ವೈಭವ್ ಸೂರ್ಯವಂಶಿಗೆ ಅವಕಾಶ ನೀಡದ ಸಂಬಂಧ ತೀವ್ರ ಟೀಕೆಗಳು ಎದುರಾಗುತ್ತಿದೆ. ಇದರ ಬೆನ್ನಲ್ಲೇ ಪ್ಲೇಯಿಂಗ್ 11 ಚಾನ್ಸ್ ಕುರಿತು ಬಿಸಿಸಿಐ ಕೊನೆಗೂ ಮೌನ ಮುರಿದಿದೆ. ತಂಡದ ಮ್ಯಾನೇಜ್ಮೆಂಟ್ ವಿರುದ್ದ ಟೀಕೆ ಬೆನ್ನಲ್ಲೇ ಬಿಸಿಸಿಐ ಹೇಳಿದ್ದೇನು?
ಲಂಡನ್ (ಜು.03) ಭಾರತ ತಂಡದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಸೋಲು ಗೆಲುವಿಗಿಂತ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಿದಿರುವ ಕುರಿತೇ ಚರ್ಚೆಯಾಗುತ್ತಿದೆ. ಐರ್ಲೆಂಡ್ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪದಾರ್ಪಣೆ ಮಾಡುತ್ತಾರೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿತ್ತು. ಆದರೆ ಎರಡೂ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬೆಂತ್ ಕಾದಿದ್ದರು. ಐರ್ಲೆಂಡ್ ವಿರುದ್ಧ ಸರಣಿ ಸೋತ ಭಾರತ ನೇರವಾಗಿ ಇಂಗ್ಲೆಂಡ್ ಪ್ರವಾಸ ಮಾಡಿ ಮೊದಲ ಪಂದ್ಯ ಆಡಿದೆ. ಆದರೆ ಮೊದಲ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಸ್ಥಾನ ಪಡೆಯಲಿಲ್ಲ. ಇದು ಟೀಕೆಗೆ ಕಾರಣವಾಗಿತ್ತು. ಈ ಟೀಕೆಗಳು, ಆರೋಪಗಳ ನಡುವೆ ಬಿಸಿಸಿಐ ವೈಭವ್ ಚಾನ್ಸ್ ಕುರಿತು ಪ್ರತಿಕ್ರಿಯೆ ನೀಡಿದೆ.
ಬಿಸಿಸಿಐ ಹೇಳಿದ್ದೇನು?
ಟೈಮ್ಸ್ ನೌ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡುವ ಕುರಿತು, ಟೀಂ ಮ್ಯಾನೇಜ್ಮೆಂಟ್ ವಿರುದ್ದ ಕೇಳಿಬರುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ರಾಜೀವ್ ಶುಕ್ಲಾ, ತಂಡದ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಯುವ ಆಟಾಗರ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ ಅನ್ನೋದೇ ಆತನ ಆತ್ಮವಿಶ್ವಾಸ ಡಬಲ್ ಮಾಡುತ್ತೆ. ತಂಡದಲ್ಲಿ ಯಾರು ಆಡಬೇಕು, ಯಾರು ಇರಬೇಕು ಅನ್ನೋ ಕುರಿತು ಟೀಂ ಮ್ಯಾನೇಜ್ಮೆಂಟ್ ಸಾಕಷ್ಟು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಟೀಂ ಮ್ಯಾನೇಜ್ಮೆಂಟ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ತೀವ್ರ ಟೀಕೆಗಳ ಕುರಿತು ರಾಜೀವ್ ಶುಕ್ಲಾ ಮಾತನಾಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಹಲವು ತಂಡದ ಆಯ್ಕೆ ಕುರಿತು ಪ್ರಶ್ನಿಸುತ್ತಿದ್ದಾರೆ. ಅಭಿಪ್ರಾಯಗಳು, ಟೀಕೆಗಳು, ಆರೋಪಗಳ ಮೇಲೆ ಟೀಂ ಮ್ಯಾನೇಜ್ಮೆಂಟ್ ನಿರ್ಧಾರವನ್ನು, ತಂಡದ ಆಯ್ಕೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಆಡ್ತಾರ ವೈಭವ್
ಇಂಗ್ಲೆಂಡ್ ವಿರುದ್ದಧ 5 ಟಿ20 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಮಳೆಯಲ್ಲಿ ಅಂತ್ಯಗೊಂಡಿದೆ. ಇದೀಗ ಜುಲೈ 4ರಂದು 2ನೇ ಟಿ20 ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕಣಕ್ಕಿಳಿಯುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ. ವೈಭವ್‌ಗೆ ಅವಕಾಶ ನೀಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಆದರೆ ಎರಡನೇ ಟಿ20ಯಲ್ಲೂ ವೈಭವ್ ಸೂರ್ಯವಂಶಿ ಆಡುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.
2026ರ ಟಿ20 ವಿಶ್ವಕಪ್ ಗೆಲವಿನಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ರೂವಾರಿಯಾಗಿದ್ದಾರೆ. ಇದೀಗ ಒಂದೆರೆಡು ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನ ನೀಡಿಲ್ಲ ಅನ್ನೋ ಕಾರಣಕ್ಕೆ ವಿಶ್ರಾಂತಿ ನೀಡುವುದು ಸೂಕ್ತವಲ್ಲ. ಇತ್ತ ಅಭಿಷೇಕ್ ಶರ್ಮಾ ಕೂಡ ದಿಟ್ಟ ಹೋರಾಟ ನೀಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು . ಹೀಗಾಗಿ ತಂಡದಲ್ಲಿ ಭಾರಿ ಬದಲಾವಣೆ ಸಾಧ್ಯತೆಗಳು ಕಡಿಮೆ ಎಂದು ಟೀಂ ಇಂಡಿಯಾ ಮೂಲಗಳು ಹೇಳುತ್ತಿದೆ. ಟಿ20 ವಿಶ್ವಕಪ್ ಗೆದ್ದ ತಂಡದಲ್ಲೇ ಕೆಲ ಬದಲಾವಣೆ ಮಾಡಿ ತಂಡದ ಆಯ್ಕೆ ಮಾಡಲಾಗಿತ್ತು. ಇದೀಗ ಈ ಕಾಂಬಿನೇಷನ್ ಮೂಲಕ ಸರಣಿ ಗೆಲ್ಲಲು ಟೀಂ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ.
ಐರ್ಲೆಂಡ್ ವಿರುದ್ದದ 2 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕಳಪೆಯಾಗಿತ್ತು. ಈ ವೇಳೆ ವೈಭವ್ ಸೂರ್ಯವಂಶಿ ಅನುಪಸ್ಥಿತಿಯನ್ನು ಹಲವರು ಉಲ್ಲೇಖಿಸಿದ್ದರು. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ವೈಭವ್ ಸೂರ್ಯವಂಶಿ ಕುರಿತು ಚರ್ಚೆಯಾಗುತ್ತಿದೆ. ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪ್ರಶ್ನಿಸಿದ್ದಾರೆ. ವೈಭವ್ ಬೆಂಚ್ ಕಾಯುವುದು ಉತ್ತಮವಲ್ಲ ಎಂದಿದ್ದಾರೆ.


