ಆಸ್ಟ್ರೇಲಿಯಾ ಎದುರಿನ ಸರಣಿಗೆ ಆರ್ ಅಶ್ವಿನ್‌ಗೆ ಮಣೆ ಹಾಕಿದ ಆಯ್ಕೆ ಸಮಿತಿಏಕದಿನ ವಿಶ್ವಕಪ್‌ಗೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿ ಮಾಸ್ಟರ್ ಪ್ಲಾನ್ಮೂರು ಪಂದ್ಯಗಳ ಸರಣಿಯಲ್ಲಿ ಅನುಭವಿ ಆಫ್‌ಸ್ಪಿನ್ನರ್‌ಗೆ ಸ್ಥಾನ

ನವದೆಹಲಿ(ಸೆ.20): ಏಕದಿನ ವಿಶ್ವಕಪ್‌ಗೆ ಈಗಾಗಲೇ ಭಾರತ ತಂಡ ಪ್ರಕಟಗೊಂಡಿದ್ದರೂ, ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಲು ಸೆಪ್ಟೆಂಬರ್ 28ರ ವರೆಗೂ ಅವಕಾಶವಿದೆ. ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರುವ ಕೊನೆಯ ದ್ವಿಪಕ್ಷೀಯ ಸರಣಿಗೆ ತಂಡ ಪ್ರಕಟಗೊಂಡಿದ್ದು, ಹಿರಿಯ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಆರ್‌.ಅಶ್ವಿನ್‌ಗೆ ಅಚ್ಚರಿಯ ರೀತಿಯಲ್ಲಿ ಸ್ಥಾನ ದೊರೆತಿದೆ.

ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್‌-4 ಹಂತದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಗಾಯಗೊಂಡಿದ್ದು, ಅಶ್ವಿನ್‌ಗೆ ವರದಾನವಾಗಿ ಪರಿಣಮಿಸಿದೆ. ಸೆ.28ರ ವೇಳೆಗೆ ಅಕ್ಷರ್‌ ಸಂಪೂರ್ಣ ಫಿಟ್‌ ಆಗದಿದ್ದರೆ, ಅಶ್ವಿನ್‌ರನ್ನು ವಿಶ್ವಕಪ್‌ ತಂಡಕ್ಕೆ ಸೇರ್ಪಡೆಗೊಳಿಸುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಕೆಲ ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ಗಷ್ಟೇ ಸೀಮಿತಗೊಂಡಿರುವ ಅಶ್ವಿನ್‌, ಕೊನೆಯ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದು 2022ರ ಜನವರಿಯಲ್ಲಿ. ಆದರೂ ಅವರು ಅನುಭವವನ್ನು ಪರಿಗಣಿಸಿ ಆಯ್ಕೆಗೆ ಪರಿಗಣಿಸುವ ಸುಳಿವನ್ನು ಬಿಸಿಸಿಐ ಆಯ್ಕೆಗಾರರು ನೀಡಿರುವುದಾಗಿ ಕಂಡು ಬರುತ್ತಿದೆ.

ವಿಶ್ವಕಪ್‌ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆ..! BCCI ಮಾಸ್ಟರ್ ಪ್ಲಾನ್‌ಗೆ ಆಸೀಸ್ ಪಾಳಯದಲ್ಲಿ ನಡುಕ

ಅಶ್ವಿನ್‌ ಭರ್ಜರಿ ಸಿದ್ಧತೆ: ವಿಶ್ವಕಪ್‌ ತಂಡಕ್ಕೆ ಸೇರಿಕೊಳ್ಳುವಂತೆ ಕರೆ ಬರಬಹುದು ಎನ್ನುವ ನಿರೀಕ್ಷೆ ಅಶ್ವಿನ್‌ಗೆ ಇತ್ತು ಎಂದು ಕಾಣುತ್ತದೆ. ಇದೇ ಕಾರಣದಿಂದಾಗಿ 10 ದಿನಗಳ ಹಿಂದೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ಆಗಮಿಸಿ ಅಭ್ಯಾಸ ಆರಂಭಿಸಿದ್ದರು. ಸದ್ಯ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಅಯೋಜಿಸಿರುವ ಟೂರ್ನಿಯಲ್ಲಿ ಆಡುತ್ತಿರುವ ಅಶ್ವಿನ್‌, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಾವಿನ್ನೂ ಏಕದಿನ ತಂಡಕ್ಕೆ ಅವಶ್ಯಕ ಎನ್ನುವುದನ್ನು ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ.

