ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳ ಸೋಲು ಅನುಭವಿಸಿತು. ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ ಹೊರತಾಗಿಯೂ, ಪ್ರಭ್‌ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅದ್ಭುತ ಜೊತೆಯಾಟದಿಂದ ಪಂಜಾಬ್ ಸುಲಭವಾಗಿ ಗುರಿ ತಲುಪಿತು. ಈ ಸೋಲಿನೊಂದಿಗೆ ಮುಂಬೈ ಸತತ 4ನೇ ಸೋಲನ್ನು ಕಂಡಿದೆ.

ಮುಂಬೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಬಾರಿ ಐಪಿಎಲ್‌ನಲ್ಲಿ ಸತತ 4ನೇ ಸೋಲನುಭವಿಸಿದೆ. ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮುಂಬೈಗೆ 7 ವಿಕೆಟ್‌ ಸೋಲು ಎದುರಾಯಿತು. 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದ ಪಂಜಾಬ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Add Asianetnews Kannada as a Preferred SourcegooglePreferred

ಭರ್ಜರಿ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್

ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ, ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್‌ ಗಳಿಸಿತು. ಡಿ ಕಾಕ್‌, ನಮನ್‌ಧೀರ್‌ ಹೊರತುಪಡಿಸಿ ಇತರ ಬ್ಯಾಟರ್‌ಗಳ ಕಳಪೆ ಪ್ರದರ್ಶನ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಹೀಗಾಗಿ ತಂಡ 200ರ ಗಡಿ ದಾಟಲಿಲ್ಲ. ಡಿ ಕಾಕ್‌ 60 ಎಸೆತಕ್ಕೆ 112 ರನ್‌ ಸಿಡಿಸಿದರೆ, ನಮನ್‌ಧೀರ್‌ 31 ಎಸೆತಗಳಲ್ಲಿ 50 ರನ್‌ ಬಾರಿಸಿದರು. ಅರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌ ಕಿತ್ತರು.

ಅನಾಯಾಸವಾಗಿ ಗೆಲುವು ದಾಖಲಿಸಿದ ಪಂಜಾಬ್

ಮುಂಬೈ ನೀಡಿದ 196ರ ಗುರಿ ಪಂಜಾಬ್‌ಗೆ ಕಷ್ಟವಾಗಲಿಲ್ಲ. ಪ್ರಭ್‌ಸಿಮ್ರನ್‌ ಸಿಂಗ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತೆ ತಂಡಕ್ಕೆ ಆಸರೆಯಾದರು. ಈ ಜೋಡಿ 3ನೇ ವಿಕೆಟ್‌ಗೆ 66 ಎಸೆತಗಳಲ್ಲಿ 139 ರನ್‌ ಜೊತೆಯಾಟವಾಡಿತು. ಶ್ರೇಯಸ್‌ 35 ಎಸೆತಕ್ಕೆ 66 ರನ್‌ ಸಿಡಿಸಿ ಔಟಾದರೂ ಪ್ರಭ್‌ಸಿಮ್ರನ್‌ 39 ಎಸೆತಗಳಲ್ಲಿ ಔಟಾಗದೆ 80 ರನ್‌ ಗಳಿಸಿ, ತಂಡವನ್ನು 16.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಮುಂಬೈ 20 ಓವರ್‌ಗಳಲ್ಲಿ 195/6 (ಡಿ ಕಾಕ್‌ ಔಟಾಗದೆ 112, ನಮನ್‌ಧೀರ್‌ 50, ಅರ್ಶ್‌ದೀಪ್‌ 3-22), ಪಂಜಾಬ್‌ 16.3 ಓವರ್‌ಗಳಲ್ಲಿ 198/3 (ಪ್ರಭ್‌ಸಿಮ್ರನ್ ಔಟಾಗದೆ 80, ಶ್ರೇಯಸ್‌ 66, ಘಜಾನ್ಫರ್‌ 2-31)

18 ಗೆಲುವು: ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಪಂಜಾಬ್‌ ಜಂಟಿ ಅಗ್ರಸ್ಥಾನಕ್ಕೇರಿಕೆ. ಸಿಎಸ್‌ಕೆ, ಪಂಜಾಬ್ ತಲಾ 18ರಲ್ಲಿ ಗೆದ್ದಿವೆ.

ಮುಂಬೈ ಆಟಗಾರರಿಗೆ ಇನ್ನು ವಾರ್ಷಿಕ ವೇತನ

ಮುಂಬೈ: ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌(ಎಂಸಿಎ) ತನ್ನ ಆಟಗಾರರಿಗೆ ವಾರ್ಷಿಕ ಸಂಭಾವನೆ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ಈ ಕ್ರಮ ಕೈಗೊಂಡ ಮೊದಲ ರಾಜ್ಯ ಕ್ರಿಕೆಟ್‌ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಂಸಿಎ ತನ್ನ ‘ಎ’ ದರ್ಜೆ ಆಟಗಾರರಿಗೆ ವಾರ್ಷಿಕ ₹12 ಲಕ್ಷದಿಂದ ₹20 ಲಕ್ಷ, ‘ಬಿ’ ದರ್ಜೆ ಆಟಗಾರರಿಗೆ ₹8 ಲಕ್ಷದಿಂದ ₹12 ಲಕ್ಷ ಹಾಗೂ ‘ಸಿ’ ದರ್ಜೆ ಆಟಗಾರರಿಗೆ ₹8 ಲಕ್ಷದವರೆಗೆ ವೇತನ ನೀಡುವುದಾಗಿ ಘೋಷಿಸಿದೆ. ಕಳೆದ 2 ಋತುಗಳಲ್ಲಿ ಟೀಂ ಇಂಡಿಯಾ ಪರ ಆಡದ, ಐಪಿಎಲ್‌ನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗದ ಮುಂಬೈ ಆಟಗಾರರು ಈ ಸೌಲಭ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಆಟಗಾರರು ಎಂಸಿಎಯಲ್ಲಿ ನೋಂದಣಿ ಮಾಡಿಕೊಂಡಿರಬೇಕು, ಕನಿಷ್ಠ ಫಿಟ್‌ನೆಸ್ ಮಾನದಂಡವನ್ನು ಪೂರೈಸಿರಬೇಕು ಎಂದು ಎಂಸಿಎ ತಿಳಿಸಿದೆ.