ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ. ಸಾಯಿ ಸುದರ್ಶನ್ (81) ಮತ್ತು ರಿಷಭ್ ಪಂತ್ (50*) ಕೂಡ ಉಪಯುಕ್ತ ಕಾಣಿಕೆ ನೀಡಿದರು.

ಮುಲ್ಲಾನ್‌ಪುರ: ಕನ್ನಡಿಗ ಕೆ.ಎಲ್‌.ರಾಹುಲ್‌ ಹಾಗೂ ನಾಯಕ ಶುಭ್‌ಮನ್‌ ಗಿಲ್‌ ಭರ್ಜರಿ ಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನವೇ ಮೇಲುಗೈ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 3 ವಿಕೆಟ್‌ ನಷ್ಟದಲ್ಲಿ 368 ರನ್‌ ಕಲೆಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಹುಲ್-ಗಿಲ್ ಭರ್ಜರಿ ಶತಕ

ಮೊದಲ ವಿಕೆಟ್‌ಗೆ ರಾಹುಲ್‌-ಯಶಸ್ವಿ ಜೈಸ್ವಾಲ್‌ 41 ರನ್‌ ಸೇರಿಸಿದರು. ಜೈಸ್ವಾಲ್‌ 24 ರನ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ ರಾಹುಲ್‌-ಸಾಯಿ ಸುದರ್ಶನ್‌ ಜೋಡಿ 139 ರನ್‌ ಜೊತೆಯಾಟವಾಡಿತು. ಈ ಜೋಡಿ ಒಂದೂವರೆ ಅವಧಿ ಆಫ್ಘನ್‌ ಬೌಲರ್‌ಗಳ ಬೆವರಿಳಿಸಿತು. ಇಬ್ಬರೂ ಶತಕದ ನಿರೀಕ್ಷೆಯಲ್ಲಿದ್ದರೂ, ಸಾಯಿ ಸುದರ್ಶನ್‌ 81 ರನ್‌ಗೆ ವಿಕೆಟ್‌ ಒಪ್ಪಿಸಿದರು. ಟೆಸ್ಟ್‌ನಲ್ಲಿ 12ನೇ ಶತಕ ಪೂರೈಸಿದ ರಾಹುಲ್‌, ಮುಂದಿನ ಎಸೆತದಲ್ಲೇ ಔಟಾದರು. ಅವರು 165 ಎಸೆತಗಳಲ್ಲಿ 100 ರನ್‌ ಸಿಡಿಸಿದರು. ಮತ್ತೊಂದೆಡೆ ಶುಭ್‌ಮನ್‌ ಕೂಡಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅವರು 143 ಎಸೆತಗಳಲ್ಲಿ ಔಟಾಗದೆ 103 ರನ್‌ ಗಳಿಸಿದ್ದು, ರಿಷಭ್‌ ಪಂತ್‌(ಔಟಾಗದೆ 50) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇವರಿಬ್ಬರು ಮುರಿಯದ 4ನೇ ವಿಕೆಟ್‌ಗೆ 121 ರನ್‌ ಜೊತೆಯಾಟವಾಡಿದ್ದಾರೆ. ಮೊಹಮ್ಮದ್ ಸಲೀಂ 2 ವಿಕೆಟ್ ಪಡೆದರು.

ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 368/3 (ಮೊದಲ ದಿನದಂತ್ಯಕ್ಕೆ) (ಗಿಲ್‌ ಔಟಾಗದೆ 103, ರಾಹುಲ್‌ 100, ಸುದರ್ಶನ್‌ 81, ರಿಷಭ್‌ ಔಟಾಗದೆ 50, ಸಲೀಂ 2-67)

ತಂಡದಲ್ಲಿ ಗುಜರಾತ್‌ ಟೈಟಾನ್ಸ್‌ನ 6 ಮಂದಿ

ಭಾರತದ ಆಡುವ 11ರ ಬಳಗದಲ್ಲಿ ಐಪಿಎಲ್‌ನ ಗುಜರಾತ್‌ ಟೈಟಾನ್ಸ್‌ ತಂಡದ 6 ಆಟಗಾರರಿದ್ದಾರೆ. ನಾಯಕ ಗಿಲ್‌, ಸುದರ್ಶನ್‌, ವಾಷಿಂಗ್ಟನ್‌ ಸುಂದರ್‌, ಸಿರಾಜ್‌, ಪ್ರಸಿದ್ಧ್‌ ಕೃಷ್ಣ ತಂಡದಲ್ಲಿದ್ದಾರೆ. ಜೊತೆಗೆ, ಮಾನವ್‌ ಸುತಾರ್ ಈ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು.

--06 ಶತಕ

ಭಾರತ ಟೆಸ್ಟ್‌ ತಂಡದ ನಾಯಕನಾಗಿ ಗಿಲ್‌ 6ನೇ ಶತಕ ಬಾರಿಸಿದರು. ಇದು 5ನೇ ಗರಿಷ್ಠ. ವಿರಾಟ್‌ ಕೊಹ್ಲಿ 20 ಶತಕ ಸಿಡಿಸಿದ್ದಾರೆ.

06 ದೇಶ

ರಾಹುಲ್‌ ಟೆಸ್ಟ್‌ನಲ್ಲಿ 6 ದೇಶದ ವಿರುದ್ಧ ಶತಕ. ಇಂಗ್ಲೆಂಡ್‌(5), ದ.ಆಫ್ರಿಕಾ(2), ವಿಂಡೀಸ್(2), ಶ್ರೀಲಂಕಾ(1), ಆಸ್ಟ್ರೇಲಿಯಾ(1), ಆಫ್ಘನ್(1) ವಿರುದ್ಧ ಸಾಧನೆ.