ವಿನೋದ್ ಕಾಂಬ್ಳಿಯ ಪತ್ನಿ ಅವನ ವಿರುದ್ಧ ಪೊಲೀಸ್ ಮೊರೆ ಹೋದದ್ದೇಕೆ?
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಜೀವನ ವಿವಾದಗಳಿಂದ ತುಂಬಿದೆ. ಕುಡಿತದ ಚಟ, ಮತ್ತು ಆರ್ಥಿಕ ಸಂಕಷ್ಟಗಳಿಂದ ಸುದ್ದಿಯಲ್ಲಿದ್ದಾರೆ. ಒಮ್ಮೆ ಸಚಿನ್ ತೆಂಡುಲ್ಕರ್ ಅವರ ಆಪ್ತ ಮಿತ್ರರಾಗಿದ್ದ ಕಾಂಬ್ಳಿ ಅವರ ಪತ್ನಿ ನೀಡಿದ ಪೊಲೀಸ್ ದೂರಿನಿಂದಲೂ ಒಮ್ಮೆ ವಿವಾದಕ್ಕೆ ಒಳಗಾಗಿದ್ದರು.
ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಇದೀಗ ಸ್ವಲ್ಪ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವೇದಿಕೆ ಮೇಲೆ ತಮ್ಮ ಬಾಲ್ಯದ ಸಂಗಾತಿ ಸಚಿನ್ ತೆಂಡುಲ್ಕರ್ ಅವರನ್ನು ಗುರುತಿಸಲಾಗದೆ ಹೋದದ್ದು ವೈರಲ್ ಆಗಿತ್ತು. ಇಂಥ ವಿನೋದ್ ಕಾಂಬ್ಳಿ ಕುಡಿದು ಕುಡಿದೇ ಜೀವನ ಹಾಳು ಮಾಡಿಕೊಂಡರು. ಒಮ್ಮೆ ಈತನ ಪತ್ನಿ ಈತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿದ್ದಳು.
ಕಾಂಬ್ಳಿ ಎರಡು ಬಾರಿ ಮದುವೆಯಾಗಿದ್ದಾರೆ. ಅವರ ಮೊದಲ ಹೆಂಡತಿಯ ಹೆಸರು ನೋಯೆಲ್ಲಾ ಲೂಯಿಸ್. ಅವರು ಪುಣೆಯ ಹೋಟೆಲ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದರು. ಲೆವಿಸ್‌ಗೆ ವಿಚ್ಛೇದನ ನೀಡಿದ ನಂತರ ವಿನೋದ್, ವೃತ್ತಿಯಲ್ಲಿ ಮಾಡೆಲ್ ಆಗಿರುವ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ವಿನೋದ್ ಕಾಂಬ್ಳಿ ಮತ್ತು ಆಂಡ್ರಿಯಾ ಹೆವಿಟ್ 2014ರಲ್ಲಿ ಬಾಂದ್ರಾದ ಹಿಲ್ ರೋಡ್‌ನಲ್ಲಿರುವ ಸೇಂಟ್ ಪೀಟರ್ಸ್ ಚರ್ಚ್‌ನಲ್ಲಿ ವಿವಾಹವಾದರು. ವಿನೋದ್ ಕಾಂಬ್ಳಿ ಮತ್ತು ಆಂಡ್ರಿಯಾ ಹೆವಿಟ್ ಅವರಿಗೆ ಒಬ್ಬ ಮಗ ಮತ್ತು ಮುದ್ದಾದ ಮಗಳು ಇದ್ದಾರೆ. ದಂಪತಿಗಳು ಮಗನಿಗೆ ಜೀಸಸ್ ಕ್ರಿಸ್ಟಿಯಾನೋ ಕಾಂಬ್ಲಿ ಮತ್ತು ಮಗಳಿಗೆ ಜೋಹಾನ್ನಾ ಕ್ರಿಸ್ಟಿಯಾನೋ ಎಂದು ಹೆಸರಿಸಿದ್ದಾರೆ.
ಆಂಡ್ರಿಯಾ ಹೆವಿಟ್ ಅತ್ಯಂತ ಜನಪ್ರಿಯ ರೂಪದರ್ಶಿಯಾಗಿದ್ದಳು. ಆಕೆಯ ಚಿತ್ರಗಳು ಜಾಹೀರಾತಿಗಾಗಿ ನಿಯತಕಾಲಿಕೆಗಳ ಮುಖಪುಟಗಳನ್ನು ಅಲಂಕರಿಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ತನ್ನನ್ನು ಸಂಪೂರ್ಣವಾಗಿ ಮಾಡೆಲಿಂಗ್‌ನಿಂದ ಆಚೆಗಿಟ್ಟುಕೊಂಡಳು. ಆಂಡ್ರಿಯಾ ಹೆವಿಟ್ ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ತನಿಷ್ಕ್ ಆಭರಣ ಬ್ರಾಂಡ್‌ನೊಂದಿಗೆ ಪ್ರಾರಂಭಿಸಿದಳು. ನಂತರ ಮುಂಬೈನಲ್ಲಿ ಸೌಂದರ್ಯ ಸಲಹೆಗಾರರಾಗಿ ದೀರ್ಘಕಾಲ ಕೆಲಸ ಮಾಡಿದರು.
