ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಶುಭ್‌ಮನ್ ಗಿಲ್ ಅವರನ್ನು ಭಾರತೀಯ ಟಿ20 ತಂಡದಿಂದ ಹೊರಗಿಡಲಾಗಿದೆ. ಕೆಲಸದ ಹೊರೆ ನಿರ್ವಹಣೆ ಮತ್ತು 2027ರ ಏಕದಿನ ವಿಶ್ವಕಪ್‌ಗೆ ಅವರನ್ನು ಸಿದ್ಧವಾಗಿರಿಸಲು, ಬಿಸಿಸಿಐ ಆಯ್ಕೆ ಸಮಿತಿಯು ಗಿಲ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನಹರಿಸಬೇಕೆಂದು ಸೂಚಿಸಿದೆ.

Shubman Gill Excluded from India T20 Squad: ಐಪಿಎಲ್‌ನಲ್ಲಿ ರನ್ ಹೊಳೆ ಹರಿಸಿ, ಗುಜರಾತ್ ತಂಡವನ್ನು ಫೈನಲ್‌ಗೆ ಕೊಂಡೊಯ್ದರೂ, ಶುಭ್‌ಮನ್ ಗಿಲ್ ಅವರನ್ನು ಭಾರತೀಯ ಟಿ20 ತಂಡಕ್ಕೆ ಪರಿಗಣಿಸದಿರಲು ಆಯ್ಕೆ ಸಮಿತಿ ನಿರ್ಧರಿಸಿದೆ. ಅತಿಯಾದ ಕೆಲಸದ ಹೊರೆ ಹಾಗೂ ಗಾಯದ ಸಮಸ್ಯೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ 2027ರ ಏಕದಿನ ವಿಶ್ವಕಪ್‌ವರೆಗೆ ಶುಭ್‌ಮನ್ ಗಿಲ್ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸಬೇಕು ಎಂದು ಸೆಲೆಕ್ಟರ್‌ಗಳು ಸೂಚಿಸಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಐಪಿಎಲ್‌ನಲ್ಲಿ ಶುಭ್‌ಮನ್ ಗಿಲ್, ಗುಜರಾತ್ ಟೈಟಾನ್ಸ್ ಪರ 163ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 732 ರನ್ ಗಳಿಸಿದ್ದರು. ಇದು ಅವರ ಐಪಿಎಲ್ ವೃತ್ತಿಜೀವನದ ಎರಡನೇ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ, ಆರಂಭಿಕ ಆಟಗಾರರ ಸ್ಥಾನಕ್ಕೆ ಈಗಾಗಲೇ ಸಾಕಷ್ಟು ಪೈಪೋಟಿ ಇದೆ. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಐಪಿಎಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಅವರಂತಹ ಆಟಗಾರರು ಟಾಪ್ ಆರ್ಡರ್‌ನಲ್ಲಿದ್ದಾರೆ. ಇವರ ಜೊತೆಗೆ ಯಶಸ್ವಿ ಜೈಸ್ವಾಲ್, ಪ್ರಿಯಾಂಶು ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಅವರಂತಹ ಆಟಗಾರರು ಕೂಡ ಓಪನರ್ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಗಿಲ್‌ಗೆ ಎಲ್ಲಿ ಅವಕಾಶ ನೀಡುವುದು ಎಂಬುದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿತ್ತು.

ಆಯ್ಕೆ ಸಮಿತಿಗೆ ಇದೆ ಗಿಲ್ ಬಗ್ಗೆ ಆತಂಕ

ಮೂರು ಮಾದರಿಗಳಲ್ಲಿ ನಿರಂತರವಾಗಿ ಆಡುವುದು ಗಿಲ್ ಅವರ ಫಿಟ್‌ನೆಸ್‌ ಮೇಲೆ ಪರಿಣಾಮ ಬೀರಬಹುದು ಎಂದು ಆಯ್ಕೆ ಸಮಿತಿಗೆ ಆತಂಕವಿದೆ. ಮುಂದಿನ 18 ತಿಂಗಳ ಭಾರತ ತಂಡದ ವೇಳಾಪಟ್ಟಿ ನೋಡಿದರೆ, ಒಬ್ಬ ಆಟಗಾರ ಮೂರೂ ಮಾದರಿಗಳಲ್ಲಿ ಒಂದೇ ರೀತಿ ಮಿಂಚುವುದು ಅಸಾಧ್ಯ. ಮುಂದಿನ ಎರಡು ವರ್ಷಗಳಲ್ಲಿ, 2027ರ ವಿಶ್ವಕಪ್‌ಗೂ ಮುನ್ನ ಗಿಲ್ 9 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ಮತ್ತು ಸುಮಾರು 35 ಏಕದಿನ ಪಂದ್ಯಗಳನ್ನು ಆಡಬೇಕಿದೆ. ಈ ಎರಡು ಪ್ರಮುಖ ಐಸಿಸಿ ಟೂರ್ನಿಗಳಿಗೆ ಗಿಲ್ ಸಂಪೂರ್ಣ ಫಿಟ್ ಆಗಿರಬೇಕು ಎಂಬ ಬಗ್ಗೆ ಸ್ಪಷ್ಟ ಮಾತುಕತೆ ನಡೆದಿದೆ. ಇದರ ಜೊತೆಗೆ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನೂ ಅವರು ಮುನ್ನಡೆಸಬೇಕಿದೆ.

2025-27ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸದ್ಯ ಭಾರತ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಈ ಆವೃತ್ತಿಯಲ್ಲಿ ಮೂರು ಪ್ರಮುಖ ಟೆಸ್ಟ್ ಸರಣಿ ಆಡುವುದು ಬಾಕಿ ಇದೆ. ಇನ್ನು ಶುಭ್‌ಮನ್ ಗಿಲ್ ಏಕದಿನ ತಂಡದ ನಾಯಕರಾದ ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರು ಸರಣಿ ಸೋತಿದೆ. ಹೀಗಾಗಿ ಗಿಲ್‌ ಏಕದಿನ ಹಾಗೂ ಟೆಸ್ಟ್‌ನತ್ತ ಗಮನ ಹರಿಸಲು ಬಿಸಿಸಿಐ ಆಯ್ಕೆ ಸಮಿತಿ ಸೂಚಿಸಿದೆ ಎಂದು ವರದಿಯಾಗಿದೆ.

ಸದ್ಯಕ್ಕೆ ಬಿಸಿಸಿಐನ ಟಿ20 ಯೋಜನೆಗಳಲ್ಲಿ ಗಿಲ್ ಇಲ್ಲದಿದ್ದರೂ, ಅವರನ್ನು ಸಂಪೂರ್ಣವಾಗಿ ಈ ಮಾದರಿಯಿಂದ ಹೊರಗಿಡಲಾಗಿದೆ ಎಂದರ್ಥವಲ್ಲ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಗಿಲ್ ಮತ್ತೆ ಟಿ20 ತಂಡಕ್ಕೆ ಮರಳುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡ ಹೀಗಿದೆ:

ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ(ಉಪನಾಯಕ),ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್‌, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.