15 ವರ್ಷದ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಅವರ ನಿರೀಕ್ಷಿತ ಅಂತಾರಾಷ್ಟ್ರೀಯ ಪದಾರ್ಪಣೆಯು ಐರ್ಲೆಂಡ್‌ನಲ್ಲಿ 'ವೈಭವ್ ಫೀವರ್' ಸೃಷ್ಟಿಸಿದೆ. ಭಾರತ-ಐರ್ಲೆಂಡ್ ಟಿ20 ಸರಣಿಯ ಟಿಕೆಟ್‌ಗಳು ನಿಮಿಷಗಳಲ್ಲಿ ಮಾರಾಟವಾಗಿದ್ದು, ಕಡಿಮೆ ಸಾಮರ್ಥ್ಯದ ಕ್ರೀಡಾಂಗಣ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ಐರ್ಲೆಂಡ್ ಮಂಡಳಿ ಅಭಿಮಾನಿಗಳ ಆಕ್ರೋಶ ಎದುರಿಸುತ್ತಿದೆ.

ಬೆಲ್‌ಫಾಸ್ಟ್: ಭಾರತೀಯ ಕ್ರಿಕೆಟ್‌ನ ಹೊಸ ಸಂಚಲನ, 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪದಾರ್ಪಣೆ ನೋಡಲು ಇಡೀ ಕ್ರೀಡಾಲೋಕವೇ ಕಾತರದಿಂದ ಕಾಯುತ್ತಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ವೈಭವ್ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವರದಿಗಳಿವೆ. ಈ 'ವೈಭವ್ ಫೀವರ್' ಜೋರಾಗಿದ್ದರಿಂದ, ಟಿ20 ಸರಣಿಯ ಟಿಕೆಟ್‌ಗಳು ದಾಖಲೆ ವೇಗದಲ್ಲಿ ಮಾರಾಟವಾಗಿವೆ. ಇಂದು ಬೆಲ್‌ಫಾಸ್ಟ್ ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಟಿಕೆಟ್‌ಗಳು ಮಾರಾಟಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಖಾಲಿಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮಾರ್ಚ್‌ನಲ್ಲಿ ಭಾರತ ವಿರುದ್ಧದ ಸರಣಿಯನ್ನು ಘೋಷಿಸಿದಾಗ, 15 ವರ್ಷದ ಹುಡುಗನೊಬ್ಬ ತಂಡಕ್ಕೆ ಬಂದು ಇಷ್ಟೊಂದು ದೊಡ್ಡ ಕ್ರೇಜ್ ಸೃಷ್ಟಿಸುತ್ತಾನೆ ಎಂದು ಕ್ರಿಕೆಟ್ ಐರ್ಲೆಂಡ್ ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ಡಬ್ಲಿನ್‌ನ 12,000 ಆಸನ ಸಾಮರ್ಥ್ಯದ ಮಲಾಹೈಡ್ ಗ್ರೌಂಡ್ ಬದಲು, ಈ ಬಾರಿ ಬೆಲ್‌ಫಾಸ್ಟ್ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್‌ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೇ ನಿರ್ಧಾರ ಈಗ ಐರ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಡಿಮೆ ಆಸನ ಸಾಮರ್ಥ್ಯದ ಸ್ಟೇಡಿಯಂ ಆಯ್ಕೆ ಮಾಡಿದ್ದಕ್ಕೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಸಿಗದ ಕಾರಣ ಬೋರ್ಡ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸರಣಿ ರೋಚಕತೆ ಹೆಚ್ಚಿಸಿದ ವೈಭವ್ ಸೂರ್ಯವಂಶಿ ಉಪಸ್ಥಿತಿ