ಅಶ್ವಿನ್‌ ಆಯ್ಕೆಯನ್ನು ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಸಮರ್ಥಿಸಿಕೊಂಡಿದ್ದಾರೆ. ಅಶ್ವಿನ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವ ಸುಳಿವನ್ನು ನಾಯಕ ರೋಹಿತ್‌ ಶರ್ಮಾ ನೀಡಿದ್ದಾರೆ. ‘ಅಶ್ವಿನ್‌ ಏಕದಿನ ಕ್ರಿಕೆಟ್‌ ಆಡಿ 18 ತಿಂಗಳಾಗಿದೆ ನಿಜ. ಆದರೆ ಅವರೊಬ್ಬ ಅನುಭವಿ ಆಟಗಾರ. ಅವರು ಕ್ರಿಕೆಟ್‌ನಿಂದಂತೂ ದೂರವಿಲ್ಲ. ಟೆಸ್ಟ್‌ ತಂಡದ ಕಾಯಂ ಸದಸ್ಯರಾಗಿರುವ ಅವರು, ತಮಿಳುನಾಡು ಪ್ರೀಮಿಯರ್‌ ಲೀಗ್‌(ಟಿಎನ್‌ಪಿಎಲ್‌)ನಲ್ಲಿ ಆಡಿದ್ದಾರೆ. ಸಮಯ ಸಿಕ್ಕಾಗಿ ದೇಸಿ ಪಂದ್ಯಗಳಲ್ಲೂ ಪಾಲ್ಗೊಳ್ಳುತ್ತಾರೆ. ಅವರ ತಲೆಯಲ್ಲಿ ಸದಾ ಕ್ರಿಕೆಟ್‌ ಕುರಿತಾದ ವಿಚಾರಗಳೇ ಓಡುತ್ತಿರುತ್ತವೆ’ ಎಂದು ರೋಹಿತ್‌ ಹೇಳಿದ್ದಾರೆ.

ಮೊದಲ ಎರಡು ಪಂದ್ಯಕ್ಕಿಲ್ಲ ರೋಹಿತ್‌

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಸೆ.22ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಏಷ್ಯಾಕಪ್‌ ವಿಜೇತ ಭಾರತ ತಂಡದಲ್ಲಿದ್ದ ಕೆಲ ಹಿರಿಯ ಆಟಗಾರರಿಗೆ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಕುಲ್ದೀಪ್‌ ಯಾದವ್‌ ಮೊದಲೆರಡು ಪಂದ್ಯಗಳಲ್ಲಿ ಆಡುವುದಿಲ್ಲ. 3ನೇ ಪಂದ್ಯಕ್ಕೆ ಪೂರ್ಣ ಬಲದ ತಂಡ ಆಯ್ಕೆ ಮಾಡಲಾಗಿದೆ.

ಭಾರತ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಅ.8ರಂದು ಆಸ್ಟ್ರೇಲಿಯಾ ವಿರುದ್ಧವೇ ಆಡಲಿರುವ ಕಾರಣ, ಸರಣಿಯಲ್ಲಿ ಕುಲ್ದೀಪ್‌ರನ್ನು ಹೆಚ್ಚಾಗಿ ಬಳಸದಂತೆ ಭಾರತ ಎಚ್ಚರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡ ಮುನ್ನಡೆಸಲಿರುವ ಋತುರಾಜ್‌ ಗಾಯಕ್ವಾಡ್‌, ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಏಷ್ಯಾಡ್‌ನಲ್ಲಿ ಆಡಲಿರುವ ತಂಡ ಸೆ.27ರಂದು ಚೀನಾಕ್ಕೆ ಪ್ರಯಾಣಿಸಲಿದ್ದು, ಋತುರಾಜ್‌ ಸೆ.25ರಂದು ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ತಲುಪಿದೆ, ಸಿರಾಜ್‌ಗೆ ಥಾರ್ ಕಾರು ಗಿಫ್ಟ್ ಕೊಡಿ ಫ್ಯಾನ್ಸ್ ಮನವಿಗೆ ಆನಂದ್ ಮಹೀಂದ್ರ ಉತ್ತರ ವೈರಲ್!

ಸೆ.22ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಸೆ.24ರಂದು ಇಂದೋರ್‌, ಸೆ.27ರಂದು ರಾಜ್‌ಕೋಟ್‌ ಕ್ರಮವಾಗಿ 2 ಹಾಗೂ 3ನೇ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಮೊದಲೆರಡು ಪಂದ್ಯಗಳಿಗೆ ತಂಡ: ಕೆ.ಎಲ್.ರಾಹುಲ್‌(ನಾಯಕ), ರವೀಂದ್ರ ಜಡೇಜಾ(ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ಆರ್.ಅಶ್ವಿನ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ.

3ನೇ ಏಕದಿನಕ್ಕೆ ತಂಡ: ರೋಹಿತ್‌ ಶರ್ಮಾ(ನಾಯಕ), ಹಾರ್ದಿಕ್‌ ಪಾಂಡ್ಯ(ಉಪನಾಯಕ), ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್‌ ಯಾದವ್‌, ಕೆ.ಎಲ್‌.ರಾಹುಲ್‌, ಇಶಾನ್‌ ಕಿಶನ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಪಟೇಲ್‌*, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್ ಯಾದವ್‌, ಆರ್‌.ಅಶ್ವಿನ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌.

*ಅಕ್ಷರ್‌ ಫಿಟ್ನೆಸ್‌ ಪರೀಕ್ಷೆ ಪಾಸಾದರಷ್ಟೇ ತಂಡದಲ್ಲಿ ಸ್ಥಾನ.