಪ್ಲೇಯರ್, ಆದರೆ ನಮ್ಮ ತಂಡದಲ್ಲಿ ಸಾಕಷ್ಟು ಅದ್ಭುತ ಆಟಗಾರರು ಇದ್ದು, ಅವರು ಈ ಹಿಂದೆ ಸಾಕಷ್ಟು ಒಳ್ಳೆಯ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರನ್ನು ಮೊದಲ ಆಯ್ಕೆಯ ಆಟಗಾರರಾಗಿ ಆರಿಸಿಕೊಂಡಿದ್ದೇವೆ. ಸಮಯ ಬಂದಾಗ ಖಂಡಿತ ವೈಭವ್ ಸೂರ್ಯವಂಶಿಗೂ ಅವಕಾಶ ಸಿಗಲಿದೆ' ಎಂದು ಟಾಸ್ ಸೋತ ನಾಯಕ ಶ್ರೇಯಸ್ ಅಯ್ಯರ್ ಹೇಳಿದರು.

ಭಾರತ ತಂಡವು ಈಗಾಗಲೇ ಮೂವರು ಸ್ಪೋಟಕ ಹಾಗೂ ಬಲಿಷ್ಠ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅದ್ಭುತ ಆಟ ಪ್ರದರ್ಶಿಸಿದ್ದರು. ಹೀಗಾಗಿಯೇ ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲೂ ಈ ಮೂವರಿಗೆ ಅವಕಾಶ ಕಲ್ಪಿಸಲಾಗಿತ್ತು.

ಐರ್ಲೆಂಡ್‌ಗೆ ಶರಣಾದ ಭಾರತ!

ಬೆಲ್ಫಾಸ್ಟ್‌: ಐರ್ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಆಘಾತಕಾರಿ ಸೋಲನುಭವಿಸಿದೆ. ಇದು ಯಾವುದೇ ಮಾದರಿಯಲ್ಲಿ ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಮೊದಲ ಸೋಲು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ಪಡೆ 0-1 ಹಿನ್ನಡೆ ಅನುಭವಿಸಿದೆ.

ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 9 ವಿಕೆಟ್‌ಗೆ 182 ರನ್‌ ಗಳಿಸಿತು. ಪವರ್‌-ಪ್ಲೇನಲ್ಲಿ 3 ವಿಕೆಟ್‌ಗೆ 36 ರನ್‌ ಗಳಿಸಿದ್ದ ತಂಡ ಬಳಿಕ ಅಬ್ಬರಿಸಿತು. ನಾಯಕ ಲಾರ್ಕನ್‌ ಟಕ್ಕರ್‌ 50, ಗ್ಯಾರೆತ್‌ ಡೆಲಾನಿ 49 ರನ್‌ ಸಿಡಿಸಿದರು. ಹರ್ಷಿತ್‌ 3, ಅರ್ಶ್‌ದೀಪ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಬೆನ್ನತ್ತಿದ ಭಾರತ 18.5 ಓವರ್‌ಗಳಲ್ಲಿ 148ಕ್ಕೆ ಆಲೌಟಾಯಿತು. ಅಭಿಷೇಕ್‌ ಶರ್ಮಾ 20 ಎಸೆತಕ್ಕೆ 49, ಶಿವಂ ದುಬೆ 25 ರನ್‌ ಗಳಿಸಿದ್ದು ಬಿಟ್ಟರೆ ಇತರರು ಮಿಂಚಲಿಲ್ಲ.