"ಟಿಕೆಟ್‌ಗಾಗಿ ನನ್ನ ಫೋನ್ ಸದಾ ರಿಂಗ್ ಆಗುತ್ತಲೇ ಇದೆ. ದುರದೃಷ್ಟವಶಾತ್, ನಾವು ಇಲ್ಲಿ 4,500 ರಿಂದ 5,000 ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಬಹುದು. ಒಂದು ವೇಳೆ ಹೆಚ್ಚು ಸ್ಥಳಾವಕಾಶವಿದ್ದಿದ್ದರೆ, ನಾವು ಇದರ ಮೂರು ಪಟ್ಟು ಟಿಕೆಟ್‌ಗಳನ್ನು ಆರಾಮವಾಗಿ ಮಾರಬಹುದಿತ್ತು. ನಿಮಿಷಗಳಲ್ಲೇ ಟಿಕೆಟ್‌ಗಳು ಖಾಲಿಯಾದವು. ಈಗಲೂ ಜನರು ಟಿಕೆಟ್‌ಗಾಗಿ ವಿಚಾರಿಸುತ್ತಿದ್ದಾರೆ," ಎಂದು ಕ್ರಿಕೆಟ್ ಐರ್ಲೆಂಡ್ ಅಧ್ಯಕ್ಷ ಬ್ರಿಯಾನ್ ಮೆಕ್‌ನೀಸ್ 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿದ್ದಾರೆ. "'ನಾನೂ ಅಲ್ಲಿದ್ದೆ' ಎಂದು ಹೇಳಿಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ವೈಭವ್ ಸೂರ್ಯವಂಶಿ ಅವರ ಉಪಸ್ಥಿತಿ ಸರಣಿಯ ರೋಚಕತೆಯನ್ನು ದುಪ್ಪಟ್ಟು ಮಾಡಿದೆ," ಎಂದು ಮೆಕ್‌ನೀಸ್ ಹೇಳಿದ್ದಾರೆ.

"ಇದು ಬಹಳ ದೊಡ್ಡ ವಿಷಯ. ಎಲ್ಲರೂ ಅವನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅವನು ನಿಜಕ್ಕೂ ಅದ್ಭುತ ಪ್ರತಿಭೆ. ಅವನು ಪದಾರ್ಪಣೆ ಮಾಡಿದರೆ, ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಲ್ಲರೂ ಬಯಸುತ್ತಾರೆ. ಅವನು ಎಲ್ಲರ ಗಮನವನ್ನು ಸಂಪೂರ್ಣವಾಗಿ ಸೆಳೆದಿದ್ದಾನೆ," ಎಂದು ಮೆಕ್‌ನೀಸ್ ಸ್ಪಷ್ಟಪಡಿಸಿದರು.

ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್‌ ಪರ ನೀಡಿದ ಸ್ಫೋಟಕ ಪ್ರದರ್ಶನವೇ ವೈಭವ್ ಅವರನ್ನು ಭಾರತ ತಂಡಕ್ಕೆ ಕರೆತಂದಿದೆ. ಆ ಸೀಸನ್‌ನಲ್ಲಿ ಈ ಯುವ ಎಡಗೈ ಬ್ಯಾಟರ್ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೊದಲಿಗರಾಗಿದ್ದರು. ಇತ್ತೀಚೆಗೆ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶ್ರೀಲಂಕಾ ಎ ತಂಡದ ವಿರುದ್ಧ ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿ ವೈಭವ್ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ್ದರು. ಐರ್ಲೆಂಡ್ ಸರಣಿಯ ನಂತರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ವೈಭವ್ ಆಯ್ಕೆಯಾಗಿದ್ದಾರೆ.

ಸಂಜು-ಕಿಶನ್-ಸೂರ್ಯವಂಶಿ ಮೂವರಲ್ಲಿ ಯಾರಿಗೆ ಸಿಗುತ್ತೆ ಸ್ಥಾನ?

ಪ್ರಮುಖವಾಗಿ ಭಾರತ ಹಾಗೂ ಐರ್ಲೆಂಡ್‌ ನಡುವಿನ ಈ ಸರಣಿ 15 ವರ್ಷದ ಯುವ ತಾರೆ ವೈಭವ್‌ ಸೂರ್ಯವಂಶಿ ಮೇಲೆ ಕೇಂದ್ರೀಕೃತವಾಗಿದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದು, ಅವರಿಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲವಿದೆ. ಸದ್ಯ ಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ನಡುವೆ ಪೈಪೋಟಿಯಿದ್ದು, ಇವರ ಜೊತೆಗೆ ವೈಭವ್‌ ಕೂಡಾ ಸ್ಪರ್ಧೆಗಿಳಿಯಲಿದ್ದಾರೆ.