ಆಂಡ್ರಿಯಾ ಹೆವಿಟ್ ಅವರು ವಿನೋದ್ ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸರಿಗೆ ಒಮ್ಮೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದರು. ಯಾಕೆಂದರೆ ಕಾಂಬ್ಳಿ ಕುಡಿದು ಮನೆಗೆ ಬಂದು ಅಡುಗೆ ಪ್ಯಾನ್‌ನಿಂದ ಪತ್ನಿಯ ತಲೆಗೆ ಹೊಡೆದಿದ್ದ. ಘಟನೆಯ ನಂತರ ಆಂಡ್ರಿಯಾ ತನ್ನ ತಲೆಗೆ ಆದ ಗಾಯಗಳಿಗೆ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಳು. ನಂತರ ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ ಕಾಂಬ್ಳಿ ವಿರುದ್ಧ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು) ಮತ್ತು ಸೆಕ್ಷನ್ 504 (ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು.
ಘಟನೆ ನಡೆದಿದ್ದು ಹೀಗೆ- ಕಾಂಬ್ಳಿ ಕುಡಿದ ಅಮಲಿನಲ್ಲಿ ಬಾಂದ್ರಾ ಫ್ಲಾಟ್‌ಗೆ ಪ್ರವೇಶಿಸಿ ಪತ್ನಿಯ ಮೇಲೆ ಕೈ ಮಾಡಿದ್ದ. ಕಾಂಬ್ಳಿಯ 12 ವರ್ಷದ ಮಗ ಇಡೀ ಘಟನೆಗೆ ಸಾಕ್ಷಿ. ಕೋಪಗೊಂಡ ಕಾಂಬ್ಳಿ ಅಡುಗೆಮನೆಗೆ ಹೋಗಿ ಅಡುಗೆ ಕಾವಲಿಯನ್ನು ತಂದು ಆಂಡ್ರಿಯಾ ಮೇಲೆ ಎಸೆದಿದ್ದ. ಇದರಿಂದ ಆಕೆಯ ತಲೆಗೆ ಗಾಯವಾಯಿತು. ಕಾಂಬ್ಳಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಶಾಂತನಾಗಲಿಲ್ಲ. ಅವನು ನನ್ನನ್ನು ಮತ್ತು ನನ್ನ ಮಗನನ್ನು ಯಾವುದೇ ಕಾರಣವಿಲ್ಲದೆ ನಿಂದಿಸಿದ್ದಾನೆ. ಅಡುಗೆ ಪ್ಯಾನ್‌ನಿಂದ ಹೊಡೆದ ನಂತರ, ಬ್ಯಾಟ್‌ನಿಂದ ಮತ್ತೊಮ್ಮೆ ಬಾರಿಸಿದ. ನನ್ನ ಮಗನೊಂದಿಗೆ ನಾನು ಹೊರಗೆ ಬಂದು ಆಸ್ಪತ್ರೆಗೆ ಧಾವಿಸಿದೆ ಎಂದು ಆಂಡ್ರಿಯಾ ಎಫ್‌ಐಆರ್‌ನಲ್ಲಿ ದಾಖಲಿಸಿದ್ದಳು.
ಅದೇ ದಿನ ಮಧ್ಯಾಹ್ನ ಕಾಂಬ್ಳಿ ಕೂಡ ತನ್ನ ಫ್ಲಾಟ್‌ನಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಗಾಯದ ಬಗ್ಗೆ ಕೇಳಿದಾಗ, ಕಾಂಬ್ಳಿ ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡಿದುದು ಗೊತ್ತಾಯಿತು.
ಗೆಳೆಯ ಸಚಿನ್‌ನಿಂದ ನಿರಾಸೆಗೊಂಡ ಕಾಂಬ್ಳಿ ನೆರವಿಗೆ ನಿಂತ ವಿಶ್ವಕಪ್ ವಿಜೇತ ನಾಯಕ!
ನಕಾರಾತ್ಮಕ ಕಾರಣಗಳಿಗಾಗಿ ಕಾಂಬ್ಳಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ಕುಡಿದು ವಾಹನ ಚಲಾಯಿಸಿದ ಎರಡು ಘಟನೆಗಳಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿಂದೆ ತಮ್ಮ ಸೇವಕಿಯ ಮೇಲೂ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿತ್ತು. ಕಳೆದ ವರ್ಷ ಕಾಂಬ್ಳಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಸಂಪರ್ಕಿಸಿ, ಕೆಲಸ ಕೊಡಿ ಎಂದು ಕೇಳಿಕೊಂಡ. ಕೆಲಸ ನೀಡಿದರೆ ಕುಡಿತ ಬಿಡುವುದಾಗಿ ಹೇಳಿದ್ದ. ಸದ್ಯ BCCIಯಿಂದ ಪಡೆಯುವ ರೂ. 30,000 ಮಾಸಿಕ ಪಿಂಚಣಿಯಲ್ಲಿ ಕಾಂಬ್ಳಿ ಮತ್ತು ಕುಟುಂಬ ಬದುಕುತ್ತಿದೆಯಂತೆ.
ಗೆಳೆಯನಿಂದ ವಿನೋದ್ ಕಾಂಬ್ಳಿ ಪರಿಸ್ಥಿತಿ ಬಹಿರಂಗ, ನೆರವಿಗೆ ನಿಂತ 1983ರ ವಿಶ್ವಕಪ್ ತಂಡ!